ವಿವೇಕವಿಲ್ಲದ ಶಿಕ್ಷಣದಿಂದ ದೇಶದ ಪ್ರಗತಿ ಕುಂಠಿತ

| Published : Jun 08 2025, 01:18 AM IST

ಸಾರಾಂಶ

ವಿವೇಕ ಹಾಗೂ ವಿವೇಚನೆ ಇಲ್ಲದ ಶಿಕ್ಷಣದಿಂದ ಮೌಲ್ಯಾಧಾರಿತ ಜೀವನ ನಶಿಸುತ್ತಿದೆ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾದ ಜಗದ್ಗುರು ಶಾಂತವೀರ ಸ್ವಾಮಿಜಿ ಅಭಿಪ್ರಾಯಪಟ್ಟರು.

ಹೊನ್ನಾಳಿ: ವಿವೇಕ ಹಾಗೂ ವಿವೇಚನೆ ಇಲ್ಲದ ಶಿಕ್ಷಣದಿಂದ ಮೌಲ್ಯಾಧಾರಿತ ಜೀವನ ನಶಿಸುತ್ತಿದೆ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾದ ಜಗದ್ಗುರು ಶಾಂತವೀರ ಸ್ವಾಮಿಜಿ ಅಭಿಪ್ರಾಯಪಟ್ಟರು.

ಶನಿವಾರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಅವಳಿ ತಾಲೂಕು ಕುಂಚಿಟಿಗ ನೌಕರರ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಬೀಳ್ಗೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಾಚನ ನೀಡಿದರು.

ಶಿಕ್ಷಣದಲ್ಲಿ ಸಂಸ್ಕಾರ ಹಾಗೂ ಮೌಲ್ಯಾಧಾರಿತ ಶಿಕ್ಷಣ ಇಲ್ಲದೆ ಇರುವುದರಿಂದ ಇಂದು ಮಕ್ಕಳಿಗೆ ಹಿರಿಯರಿಗೆ ಗೌರವ ಕೊಡುವುದೇ ಗೊತ್ತಿಲ್ಲ, ಇಂತಹ ಶಿಕ್ಷಣದಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ, ನಮ್ಮ ಪೂರ್ವಜರ ಕಾಲದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಪಡೆದರೆ ಸಾಕು ಉದ್ಯೋಗ ಸಿಗುತ್ತಿತ್ತು, ಆದರೆ ಇಂದು ಉನ್ನತ ವ್ಯಾಸಂಗ ಮಾಡಿದರೂ ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವಾಡುತ್ತಿದೆ ಎಂದರು.

ಸಂಯುಕ್ತ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಕಾರಣ ಭಾರೀ ಭ್ರಷ್ಟಾಚಾರ, ಜಾತಿ ಹಾಗೂ ಧರ್ಮಾಧಾರಿತ ಆಡಳಿತದಿಂದಾಗಿ ಭಾರತದ ಅಭಿವೃದ್ಧಿ ಕುಂಟುತ್ತ ಸಾಗಿದೆ ಎಂದು ವಿಷಾದಿಸಿದರು.

ಸ್ವಜನ ಪಕ್ಷಪಾತ, ಎಲ್ಲಾ ರಾಜಕಾರಣ ವ್ಯವಸ್ಥೆಗಳು ಜಾತಿಯ ಆಧಾರದ ಮೇಲೆ ನಿಂತ್ತಿರುವುದು ದುರ್ದೈವದ ಸಂಗತಿಯಾಗಿದೆ. ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಭಾರತ ಅಭಿವೃದ್ಧಿಯಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಸಾಕಷ್ಟು ಹಿಂದೆ ಬಿದ್ದಿದೆ ಎಂದರು.

ದೇಶದಲ್ಲಿ ಹಿಂದುತ್ವ ಪರವಾದ ಪಕ್ಷ ಹಾಗೂ ಹಿಂದುತ್ವ ವಿರೋಧಿ ಪಕ್ಷಗಳ ಸಿದ್ಧಾಂತಡಿಯಲ್ಲಿ ಅಧಿಕಾರಕ್ಕೆ ಬರುತ್ತಿರುವುದರಿಂದ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಈಗಲಾದರೂ ದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ಜಗತ್ತಿನಲ್ಲಿಯೇ ಭಾರತ ಅಭಿವೃದ್ಧಿಯಲ್ಲಿ 1ನೇ ಸ್ಥಾನಕ್ಕೆ ತರುವ ಯುವಕರು ರಾಜಕೀಯಕ್ಕೆ ಬರಬೇಕಿದೆ ಎಂದರು.

ಅವಳಿ ತಾಲೂಕು ಕುಂಚಿಟಿಗ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಶಿಕ್ಷಕ ತಿಮ್ಮಪ್ಪ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಪಡಬೇಕು. ಸಮಾಜದ ಸಂಘಟನೆಗೆ ನಾವುಗಳು ಟೊಂಕಕಟ್ಟಿ ನಿಂತಿದ್ದೇವೆ ಅದಕ್ಕೆ ನಿಮ್ಮ ಸಲಹೆ ಹಾಗೂ ಸಹಕಾರ ಅಗತ್ಯ ಎಂದರು.

ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಮುರುಳಿಧರ್ ಹಾಲಪ್ಪ, ಸಮಾಜದ ಮುಖಂಡರಾದ ಸುರೇಶ್, ವರದರಾಜಪ್ಪಗೌಡ್ರು, ರಂಗನಗೌಡ್ರು, ಮಂಜುನಾಥ್ ಹಾಗೂ ಚನ್ನಬಸಪ್ಪ ಮಾತನಾಡಿದರು.

ಸಮಾಜದ ನೌಕರರ ಸಂಘದ ಪ್ರಮುಖರಾದ ಸಂತೋಷ್, ಅರುಣ್‌ಕುಮಾರ್, ಡಾ.ಬಾಲರಾಜ್, ನರಸಿಂಹಪ್ಪ, ಪ್ರಹ್ಲಾದ್, ಶಾಂತರಾಜ್, ಪುರುಷೋತ್ತಮ, ರವಿಕುಮಾರ್ ಮತ್ತಿತರರಿದ್ದರು.