ಕಿತ್ತೂರು ರಾಣಿ ಚೆನ್ನಮ್ಮನ ಧೈರ್ಯ-ಸಾಹಸ ಅಮರ

| Published : Oct 25 2025, 01:00 AM IST

ಸಾರಾಂಶ

ರಾಮನಗರ: ಬ್ರಿಟಿಷರ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮನವರ ಧೈರ್ಯ, ಸಾಹಸ ಎಂದೆಂದಿಗೂ ಅಮರವಾದದ್ದು ಎಂದು ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ಬಣ್ಣಿಸಿದರು.

ರಾಮನಗರ: ಬ್ರಿಟಿಷರ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮನವರ ಧೈರ್ಯ, ಸಾಹಸ ಎಂದೆಂದಿಗೂ ಅಮರವಾದದ್ದು ಎಂದು ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ಬಣ್ಣಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಫಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸಮಾಜಕ್ಕೆ ಮಹನೀಯರ ಕೊಡುಗೆ ಹಾಗೂ ಧ್ಯೇಯೋದ್ದೇಶವನ್ನು ಸ್ಮರಿಸಿ ಅವರ ದಾರಿಯಲ್ಲಿ ನಡೆಯಲು ಜಯಂತಿಗಳನ್ನು ಆಚರಿಸಲಾಗುತ್ತದೆ. ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡಿದ ಮಹಿಳೆಯರ ಆದರ್ಶಗಳನ್ನು ಪಾಲಿಸಬೇಕು ಎಂದ ಅವರು, ಕಿತ್ತೂರು ರಾಣಿ ಚೆನ್ನಮ್ಮನ ಹಾಗೆ ಗುರುತಿಸಿಕೊಳ್ಳುವಂತಹ ಮಹಿಳಾ ಮಣಿಗಳಾಗಿ ವಿದ್ಯಾರ್ಥಿಗಳು ಹೊರಹೊಮ್ಮಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಜಂಜಾಟವಿರುವುದಿಲ್ಲ ಹಾಗಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಸಮಯ ಒಂದು ಸುವರ್ಣ ಯುಗವಾಗಿರುತ್ತದೆ. ಓದಿನ ಕಡೆ ಗಮನವಹಿಸಿ ಜ್ಞಾನಾರ್ಜನೆಯನ್ನು ಸಂಪನ್ಮೂಲವನ್ನಾಗಿಸಿಕೊಂಡು ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂದವರು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ದೇಶ ಕಂಡ ಅತ್ಯಂತ ಶ್ರೇಷ್ಠ ಮಹಿಳಾ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ. ಅವರಂತೆ ನಾಡಿನ ಮಹಿಳೆಯರು ಸ್ವಾಭಿಮಾನಿಯಾಗಿ ಬದುಕಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಪುಟ್ಟಸ್ವಾಮಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮನವರು 1778ರಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಧೂಳಪ್ಪ ದೇಸಾಯಿ ಮತ್ತು ತಾಯಿ ಪದ್ಮಾವತಿ. ಸಣ್ಣ ವಯಸ್ಸಿನಲ್ಲೆ ಬಿಲ್ವಿದ್ಯೆ, ಕತ್ತಿ ವರಸೆ ಮತ್ತು ಕುದುರೆ ಸವಾರಿಗಳಂತಹ ವಿದ್ಯೆಗಳನ್ನು ಕರಗತ ಮಾಡಿ ಕೊಂಡಿದ್ದರು ಎಂದು ತಿಳಿಸಿದರು.

ಕಿತ್ತೂರು ಸಂಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡು 1816 ರಿಂದ 1828ರ ವರೆಗೆ ತಮ್ಮ ಆಡಳಿತವನ್ನು ನಡೆಸಿದರು, ತನ್ನ ಪ್ರಾಬಲ್ಯದ ಮೇಲೆ ಹಿಡಿತ ಸಾಧಿಸಲು ರಾಣಿ ಚನ್ನಮ್ಮ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಬಂಡಾಯದ ಸಶಸ್ತç ಪ್ರತಿರೋಧವನ್ನು ನಡೆಸಿ ಮೊದಲ ಯುದ್ಧದಲ್ಲಿ ಬ್ರಿಟಿಷ್ ಸೈನ್ಯವನ್ನು ಸೋಲಿಸುತ್ತಾರೆ ಎಂದು ಕಿತ್ತೂರು ರಾಣಿ ಚೆನ್ನಮ್ಮ ಅವರ ಜೀವನ ಗಾಥೆಯನ್ನು ವಿವರಿಸಿ ವಿದ್ಯಾರ್ಥಿಗಳು ರಾಣಿ ಚೆನ್ನಮ್ಮನವರ ಜೀವನದ ಮೌಲ್ಯಗಳು ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ರಾಧ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯು ಕಿತ್ತೂರು ರಾಣಿ ಚೆನ್ನಮ್ಮನ ಏಕಪಾತ್ರಾಭಿನಯ ಪ್ರಸ್ತುತ ಪಡಿಸಿದರು. ಡಾ. ವಿಶ್ವನಾಥಯ್ಯ , ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರದ ಉಪನ್ಯಾಸಕ ದೀಪಕ್, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಶಿವಣ್ಣ ಉಪಸ್ಥಿತರಿದ್ದರು.

23ಕೆಆರ್ ಎಂಎನ್ 3.ಜೆಪಿಜಿ

ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸಲಾಯಿತು.