ನಮ್ಮ ದೇಶದ ಭವಿಷ್ಯ ಹೆಚ್ಚು ಯುವಕರ ಮೇಲೆ ಅವಲಂಬಿತವಾಗಿದೆ. ಆದರೆ ಮಾದಕ ವ್ಯಸನದಿಂದ ಅವರ ಸಂಖ್ಯೆ ತುಂಬಾ ಕಡಿಮೆಯಾಗುತ್ತಿದೆ ಎಂಬ ಆತಂಕವಿದೆ ಎಂದು ತರೀಕೆರೆ ಹಿರಿಯ ಸಿವಿಲ್ ನ್ಯಾಯಾಧೀಶ ಮುಜಫರ್ ಎ. ಮಾಂಜರಿ ಅಭಿಪ್ರಾಯಿಸಿದರು.
ಕನ್ನಡಪ್ರಭ ವಾರ್ತೆ ತರೀಕೆರೆ
ನಮ್ಮ ದೇಶದ ಭವಿಷ್ಯ ಹೆಚ್ಚು ಯುವಕರ ಮೇಲೆ ಅವಲಂಬಿತವಾಗಿದೆ. ಆದರೆ ಮಾದಕ ವ್ಯಸನದಿಂದ ಅವರ ಸಂಖ್ಯೆ ತುಂಬಾ ಕಡಿಮೆಯಾಗುತ್ತಿದೆ ಎಂಬ ಆತಂಕವಿದೆ ಎಂದು ತರೀಕೆರೆ ಹಿರಿಯ ಸಿವಿಲ್ ನ್ಯಾಯಾಧೀಶ ಮುಜಫರ್ ಎ. ಮಾಂಜರಿ ಅಭಿಪ್ರಾಯಿಸಿದರು.ತರೀಕೆರೆ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ಮಾದಕ ದ್ರವ್ಯ ಜಾಗೃತಿ ಮತ್ತು ಸ್ವಾಸ್ಥ್ಯ ಮಾರ್ಗದರ್ಶನ ಹಾಗೂ ಬಾಲ್ಯ ವಿವಾಹ ಮುಕ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ, ವ್ಯಸನಕ್ಕೆ ಕಾರಣವಾಗಬಹುದಾದ ವಸ್ತುಗಳೇ ಮಾದಕ ದ್ರವ್ಯಗಳು. ಮಾದಕ ದ್ರವ್ಯಗಳ ಸೇವನೆಯಿಂದ ವ್ಯಕ್ತಿಯ ದೈಹಿಕ, ಮಾನಸಿಕ ಸ್ಥಿತಿ, ಕುಟುಂಬ ಜೀವನ, ಶೈಕ್ಷಣಿಕ ಪ್ರಗತಿ ಹಾಗೂ ಸಾಮಾಜಿಕ ಗೌರವದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಯುವಕರು ಮಾದಕ ವಸ್ತುಗಳ ವಿರುದ್ಧ ಜಾಗೃತರಾಗಿರಬೇಕು ಎಂದು ಹೇಳಿದರು.
ಸ್ನೇಹಿತರು ಅಥವಾ ಪರಿಚಿತರು ಇಂತಹ ಚಟಗಳಿಗೆ ಒಳಗಾಗುತ್ತಿರುವುದು ಕಂಡುಬಂದರೆ ಅವರನ್ನು ದೂಷಿಸುವ ಬದಲು ಪೋಷಕರು, ಶಿಕ್ಷಕರು ಹಾಗೂ ತಜ್ಞರ ನೆರವು ಪಡೆಯಲು ಪ್ರೋತ್ಸಾಹಿಸಬೇಕುಎಂದು ಹೇಳಿದರು.ಕಾನೂನು ಸೇವಾ ಸಮಿತಿ ಪ್ಯಾನಲ್ ವಕೀಲ ವಿನಯ್ ಕುಮಾರ್ ಮಾತನಾಡಿ ಬಾಲ್ಯ ವಿವಾಹದಿಂದ ವಿಶೇಷವಾಗಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ಆರ್ಥಿಕ ಸ್ವಾವಲಂಬನೆಗೆ ಮತ್ತು ಬಾಲ್ಯದ ಸಹಜ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಪ್ರತಿ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕು, ಸುರಕ್ಷಿತ ಬಾಲ್ಯ, ತನ್ನ ಭವಿಷ್ಯದ ಬಗ್ಗೆ ಕನಸು ಕಾಣುವ ಸ್ವಾತಂತ್ರ್ಯ ಮತ್ತು ಸಮಾನ ಅವಕಾಶ ದೊರೆಯಬೇಕು. ಹೆಣ್ಣುಮಕ್ಕಳನ್ನು ಕೇವಲ ವಿವಾಹದ ಜವಾಬ್ದಾರಿ ದೃಷ್ಟಿಯಿಂದ ನೋಡದೆ, ಶಿಕ್ಷಣ ಮತ್ತು ಸಾಧನೆಯ ಮೂಲಕ ಸ್ವಾವಲಂಬಿಯಾಗಿ ರೂಪಿಸಲು ಪೋಷಕರು ಹಾಗೂ ಸಮಾಜ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ರಾಜಶೇಖರ್ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ , ಸಾಮಾಜಿಕ ಜಾಲತಾಣ ಮತ್ತು ಆನ್ಲೈನ್ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳ ಅಧ್ಯಯನ, ನಿದ್ರೆ ಮತ್ತು ಸಾಮಾಜಿಕ ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಟಿ. ಜಿ ಶಶಾಂಕ್ , ವಕೀಲರ ಸಂಘದ ಖಜಾಂಚಿ ಸವಿತ , ಹಿರಿಯ ವಕೀಲ ಎಸ್.ಸುರೇಶ್ ಚಂದ್ರ, ಅಪರ ಸರ್ಕಾರಿ ವಕೀಲ ಜಗದೀಶ್, ವಕೀಲ ಸುಮಂತ್, ಆರಕ್ಷಕ ಇಲಾಖೆಯ ಸುಕುಮಾರ್, ಪ್ರಾಂಶುಪಾಲ ಡಾ. ಕಾರ್ತಿಕೇಯನ್, ಉಪನ್ಯಾಸಕ ತಿಪ್ಪೇಸ್ವಾಮಿ, ರೇವಂತ್ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.