ಸಾರಾಂಶ
ಪ್ರಜ್ವಲ್ ವೈಫಲ್ಯ ಕುರಿತು ಕಾಂಗ್ರೆಸ್ ನಾಯಕರ ವಾಗ್ದಾಳಿ । ಕಾಂಗ್ರೆಸ್ ಪ್ರಚಾರ ಸಭೆ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಮಾತ್ರ ದೇಶ ಹಾಗೂ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಹೇಳಿದರು.
ತಾಲೂಕಿನ ಹಿರೀಸಾವೆ ಹೋಬಳಿಯ ದಿಡಗ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೈಗೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರ್ಕಾರದ ಆಡಳಿತ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತಿದ್ದಂತೆಯೇ ತಾವು ಚುನಾವಣಾ ಮುನ್ನ ಪ್ರಣಾಳಿಯಲ್ಲಿ ತಿಳಿಸಿದ ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಸಂಚಾರ ಸೇರಿದಂತೆ ಎಲ್ಲ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸುವ ಮೂಲಕ ರಾಜ್ಯದ ಜನತೆಯ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ದೇಶದ ಅಭಿವೃದ್ಧಿಯ ದಿಕ್ಕು ಬದಲಾಗಲಿದೆ. ಆದ್ದರಿಂದ ಅಭ್ಯರ್ಥಿಯಾಗಿರುವ ಶ್ರೇಯಸ್ ಪಟೇಲ್ ಅವರಿಗೆ ಹೆಚ್ಚಿನ ಮತ ನೀಡಿ ಆಶೀರ್ವದಿಸಬೇಕು ಎಂದು ಮತಯಾಚನೆ ಮಾಡಿದರು.ಪ್ರಜ್ವಲ್ ನೀಡಿದ ಸುಳ್ಳು ಭರವಸೆ:
‘ಸಂಸದ ಪ್ರಜ್ವಲ್ ರೇವಣ್ಣ ಈ ಬಾರಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ನಮ್ಮ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಸಂಸದರಾಗಿದ್ದರು. ಈ ಭಾಗದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ. ಕಳೆದ ೩ ವರ್ಷಗಳ ಹಿಂದೆ ದಿಡಗ ಗ್ರಾಮದ ಕೆರೆಗೆ ಏತನೀರಾವರಿ ಯೋಜನೆಯಡಿ ನೀರು ತುಂಬಿಸಿಯೇ ಮುಂದಿನ ಚುನಾವಣೆಯಲ್ಲಿ ಸ್ವರ್ಧಿಸುತ್ತೇನೆ ಎಂದು ರೈತರಿಗೆ ಭರವಸೆ ನೀಡಿದ್ದರು. ಆದರೆ ಇದೂವರೆಗೂ ಇತ್ತ ತಲೆ ಹಾಕಿಲ್ಲ’ ಎಂದು ಪ್ರಜ್ವಲ್ ರೇವಣ್ಣ ಸಭೆಯೊಂದರಲ್ಲಿ ಮಾತನಾಡಿರುವ ಆಡಿಯೋ ತುಣುಕನ್ನು ಮೊಬೈಲ್‌ನಿಂದ ಮೈಕ್ ಮೂಲಕ ಜನತೆಗೆ ಕೇಳಿಸಿದರು.ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತನಾಡಿ, ‘ಜೆಡಿಎಸ್ ನಾಯಕರು ಕಳೆದ ವಿಧಾನಸಭಾ ಚುನಾವಣೆ ವೇಳೆಯೇ ಬಿಜೆಪಿ ಸೇರಲು ಸಿದ್ಧತೆ ಮಾಡಿಕೊಂಡಿದ್ದರು. ಕೊನೆಗೂ ಸೇರಿಕೊಂಡಿದ್ದಾರೆ. ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕಿದೆ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಮತ ಹಾಕುವ ಮೂಲಕ ಪಕ್ಷವನ್ನು ಬಲಗೊಳಿಸಬೇಕು’ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿ, ‘ನನ್ನ ತಾಯಿ ಎರಡು ಬಾರಿ ಸೋತಿದ್ದಾರೆ. ಇನ್ನು ನಾನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ಇನ್ನೂ ಎಷ್ಟು ಬಾರಿ ನಮ್ಮ ಕುಟುಂಬವನ್ನು ಸೋಲಿಸುತ್ತೀರ. ನನಗೂ ದೇಶದ ಜನತೆಯ ಋಣ ತೀರಿಸಲು ಅವಕಾಶ ಮಾಡಿಕೊಡಿ. ನನ್ನ ತಾತಂದಿರಾದ ಎಚ್.ಸಿ.ಶ್ರೀಕಂಠಯ್ಯ ಹಾಗೂ ಪುಟ್ಟಸ್ವಾಮಿಗೌಡ ಅವರು ಈ ಜಿಲ್ಲೆ ಹಾಗೂ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಮತ್ತಷ್ಟು ಅಭಿವೃದ್ಧಿ ಸಲುವಾಗಿ ನನಗೆ ಮತ ನೀಡಿ’ ಎಂದು ಮತಯಾಚನೆ ಮಾಡಿದರು.ಇದಕ್ಕೂ ಮೊದಲು ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇರ್ಶವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಲಲಿತ್ ರಾಘವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಜೆ.ಎಂ.ರಾಮಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಶಂಕರ್, ಎನ್.ಟಿ.ಬೊಮ್ಮೇಗೌಡ, ಕೆ.ಟಿ.ನಾಗರಾಜ್, ಎನ್.ಆರ್.ರತ್ನರಾಜ್, ಕೆ.ಎನ್.ಹರಿಪ್ರಸಾದ್ ಇದ್ದರು.
ಚನ್ನರಾಯಪಟ್ಟಣ ಹಿರೀಸಾವೆ ಹೋಬಳಿಯ ಪ್ರಸಿದ್ದ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಎಂ.ಎ.ಗೋಪಾಲಸ್ವಾಮಿ, ಶಿವಲಿಂಗೇಗೌಡ, ಜೆ.ಎಂ.ರಾಮಚಂದ್ರು, ಎಂ.ಶಂಕರ್, ಕೆ.ಟಿ.ನಾಗರಾಜ್, ಎನ್.ಟಿ.ಬೊಮ್ಮೇಗೌಡ, ಎನ್.ಆರ್.ರತ್ನರಾಜ್ ಇದ್ದರು.