ಕಳೆದ ಹನ್ನೊಂದು ವರ್ಷಗಳಿಂದ ದೇಶದ ಪ್ರಧಾನಿಯಾಗಿ ಮೋದಿ ಅವರು 8 ಸಾವಿರ ಕೋಟಿ ರು. ವೆಚ್ಚದಲ್ಲಿ ವಿಮಾನದ ಮೂಲಕ ಪ್ರಪಂಚ ಪರ್ಯಟನೆ ಮಾಡಿದ್ದೇ ದೊಡ್ಡ ಸಾಧನೆ. ದೇಶದ ಯಾವೊಬ್ಬ ಪ್ರಧಾನಿಯೂ ವಿಮಾನ ಪ್ರಯಾಣಕ್ಕೆ ಇಷ್ಟೊಂದು ವೆಚ್ಚ ಮಾಡಿರಲಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಯುಪಿಎ ಸರ್ಕಾರದಲ್ಲಿ ಪ್ರಧಾನಮಂತ್ರಿಯಾಗಿದ್ದ ಡಾ.ಮನಮೋಹನ್‌ಸಿಂಗ್ ಅಧಿಕಾರ ಬಿಡುವ ಸಮಯದಲ್ಲಿ ದೇಶದ ಮೇಲೆ 56 ಲಕ್ಷ ಕೋಟಿ ರು. ಸಾಲ ಇತ್ತು. ಕಳೆದ 11 ವರ್ಷದಲ್ಲಿ 300 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ದೇಶದ ಅರ್ಥವ್ಯವಸ್ಥೆ ಅಧೋಗತಿಗೆ ಇಳಿಯುತ್ತಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆತಂಕ ವ್ಯಕ್ತಪಡಿಸಿದರು.ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಮಂಗಳವಾರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಸಮಾವೇಶ ಹಾಗೂ ನರೇಗಾ ಬಚೋವೋ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ಹನ್ನೊಂದು ವರ್ಷಗಳಿಂದ ದೇಶದ ಪ್ರಧಾನಿಯಾಗಿ ಮೋದಿ ಅವರು 8 ಸಾವಿರ ಕೋಟಿ ರು. ವೆಚ್ಚದಲ್ಲಿ ವಿಮಾನದ ಮೂಲಕ ಪ್ರಪಂಚ ಪರ್ಯಟನೆ ಮಾಡಿದ್ದೇ ದೊಡ್ಡ ಸಾಧನೆ. ದೇಶದ ಯಾವೊಬ್ಬ ಪ್ರಧಾನಿಯೂ ವಿಮಾನ ಪ್ರಯಾಣಕ್ಕೆ ಇಷ್ಟೊಂದು ವೆಚ್ಚ ಮಾಡಿರಲಿಲ್ಲ. ಮೋದಿ ಪ್ರಧಾನಿಯಾಗುವ ಮುನ್ನ ಡೀಸೆಲ್, ಪೆಟ್ರೋಲ್, ಗ್ಯಾಸ್ ಎಷ್ಟಿತ್ತು. 1 ಲಕ್ಷ ಕೋಟಿ ಸಬ್ಸಿಡಿ ಕೊಡುವ ಮೂಲಕ ಡೀಸೆಲ್, ಗ್ಯಾಸ್‌ಅನ್ನು ಕಡಿಮೆ ದರಕ್ಕೆ ನೀಡುತ್ತಿದ್ದರು. ಆದರೆ, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕುಸಿದಿದ್ದರೂ ಬೆಲೆ ಮಾತ್ರ ಇಳಿಕೆಯಾಗುತ್ತಿಲ್ಲ. ಎಲ್ಲಾ ಬೆಲೆಗಳು ಗಗನಮುಖಿಯಾಗಿವೆ. ಇದು ಬಿಜೆಪಿ ಜನವಿರೋಧಿ ಆಡಳಿತಕ್ಕೆ ಸಾಕ್ಷಿ ಎಂದರು.ಸ್ಥಳೀಯವಾಗಿ ಧರ್ಮ, ಜಾತಿಗಳ ನಡುವೆ ಸಂಘರ್ಷವನ್ನು ತಂದೊಡ್ಡಿ ಬಿಜೆಪಿಯವರು ಲಾಭ ಪಡೆಯುತ್ತಿದ್ದಾರೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಅವಕಾಶ ಸಿಕ್ಕಾಗ ಈ ದೇಶದ ಆರ್ಥಿಕತೆ, ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಅದು ಬಿಟ್ಟು ಜನರ ಮೇಲೆ ಹೊರೆ ಹಾಕಬಾರದು ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 3 ಲಕ್ಷ ಕೋಟಿ ರು. ಗ್ಯಾರಂಟಿ ಕೊಟ್ಟಿದ್ದೇವೆ. ರೈತರಿಗೆ 5 ಲಕ್ಷ ರು.ವರೆಗೆ ಬಡ್ಡಿ ರಹಿತ ಸಾಲ, ಅಭಿವೃದ್ಧಿ ಯೋಜನೆಗಳಿಗೂ ಸಾವಿರಾರು ಕೋಟಿ ರು. ಹಣ ನೀಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡಿದ ತೀರ್ಮಾನವನ್ನು ಇಡೀ ದೇಶದಲ್ಲಿ ಯಾರೂ ಮಾಡಲಾಗುವುದಿಲ್ಲ. ನಾವು ಜನರಿಗೆ ಗ್ಯಾರಂಟಿಗಳನ್ನು ಕೊಟ್ಟು ಅಭಿವೃದ್ಧಿ ಮಾಡುತ್ತಿದ್ದೇವೆ. ಕಳೆದ ಐದು ವರ್ಷಕ್ಕೆ ಹೋಲಿಕೆ ಮಾಡಿದರೆ ಅಭಿವೃದ್ಧಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದರು.ಉದ್ಯೋಗ ಖಾತ್ರಿಯಲ್ಲಿ ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ಕೊಟ್ಟು ಕೆಲಸ ನೀಡಲಾಗುತ್ತಿತ್ತು. ಕೆಲಸಕ್ಕೆ ಕನಿಷ್ಠ ಕೂಲಿಯನ್ನು ನಿಗದಿಪಡಿಸಲಾಗಿತ್ತು. 100ಕ್ಕೆ 100ರಷ್ಟು ಕೇಂದ್ರ ಸರ್ಕಾರದಿಂದ ಜನರಿಗೆ ಕೂಲಿ ಸಿಗುತ್ತಿತ್ತು. ಉಪಕರಣಗಳಿಗೆ ಶೇ.75 ಕೇಂದ್ರ, ಶೇ.25ರಷ್ಟು ರಾಜ್ಯ ಸರ್ಕಾರ ಕೊಡಬೇಕಿತ್ತು. ಈಗ ಯೋಜನೆಗೆ ಇದ್ದ ಮಹಾತ್ಮಗಾಂಧಿ ಹೆಸರನ್ನು ತೆಗೆದರು. ಪಂಚಾಯ್ತಿಯಲ್ಲಿ ತೀರ್ಮಾನ ತೆಗೆದುಕೊಳ್ಳುವುದನ್ನು ಕೇಂದ್ರ ಸರ್ಕಾರ ತೀರ್ಮಾನಿಸುವಂತಾಗಿದೆ. ಶೇ.60 ಕೇಂದ್ರ, ಶೇ.40 ರಷ್ಟು ರಾಜ್ಯದ ಪಾಲುದಾರಿಕೆ ಸೇರಿದಂತೆ ಅನೇಕ ಬದಲಾವಣೆ ತಂದಿದ್ದಾರೆ. ಕಾಯ್ದೆ ಬದಲಾವಣೆ ಕುರಿತಂತೆ ಯಾವುದೇ ರಾಜ್ಯದ ಅಭಿಪ್ರಾಯವನ್ನು ಕೇಳಲಿಲ್ಲ, ವಿಪಕ್ಷದವರೊಂದಿಗೆ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ಬದಲಾವಣೆ ತಂದಿದ್ದಾರೆ ಎಂದು ಜರಿದರು.