ಅಧಿಕಾರದ ಮೇಲಿನ ವ್ಯಾಮೋಹದಿಂದಾಗಿ ದೇಶವನ್ನೇ ಹಾಳುಗೆಡವುತ್ತಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ್‌ ಷಾ ವಿರುದ್ಧ ಗುಡುಗಿರುವ ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು, ಅಧಿಕಾರದ ಆಸೆಗಾಗಿ ನೀವು ದೇಶದುದ್ದಗಲಕ್ಕೂ ಕೋಮು ಭಾವನೆ ಬಿತ್ತುತ್ತ ಹೊರಟರೆ ಯುವಕರು ನಿಮ್ಮನ್ನು ಬೆನ್ನಟ್ಟಿ ಹೊಡೀತಾರೆ ಎಂದು ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ.

ಅಧಿಕಾರದ ಮೇಲಿನ ವ್ಯಾಮೋಹದಿಂದಾಗಿ ದೇಶವನ್ನೇ ಹಾಳುಗೆಡವುತ್ತಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ್‌ ಷಾ ವಿರುದ್ಧ ಗುಡುಗಿರುವ ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರು, ಅಧಿಕಾರದ ಆಸೆಗಾಗಿ ನೀವು ದೇಶದುದ್ದಗಲಕ್ಕೂ ಕೋಮು ಭಾವನೆ ಬಿತ್ತುತ್ತ ಹೊರಟರೆ ಯುವಕರು ನಿಮ್ಮನ್ನು ಬೆನ್ನಟ್ಟಿ ಹೊಡೀತಾರೆ ಎಂದು ಎಚ್ಚರಿಸಿದ್ದಾರೆ.

ಕಲಬುರಗಿಯ ಪಂಡಿತ ರಂಗ ಮಂದಿರದಲ್ಲಿ ಶನಿವಾರ ನಡೆದ ಸುಮೇಧ ಪ್ರಕಾಶನ ಹೊರತಂದಿರುವ ಧೀಮಂತ ಧುರಿಣ ಡಾ. ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ತಮ್ಮ ಮಾತಿನುದ್ದಕ್ಕೂ ಪ್ರಧಾನಿ ಮೋದಿ, ಷಾ, ಬಿಜೆಪಿ, ಸಂಘ ಪರಿವಾರ, ಸರಸಂಘ ಸಂಚಾಲಕ ಮೋಹನ ಭಾಗವತ್‌ ವಿರುದ್ಧ ಆಕ್ರೋಶ ಹೊರಹಾಕಿದ ಖರ್ಗೆ, ಇವರಿಗೆ ಮತ ಬೇಕು, ಅಧಿಕಾರ ಬೇಕು, ದೇಶ ಬೇಡ. ವಂದೇ ಮಾತರಂ 2 ಚರಣ ಹೇಳ್ತೀವಿ ಅಂದ್ರೆ ದೇಶದ್ರೋಹಿ ಅಂತಾರೆ, ಇವರೇ ಬ್ರಿಟೀಷರಿಗೆ ಮಾಫೀನಾಮಾ ಬರೆದು ಕೊಟ್ಟರು, ಅವರ ಕಾಲು ಹಿಡಿದರು, ಬ್ರಿಟೀಷರ ಗುಲಾಮರಾಗಿದ್ದರು ಎಂದು ಸಂಘ ಪರಿವಾರ, ಬಿಜೆಪಿಯತ್ತ ಮಾತಿನ ಚಾಟಿ ಬೀಸಿದ್ದಾರೆ.

ಪ್ರಗತಿಪರ ಚಿಂತಕರಿಗೆ ಧಿಮಾಗಿ ನಕ್ಸಲ್‌ ಅನ್ನೋದು, ವಂದೇ ಮಾತರಂ 2 ಚರಣ ಹಾಡ್ತೀವಿ ಅಂದ್ರೆ ದೇಶದ್ರೋಹಿ ಅನ್ನೋದು ಇದೆಲ್ಲಾ ಬಿಟ್ಟು ಬಿಡಿ, ಯುವಕರಿಗೆ ಶಿಕ್ಷಣ ಕೊಡಿ, ಪರೀಕ್ಷೆ ಸರಿಯಾಗಿ ನಡೆಸಿ, ಉದ್ಯೋಗದ ಬಗ್ಗೆ ಮಾತಾಡಿ, ಪ್ರಗತಿಯ ಮಾತಾಡಿ, ಇದನ್ನೆಲ್ಲ ಬಿಟ್ಟು ಕೋಮು ಭಾವನೆ ಕೆರಳಿಸುವ ನಿಮ್ಮ ಧೋರಣೆ ಹೀಂಗೆ ಮುಂದುವರಿದ್ರೆ ಈ ದೇಶದ ಯುವಕರು ನಿಮ್ಮನ್ನ ಹಂಗೇ ಬಿಡೋದಿಲ್ಲ, ಅಟ್ಟಾಡಿಸಿಕೊಡು ಬರ್ತಾರೆ ಎಂದು ಮೋದಿ- ಷಾ ಜೋಡಿಯತ್ತ ಚಾಟಿ ಬೀಸಿದರು.

ದೇಶದ ಶಿಕ್ಷಣ ರಂಗದಲ್ಲಿ ಅರಾಜಕತೆ ಹುಟ್ಟಿಕೊಂಡಿದೆ. ಸಂಘ ಪರಿವಾರದ ಹಿನ್ನೆಲೆ, ಚಿಂತನೆಗಳಿರುವವರನ್ನೇ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಆತಂಕ ಹೊರಹಾಕಿದ ಖರ್ಗೆ, ಮೋದಿ ಮನ್‌ ಕೀ ಬಾತ್‌ ಬಿಟ್ಟು ಜನ್‌ ಕೀ ಬಾತ್‌ ಹೇಳಲಿ. ಮೋದಿ ಶಿಕ್ಷಣ, ಉದ್ಯೋಗದಂತಹ ಯುವಜನರ ಸಮಸ್ಯೆಗಳತ್ತ ಲಕ್ಷ ಕೊಡುತ್ತಿಲ್ಲ. ದೌರ್ಜನ್ಯ, ಅನ್ಯಾಯ ಹೆಚ್ಚಾಗಿ ಯುವಕರು ದಂಗೆ ಏಳುತ್ತಿದ್ದಾರೆ. ಬುಲೆಟ್‌ ಟ್ರೇನ್ ಮೋದಿ ಮಾತಲ್ಲೇ ಓಡ್ತಿದೆ, ಆದರೆ ವಾಸ್ತವದಲ್ಲಿ ಮೋದಿ ಸರ್ಕಾರ ವಿದ್ಯಾರ್ಥಿಗಳ ಮೇಲೆ ಬುಲೆಟ್‌ ಹಾರಿಸ್ತಿದೆ ಎಂದು ಖರ್ಗೆ ಚುಚ್ಚಿದರು.

ಮೋದಿ, ಷಾ ತುಂಬಾ ತೊಂದರೆ ಕೊಡುತ್ತಿದ್ದಾರೆಂದು ಹೇಳುತ್ತಲೇ ತಾವು ಕುಳಿತ ಜಾಗದ ಶುದ್ಧೀಕರಣ ಪ್ರಸಂಗ ಸ್ಮರಿಸಿದ ಖರ್ಗೆ ತಾವು ನೈನಿತಾಲ್‌ನಲ್ಲಿ ಭಾಗವಹಿಸಿದ್ದ ಸಮಾರಂಭದಲ್ಲಿ ಸೇರಿದ್ದ ಜನಸ್ತೋಮ ಕಂಡು ಬಿಜೆಪಿ ಹಿಂದುಗಳ ಗಮನ ಸೆಳೆಯಲು ಈ ಶುದ್ಧೀಕರಣ ಷಡ್ಯಂತ್ರ ರೂಪಿಸಿರಬಹುದು. ಯಾರು ಎಷ್ಟೇ ಬೊಬ್ಬೆ ಹೊಡೆದರೂ ನನ್ನ ತತ್ವ, ಸಿದ್ಧಾಂತ, ನಂಬಿಕೆಗಳನ್ನು ಬಿಡುವವನಲ್ಲ ಎಂದು ಖರ್ಗೆ ಸ್ಪಷ್ಟಪಡಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ನಟ ಪ್ರಕಾಶ್‌ ರಾಜ್‌, ಹೆಸರು ಪ್ರಸ್ತಾಪಿಸದೆ ಪ್ರಧಾನಿ ಮೋದಿ, ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕುಳಿತ ಸ್ಥಳ ಶುದ್ದೀಕರಣಕ್ಕಿಂತ ಸುಳ್ಳು ಹೇಳುತ್ತ, ಅನ್ಯರ ಕನಸು ಮಾರುತ್ತ ಹೊರಟವರು ಗಂಗಾಜಲ್‌, ಗೋಮೂತ್ರ ಕುಡಿದು ಕೈ- ಬಾಯಿ ಎರಡೂ ಶುದ್ಧಮಾಡಿಕೊಳ್ಳುವ ಜರೂರತ್ತಿದೆ ಎಂದರು. ಎಸ್‌ಐಆರ್‌, ಕ್ಷೇತ್ರ ಪುನರ್‌ವಿಂಗಡಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು ರಾಜ್ಯ ಸರ್ಕಾರ ಪ್ರತಿಭಟಿಸಬೇಕು ಎಂದರು.

ಕೆಪಿಸಿಸಿ ಅದ್ಯಕ್ಷ ಬಿಕೆ ಹರಿಪ್ರಸಾದ್‌ ಮಾತನಾಡಿ, ಸಂವಿಧಾನ ಬದಲಾಯಿಸಲು ಹೊರಟವರಿಗೆ ಖರ್ಗೆ ಗಟ್ಟಿಯಾಗಿ ಉತ್ತರ ನೀಡಿದ್ದಾರೆ. ಬೂಟಾಟಿಕೆ ಮಾಡುವವರನ್ನು ನಂಬಬೇಡಿ ಎಂದರು. ಕೃತಿಯ ಅನುವಾದಕ ಪ್ರೊ. ಆರ್‌ ಕ ಹುಡಗಿ ಪ್ರಾಸ್ತಾವಿಕ ಮಾತನಾಡಿದರು, ರಾಜ್ಯ ಪತ್ರಾಗಾರ ಇಲಾಖೆಯ ವೀರಶೆಟ್ಟಿ ಗಾರಂಪಳ್ಳಿ ಕೃತಿ ಕುರಿತು ಮಾತಾಡಿದರು. ಸಚಿವ ಡಾ. ಶರಣಪ್ರಕಾಶ ಪಾಟೀಲ್‌, ಕೆಬಿಎನ್‌ ವಿವಿ ಕುಲಪತಿ ಡಾ. ಸೈಯ್ಯದ್‌ ಮೊಹ್ಮದ್‌ ಅಲ್‌ ಅಲಿ ಹುಸೇನಿ, ಎಸ್ಬಿ ಶಿಕ್ಷಣ ಸಂಘದ ಕಾರ್ದರ್ಶಿ ಬಸವರಾಜ ದೇಶಮುಖ, ಪತ್ರಕರ್ತ ದೇವಯ್ಯ ಗುತ್ತೇದಾರ್‌, ಕಲಬುರಗಿ ಶಾಸಕರಾದ ಅಲ್ಲಂಪ್ರಭು ಪಾಟೀಲ್‌, ಬಿಆರ್‌ ಪಾಟೀಲ್‌, ತಿಪ್ಪಣ್ಣ ಕಮಕನೂರ್‌, ಖನೀಜ್‌ ಫತಾತೀಮಾ, ಮೇಯರ್‌ ವರ್ಷಾ ಜಾನೆ, ಜಗದೇವ ಗುತ್ತೇದಾರ್‌, ಸುಮೇಧ ಪ್ರಕಾಶನ ಪರವಾಗಿ ದತ್ತಾತ್ರೇಯ ಇಕ್ಕಳಕಿ ಸೇರಿದಂತೆ ಅನೇಕರಿದ್ದರು.