ಸಾರಾಂಶ
ಮೌನೇಶ್ ವಿಶ್ವಕರ್ಮಕನ್ನಡಪ್ರಭ ವಾರ್ತೆ ಬಂಟ್ವಾಳ
ಸಮಾಜದಲ್ಲಿ ಹಲವರು ತಮ್ಮದೇ ರೀತಿಯ ಸೇವಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಕೆಲವರ ಸೇವೆಯನ್ನು ಸಮಾಜ ಗುರುತಿಸುತ್ತದೆಯಾದರೂ, ಹಲವರ ಕೊಡುಗೆ ನಿಗೂಢವಾಗಿಯೇ ಉಳಿಯುತ್ತದೆ.ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಪಿ. ಮಹಮ್ಮದ್ ಕುಂಞ ಮತ್ತು ಅವರ ಪತ್ನಿ ಕುಂಞಪಾತು ಇಂತಹ ಅಪರೂಪದ ಸೇವಾ ಮನೋಭಾವದ ದಂಪತಿ. ಅವರ ಕೊಡುಗೆಗಳಿಗೆ ಅಗತ್ಯವಾದ ಗೌರವ ದೊರಕದಿದ್ದರೂ, ಅವರ ತ್ಯಾಗ ಮತ್ತು ಪರಿಶ್ರಮ ಗ್ರಾಮಾಭಿವೃದ್ಧಿಗೆ ಮಹತ್ವದ ಪಾತ್ರ ವಹಿಸಿದೆ.* ಅಂಗಡಿಯಲ್ಲಿ ಶುರುವಾದ ವಿದ್ಯೆಯ ಬೆಳಕು:ಮಹಮ್ಮದ್ ಕುಂಞ ಅವರ ತಂದೆಗೆ ೧೪ ಮಂದಿ ಮಕ್ಕಳು. ಮನೆಯ ದೊಡ್ಡವನಾಗಿದ್ದರಿಂದ ಅವರು ಹೆಚ್ಚು ಓದಲು ಸಾಧ್ಯವಾಗಿರಲಿಲ್ಲ. ಆದರೆ ತಮ್ಮ ಶಿಕ್ಷಕ ಚಿಕ್ಕಪ್ಪನಿಂದ ಓದು, ಬರಹ ಕಲಿತುಕೊಂಡಿದ್ದರು. ಇಲ್ಲಿನ ಕಾಮಜಲು ಎಂಬ ಸಣ್ಣ ಗ್ರಾಮದಲ್ಲಿ ಅಂಗಡಿ ನಡೆಸುತ್ತಿದ್ದ ಅವರು, ಸ್ಥಳೀಯ ದಲಿತ ಮತ್ತು ಹಿಂದುಳಿದ ಸಮುದಾಯದ ಮಕ್ಕಳು ಶಿಕ್ಷಣಕ್ಕಾಗಿ ದೂರದ ಊರಿಗೆ ಹೋಗಬೇಕಾದ ಪರಿಸ್ಥಿತಿ ನೋಡಿದಾಗ, ನೊಂದುಕೊಂಡರು.
‘ನಾನು ಓದಲು ಸಾಧ್ಯವಾಗಲಿಲ್ಲ, ಆದರೆ ಈ ಮಕ್ಕಳು ಅಕ್ಷರ ಕಲಿಯಬೇಕು’ ಎಂಬ ಸಂಕಲ್ಪದಿಂದ, ತನ್ನ ಅಂಗಡಿ ಕೋಣೆಯಲ್ಲಿಯೇ ಮಕ್ಕಳು ಅಕ್ಷರಾಭ್ಯಾಸ ಕಲಿಯುವಂತೆ ಮಾಡಲಾರಂಭಿಸಿದರು. ಸ್ವಲ್ಪ ಸ್ವಲ್ಪವಾಗಿ ನಡೆಸಿದ ಈ ಪ್ರಯತ್ನ ಶಾಲೆಯಾಗಿ ಪರಿವರ್ತನೆಯಾಯಿತು, ನಂತರದ ದಿನಗಳಲ್ಲಿ ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ತೆರೆಯಲು ಅವರು ಹೋರಾಟ ನಡೆಸಿ ಯಶಸ್ವಿಯಾದರು.ಶಾಲೆಯ ಆರಂಭಿಕ ದಿನಗಳಲ್ಲಿ ತರಗತಿ ನಡೆಸಲು ಬೇರೇನೂ ಸೌಲಭ್ಯ ಇಲ್ಲದ ಕಾರಣ, ತಮ್ಮ ಅಂಗಡಿ ಪಕ್ಕದ ಶೆಡ್‌ನಲ್ಲಿ ಮಕ್ಕಳಿಗೆ ಅ, ಆ , ಇ , ಈ.. ಪಾಠ ಕಲಿಸಲಾರಂಭಿಸಿದರು. 1992ರಲ್ಲಿ ಅಂಗಡಿಯಲ್ಲಿ ಶಾಲೆ ಆರಂಭವಾಯಿತು. ಸುಮಾರು ಮೂರೂವರೆ ವರ್ಷ ಇಲ್ಲೇ ನಡೆಯಿತು. ಮಕ್ಕಳ ಸಂಖ್ಯೆ 15 ತಲುಪುತ್ತಲೇ ರಾಮಕೃಷ್ಣ ಅಡ್ಯಂತಾಯ ಅವರ ಕಟ್ಟಡಕ್ಕೆ ತರಗತಿಯನ್ನು ಸ್ಥಳಾಂತರಿಸಲಾಯಿತು. ಅಲ್ಲಿಯೂ ಕೆಲವು ವರ್ಷ ಪಾಠ ಹೇಳಿಕೊಡಲಾಯಿತು. ಪದವಿ ವರೆಗೆ ಕಲಿತ್ತಿದ್ದ ಪತ್ನಿ ಕುಂಞಪಾತು, ಮಕ್ಕಳಿಗೆ ಇಂಗ್ಲಿಷ್ ವ್ಯಾಕರಣ ಹೇಳಿಕೊಡತೊಡಗಿದರು. ಆಗ ಶಾಲೆಗೆ ನೇಮಕಗೊಂಡ ಏಕೋಪಾಧ್ಯಾಯ ಶಿಕ್ಷಕರಿಗೆ ಊಟೋಪಚಾರದ ವ್ಯವಸ್ಥೆಯನ್ನು ತಮ್ಮ ಖರ್ಚಿನಲ್ಲಿ ಮಾಡಿದರು.
1998ರಲ್ಲಿ ಮಹಮ್ಮದ್ ಕುಂಞಿಯವರು, ಸ್ಥಳೀಯ ಹಲವು ಗಣ್ಯರ ನೆರವಿನೊಂದಿಗೆ ಶಾಲೆಗಾಗಿ ಮನವಿ ಸಲ್ಲಿಸಿದರು. ಆಗ ಶಾಸಕರಾಗಿದ್ದ ರುಕ್ಮಯ ಪೂಜಾರಿ, ಕಟ್ಟಡದಲ್ಲಿ ನಡೆಯುತ್ತಿದ್ದ ಪಾಠವನ್ನು ನೋಡಿ ಶಾಲೆಯನ್ನು ಮಂಜೂರು ಗೊಳಿಸಿದರೆ, ನಂತರ ಶಾಸಕ ಕೆ.ಎಂ.ಇಬ್ರಾಹಿಂ ಎರಡು ಕೊಠಡಿಗಳನ್ನು ಮಂಜೂರು ಮಾಡಿಸಿದರು.ಇತ್ತೀಚೆಗಷ್ಟೇ ರಜತಮಹೋತ್ಸವ ಆಚರಿಸಿದ ಈ ಕಾಮಜಲು ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ೩೬ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
* ಬಸ್ಸಿನ ದಾರಿ ತೋರಿಸಿದ ಹೋರಾಟಗಾರ್ತಿ:ಮಹಮ್ಮದ್ ಕುಂಞ ಅವರ ಪತ್ನಿ ಕುಂಞಪಾತು ಕೂಡ ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿದವರು. ತಮ್ಮೂರಿಗೆ ಸರ್ಕಾರಿ ಬಸ್ ತರಿಸುವುದು ಅವರ ದೊಡ್ಡ ಕನಸು. ಗ್ರಾಮದಲ್ಲಿ ಖಾಸಗಿ ಬಸ್‌ಗಳ ಸಂಚಾರ ಇದ್ದರೂ, ಅವುಗಳು ನಿಯಮಿತವಾಗಿರಲಿಲ್ಲ. ಇದು ಶಾಲೆಗೆ ಹೋಗುವ ಮಕ್ಕಳಿಗೆ, ದಿನನಿತ್ಯದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಅನೇಕ ಬಾರಿ ಮಕ್ಕಳು ಬಸ್ ಬರುವ ನಿರೀಕ್ಷೆಯಲ್ಲಿ ತಡವಾಗಿ ಶಾಲೆಗೆ ಹೋಗಬೇಕಾಗುತ್ತಿತ್ತು ಅಥವಾ ಮನೆಗೆ ವಾಪಸ್ ಹಿಂತಿರುಗಬೇಕಾಗುತ್ತಿತ್ತು. ಇದನ್ನು ಕಂಡು ಬೇಸರಗೊಂಡ ಕುಂಞಪಾತು, ಸರ್ಕಾರದ ಕಚೇರಿಗಳಿಗೇ ತೆರಳಿ ಸಮಸ್ಯೆಯನ್ನು ಮನವರಿಕೆ ಮಾಡಿಸಿದರು. ಅನೇಕ ಸುತ್ತು, ನಾನಾ ವ್ಯತಿರಿಕ್ತ ಪ್ರತಿಕ್ರಿಯೆಗಳನ್ನು ಎದುರಿಸಿದರೂ ಅವರು ಹಿಂಜರಿಯದೆ ಹೋರಾಟ ಮುಂದುವರಿಸಿದರು. ಅವರ ದಿಟ್ಟ ಪ್ರಯತ್ನದಿಂದಾಗಿ ಮಾಣಿಲ ಮತ್ತು ಪಕಳಕುಂಜ ಗ್ರಾಮಗಳಿಗೆ ಮೂರು ಸರ್ಕಾರಿ ಬಸ್‌ಗಳ ಸಂಚಾರವನ್ನು ನಿರ್ವಹಿಸಲು ಸರ್ಕಾರ ಹಂತಹಂತವಾಗಿ ಒಪ್ಪಿಕೊಂಡಿತು.ಹೋರಾಟದ ಹಾದಿಯಲ್ಲಿ ಸಹಕಾರ ನೀಡಿದವರಿದ್ದಂತೆ, ಅವರ ಪ್ರಯತ್ನವನ್ನು ಅಡ್ಡಿಪಡಿಸುವರೂ ಇರುತ್ತಾರೆ. ಆದರೆ ಕುಂಞಪಾತು ಎಲ್ಲ ಅಡೆತಡೆಗಳನ್ನು ಮೀರಿ, ತಮ್ಮ ಗುರಿ ಸಾಧಿಸಿದರು. ಹೀಗಾಗಿ ಈ ಗ್ರಾಮದಲ್ಲಿ ಅವರ ಹೆಸರಿಗಿಂತ, ‘ಬಸ್ಸಿನ ಬ್ಯಾರ್‍ದಿ’ ಎಂಬ ಹೆಸರೇ ಹೆಚ್ಚು ಜನಪ್ರಿಯವಾಗಿದೆ. ತಮ್ಮ ಹೋರಾಟದ ಹಿನ್ನೆಲೆಯಲ್ಲಿ, ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿಗಳೂ ಸಹ ಬೆಂಬಲ ನೀಡಿದ ನೆನಪನ್ನು ಅವರು ಹೆಮ್ಮೆಪಡುವಂತೆ ಹೇಳಿಕೊಳ್ಳುತ್ತಾರೆ.ಇಂದಿಗೂ ಈ ದಂಪತಿಯ ಸೇವಾ ಕಾರ್ಯಗಳು ಜನಪ್ರಿಯತೆ ಪಡೆಯದೇ ಉಳಿದಿದ್ದರೂ, ಅವರ ಪರಿಶ್ರಮದ ಫಲವಾಗಿ ನೂರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಮತ್ತು ಸಾವಿರಾರು ಜನರು ಭದ್ರವಾಗಿ ಪ್ರಯಾಣ ಮಾಡುತ್ತಿದ್ದಾರೆ.