ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಸಹಕಾರ ಸಂಘಗಳು ಬೆಳವಣಿಗೆಯಾಗಲು ಗ್ರಾಹಕರ ಪ್ರೀತಿ, ವಿಸ್ವಾಸ ಮುಖ್ಯ. ಜೊತೆಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯನಿರ್ವಹಿಸಬೇಕು. ಅಂದಾಗ ಮಾತ್ರ ಸಹಕಾರಿ ಕ್ಷೇತ್ರ ಬೆಳವಣಿಗೆಯಾಗಲು ಸಾಧ್ಯವೆಂದು ತಹಸೀಲ್ದಾರ್ ಡಾ.ವಿನಯಾ ಹೂಗಾರ ಹೇಳಿದರು.ಪಟ್ಟಣದ ಶ್ರೀ ಅಲ್ಲಂಪ್ರಭು ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಅಲ್ಲಂಪ್ರಭು ಪತ್ತಿನ ಸಹಕಾರಿ ಸಂಘ ೧೫ನೇ ವಾರ್ಷಿಕ ಸರ್ವ ಸಾಧಾರಣಾ ಸಭೆ ಉದ್ಘಾಟಿಸಿ ಮಾತನಾಡಿದರು. ಇಡೀ ದೇಶದ ಬೆಳವಣಿಗೆ ಸಹಕಾರಿ ಕ್ಷೇತ್ರದ ಮೇಲೆ ನಿಂತಿದ್ದು, ಸಹಕಾರಿ ಸಂಘಗಳಲ್ಲಿ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿ ಸಂಘದ ಬೆಳವಣಿಗೆಗೆ ಸಹಕರಿಸಬೇಕು. ಅಲ್ಲಂಪ್ರಭು ಪತ್ತಿನ ಸಹಕಾರಿ ಸಂಘ ಅಲ್ಪ ಅವಧಿಯಲ್ಲಿ ಒಳ್ಳೆಯ ಲಾಭಾಂಶದಿಂದ ಮುನ್ನಡೆದಿದ್ದು, ಇದಕ್ಕೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಗ್ರಾಹಕರೊಂದಿಗೆ ಹೊಂದಿರುವ ಉತ್ತಮ ಬಾಂದವ್ಯವೇ ಕಾರಣವಾಗಿದೆ ಎಂದರು. ಪ್ರವಾಸೋಧ್ಯಮ ಇಲಾಖೆಯ ಉಪನಿರ್ದೇಶಕ ಅರವಿಂದ ಹೂಗಾರ ಮಾತನಾಡಿ, ಸಹಕಾರಿ ಸಂಘಗಳು ಜನರ ಪ್ರೀತಿ ವಿಸ್ವಾಸದ ಮೇಲೆ ನಿಂತಿರುತ್ತವೆ ಶ್ರೀ ಅಲ್ಲಮಪ್ರಭು ಪತ್ತಿನ ಸಹಕಾರಿ ಸಂಘ ಉತ್ತಮ ಬೆಳವಣಿಗೆ ಹೊಂದುವದರೊಂದಿಗೆ ಸಹಕಾರಿ ಸಂಘಗಳ ಸಾಲಿನಲ್ಲಿಯೇ ಉತ್ತಮ ಸಹಕಾರಿ ಎಂದು ಹೆಸರು ಗಳಿಸಿರುವದು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಗ್ರಾಹಕರೊಂದಿಗೆ ಹೊಂದಿರುವ ಉತ್ತಮ ಬಾಂದವ್ಯವೇ ಕಾರಣ ಎಂದು ಅಭಿಪ್ರಾಯಪಟ್ಟರು.ಸಂಘ ಅಧ್ಯಕ್ಷ ಭೋಗಣ್ಣ ಹೂಗಾರ ಮಾತನಾಡಿ, ನಮ್ಮ ಸಂಘವು ಪ್ರಾರಂಭದಲ್ಲಿ ಸಾಕಷ್ಟು ತೊಡಕುಗಳು ಉಂಟಾದರೂ ವರ್ಷದಿಂದ ವರ್ಷಕ್ಕೆ ಉತ್ತಮ ಲಾಭದತ್ತ ಮುನ್ನಡೆದಿದೆ. ಈ ವರ್ಷದಲ್ಲಿ ₹ ೯.೧೧ ಲಕ್ಷ ನಿವ್ಹಳ ಲಾಭಗಳಿಸಿದೆ. ₹ ೧.೮೨ ಕೋಟಿ ಬಂಡವಾಳದೊಂದಿಗೆ ಮುನ್ನಡೆದಿದ್ದು, ಈ ಸಾಧನೆಗೆ ಎಲ್ಲರ ಸಹಕಾರವೇ ಮುಖ್ಯವಾಗಿದೆ ಎಂದು ಹೇಳಿದರು.ಶ್ರೀನಿವಾಸ ಕುಲಕರ್ಣಿ ವರದಿ ವಾಚಿಸಿದರು. ಸಂಘದ ನಿರ್ದೇಶಕರಾದ ಸಿದ್ದಣ್ಣ ಹೂಗಾರ, ರಾಮಣ್ಣ ಪೂಜಾರಿ, ಮಹಾಂತೇಶ ಹೂಗಾರ, ಪ್ರಶಾಂತ ಹೂಗಾರ, ಈಶ್ವರ ಹೂಗಾರ, ಸುಭಾಸ ಹೂಗಾರ, ರಮೇಶ ಹೂಗಾರ, ಶಾಂತಾ ಪೂಜಾರಿ, ಶಾರದಾ ಹೂಗಾರ, ಸರೋಜನಿ ಚಲವಾದಿ ಮೊದಲಾದವರು ಉಪಸ್ಥಿತರಿದ್ದರು.
ಎಸ್.ಎಸ್.ಹೂಗಾರ ಸ್ವಾಗತಿಸಿದರು. ಶರಣಗೌಡ ಪೊಲೀಸ್‌ಪಾಟೀಲ ನಿರೂಪಿಸಿದರು. ಎಚ್.ಎನ್.ಹೂಗಾರ ವಂದಿಸಿದರು.