ರೈತ ದೇಶದ ಬೆನ್ನೆಲೆಬು, ರಾಷ್ಟ್ರ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ. ಅನ್ನದಾತನ ಪರಿಶ್ರಮ ಮತ್ತು ಕೊಡುಗೆಗಳಿಗೆ ಸರಿಯಾದ ಗೌರವ ಸಿಗುವ ವರೆಗೂ ದೇಶದ ಅಭಿವೃದ್ಧಿಯು ಅಸಾಧ್ಯ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಹಳಿಯಾಳ: ರೈತರು ದಿನಿನಿತ್ಯದ ಬದುಕಿನಲ್ಲಿ ಎದುರಿಸುತ್ತಿರುವ ಪ್ರಕೃತಿ ವಿಕೋಪಗಳು ಹಾಗೂ ಕೃಷಿ ಬೆಳೆಗಳ ದರ ಏರಿಳಿತಿಗಳ ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಅವರಿಗೆ ದೊರೆಯುತ್ತಿರುವ ಸಹಕಾರ ಸಾಕಾಗುತ್ತಿಲ್ಲ ಎಂಬ ಕೊರಗು, ಅಸಮಾಧಾನ ರೈತ ವರ್ಗದಲ್ಲಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಪಟ್ಟಣದ ಪುರಭವನದಲ್ಲಿ ಶುಕ್ರವಾರ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಆತ್ಮ ಯೋಜನೆಯಡಿ ಮಂಜೂರಾದ ಅರ್ಹ ಫಲಾನುಭವಿಗಳಿಗೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಹಾಗೂ ಹನಿ ನೀರಾವರಿಯ ಘಟಕಗಳ ವಿತರಣೆ ಹಾಗೂ ಕೃಷಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.ರೈತ ದೇಶದ ಬೆನ್ನೆಲೆಬು, ರಾಷ್ಟ್ರ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ. ಅನ್ನದಾತನ ಪರಿಶ್ರಮ ಮತ್ತು ಕೊಡುಗೆಗಳಿಗೆ ಸರಿಯಾದ ಗೌರವ ಸಿಗುವ ವರೆಗೂ ದೇಶದ ಅಭಿವೃದ್ಧಿಯು ಅಸಾಧ್ಯ ಎಂದರು.
ಹಳಿಯಾಳ ತಾಲೂಕಿನ ಕೃಷಿ ಕ್ಷೇತ್ರ ಹಾಗೂ ಬೇಸಾಯದಲ್ಲಿ ಆದ ಬದಲಾವಣೆಗಳ ಬಗ್ಗೆ ಮಾತನಾಡಿದ ಅವರು ಮೊದಲಿಗೆ ಹಳಿಯಾಳದಲ್ಲಿ ಕೇವಲ ಭತ್ತವನ್ನೇ ಬೆಳೆಯಲಾಗುತ್ತಿತ್ತು. ಕೃಷಿ ಸಚಿವನಾದ ನಂತರ ಹತ್ತಿಯನ್ನು ನಾನು ಪರಿಚಯಿಸಿದೆ. ತದನಂತರ ಮೆಕ್ಕೆಜೋಳ ಪ್ರವೇಶ ಪಡೆಯಿತು. ಈಗ ಇಡೀ ಕೃಷಿ ಕ್ಷೇತ್ರವನ್ನು ವಾಣಿಜ್ಯ ಬೆಳೆ ಕಬ್ಬು ಆವರಿಸಿಕೊಂಡಿದೆ. ಸರ್ವರ ಬೇಡಿಕೆ ಮತ್ತು ಸಹಕಾರದಿಂದ ಹಳಿಯಾಳದಲ್ಲಿ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಿದೆ. ಕಾರ್ಖಾನೆ ಪ್ರಾರಂಭಕ್ಕೆ ಸಾಕಷ್ಟು ವಿರೋಧಗಳು ಹಾಗೂ ನನ್ನ ವಿರುದ್ಧ ಅಪಪ್ರಚಾರಗಳು ಕೇಳಿ ಬಂದವು ಎಂದು ನೆನಪಿಸಿಕೊಂಡ ದೇಶಪಾಂಡೆ, ಹಳಿಯಾಳದಲ್ಲಿರುವ ಸಕ್ಕರೆ ಕಾರ್ಖಾನೆಯು ರಾಜ್ಯದಲ್ಲಿ ಅತ್ಯುತ್ತಮ ಹಾಗೂ ಸಕಾಲದಲ್ಲಿ ಹಣ ಪಾವತಿಸುವ ಪ್ರಥಮ ಕಾರ್ಖಾನೆಯಾಗಿದೆ. ಒಂದರ್ಥದಲ್ಲಿ ಈ ಭಾಗಕ್ಕೆ ಇದೊಂದು ಕಾಮಧೇನುವಾಗಿ ಬೆಳೆಯುತ್ತಿದೆ. ರೈತರು ಕಬ್ಬನ್ನು ನೀಡಿದರೇ ಮಾತ್ರ ಕಾರ್ಖಾನೆಯು ಉಳಿಯುತ್ತದೆ. ರೈತರ ವಿನಃ ಕಾರ್ಖಾನೆ ಮುಂದುವರೆಯುವುದು ಅಸಾಧ್ಯ. ಅದಕ್ಕಾಗಿ ಈ ಕಾರ್ಖಾನೆಯು ಮುಂದುವರೆಯಬೇಕಾದರೇ ಇದೇ ಕಾರ್ಖಾನೆಗೆ ಕಬ್ಬನ್ನು ನೀಡಿ ಸಹಕರಿಸಬೇಕೆಂಬ ನನ್ನ ಮನವಿಗೆ ಅಪಾರ್ಥ ಕಲ್ಪಿಸಿ ಸಾಕಷ್ಟು ಟೀಕಿಸಿದರು. ನಾನು ನನ್ನ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಉತ್ತರಿಸಲು ಹೋಗಿಲ್ಲ, ಬದಲಾಗಿ ಕೆಲಸದ ಮೂಲಕ ಅವರಿಗೆ ಉತ್ತರ ನೀಡಿದ್ದೆನೆ ಎಂದರು.ಶ್ರೇಷ್ಠ ರೈತರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ 19 ಫಲಾನುಭವಿಗಳಿಗೆ ಕೃಪಿ ಯಂತ್ರೋಪಕರಣಗಳನ್ನು ಹಾಗೂ 35 ಫಲಾನುಭವಿಗಳಿಗೆ ಹನಿ ನೀರಾವರಿ ಘಟಕಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆಗೈದಿರುವ ತಾಲೂಕು ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿಗೆ ಭಾಜಣರಾದ ಹವಗಿಯ ಮಂಜುನಾಥ ವಿಠ್ಠಲ ಯದೋನಿ, ಕೆ.ಕೆ. ಹಳ್ಳಿಯ ಮಹಾಬಳೇಶ್ವರ ಕೇರಕಾರ, ಬಡಾಕಾನ ಶಿರಢಾದ ರುಕ್ಮಿಣಿ ಮಿಂಡೋಳಕರ, ಕೆರವಾಡ ಗ್ರಾಮದ ಅಜಿತ ಸಹದೇವ ನಿಂಗನಗೌಡಾ ಹಾಗೂ ಜನಗಾ ಗ್ರಾಮದ ಚಂದ್ರಕಾಂತ ಜೈವಂತ ಬಿರ್ಜೆ ಅವರನ್ನು ಶಾಸಕರು ಸನ್ಮಾನಿಸಿದರು.ರಾಜ್ಯ ಕೃಷಿಕ ಸಮಾಜಕ್ಕೆ 1 ಲಕ್ಷ ದೇಣಿಗೆ ನೀಡಿದ ಹಳಿಯಾಳ ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ತಕ್ಷ ಶಂಕರ ಕಾಜಗಾರ ಅವರನ್ನು ಸಹ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾರ್ಯಾಗಾರದ ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾದ ಯ್ಯೂಟ್ಯೂಬರ್ ಗೌರಿಶಂಕರ ಕರೋಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಪ್ರಮುಖರಾದ ಸಂಜು ಮಿಶಾಳೆ, ತಹಸೀಲ್ದಾರ್ ಫಿರೋಜಷಾಹ ಸೋಮನಕಟ್ಟಿ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೊಬಾಟೆ, ಸುರೇಶ ಮಾನಗೆ, ಸಂಭಾಜಿ ಜಾವಳೇಕರ, ಉಮೇಶ ಬೊಳಶೆಟ್ಟಿ, ರವಿ ತೋರಣಗಟ್ಟಿ, ಅಶೋಕ ಮೇಟಿ, ನಾರಾಯಣ ಬೊಬಾಟೆ ಹಾಗೂ ಇತರರು ಇದ್ದರು.ಕೃಷಿ ಸಹಾಯಕ ನಿರ್ದೇಶಕ ಪಿ.ಐ. ಮಾನೆ ಅವರು ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಕೃಷಿ ಇಲಾಖೆಯ ಚಿಕ್ಕಮಠ ಹಾಗೂ ಇತರರು ಇದ್ದರು.