ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ 110 ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯ ಕೀರ್ತಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಗೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ 110 ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಬಂಧ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ನನಗೆ ಹಾಗೂ ಡಿಸಿಎಂಗೆ ಮನವಿ ಮಾಡಿದ್ದರು ಎಂದರು.

ಗಣೇಶ್‌ ಪ್ರಸಾದ್‌ ಮೂರು ವರ್ಷದ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಒಬ್ಬ ಉತ್ತಮ ಶಾಸಕ ಎಂದು ಹೆಸರು ಪಡೆದಿದ್ದಾರೆ, ಮಹದೇವ ಪ್ರಸಾದ್‌ ಅವರ ರೀತಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಗಣೇಶ್‌ ಪ್ರಸಾದ್‌ ಅಭಿವೃದ್ಧಿ ಕೆಲಸ ತರಲು ಉತ್ಸಾಹಿಯಾಗಿದ್ದಾರೆ. ನಮ್ಮ ಸರ್ಕಾರ ಕೂಡ ನಿಮ್ಮ ಉತ್ಸಾಹಕ್ಕೆ ಪ್ರೋತ್ಸಾಹಿಸುತ್ತದೆ ಹಾಗೂ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.ಬೇರೆ ಮಾತನಾಡಲ್ಲ:


ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ನನ್ನ ಭೇಟಿಯಾದಾಗಲೆಲ್ಲ ಗುಂಡ್ಲುಪೇಟೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತಾರೆ. ಕ್ಷೇತ್ರದ ಜನರ ಆಶೀರ್ವಾದ ಸದಾ ಗಣೇಶ್‌ ಪ್ರಸಾದ್‌ ಮೇಲೆ ಇರಲಿ ಎಂದರು.

ಕಾರ್ಯಕರ್ತರ ಗದರಿದ ಸಿಎಂ!

ಪಟ್ಟಣದಲ್ಲಿ ನಡೆದ ೧೧೦ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಲು ಬಂದಾಗ, ಕೆಲ ಕಾರ್ಯಕರ್ತರು ವೇದಿಕೆಯಿಂದ ನಿರ್ಗಮಿಸುತ್ತಿದ್ದದ್ದನ್ನು ಕಂಡ ಮುಖ್ಯಮಂತ್ರಿಗಳು ಕಾರ್ಯಕರ್ತರನ್ನು ಗದರಿ ಕೂರಿಸಿದ ಘಟನೆ ನಡೆಯಿತು.

ನಾವೇನು ತಮಾಷೆಗೆ ಬಂದಿದ್ದೀವಾ? ಶಾಸಕ ಗಣೇಶ್‌ ಪ್ರಸಾದ್‌ ಸಮಾರಂಭ ಆಯೋಜಿಸಿದ್ದಾರೆ. ಸಮಾರಂಭಕ್ಕೆ ಬಂದ್ಮೇಲೆ ನಮ್ಮ ಮಾತು ಕೇಳಬೇಕು ಎಂದರಲ್ಲದೆ, ಕಾಂಗ್ರೆಸ್‌ ಕಾರ್ಯಕರ್ತರು ಶಿಸ್ತಿನಿಂದ ನಡೆದುಕೊಳ್ಳಬೇಕು ಎಂದು ಸೂಚಿಸಿದರು.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಸುನೀಲ್‌ ಬೋಸ್‌, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್‌.ಕೃಷ್ಣಮೂರ್ತಿ, ದರ್ಶನ್‌ ಧ್ರುವನಾರಾಯಣ, ಮಾಜಿ ಸಚಿವೆ ಡಾ. ಗೀತಾ ಮಹದೇವಪ್ರಸಾದ್‌, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಚಾಮುಲ್‌ ಅಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕ ನಂಜುಂಡಪ್ರಸಾದ್‌, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಗ್ಯಾರಂಟಿ ಯೋಜನೆ ಅಧ್ಯಕ್ಷ

ಎಚ್‌.ವಿ.ಚಂದ್ರು, ಮುಖಂಡರಾದ ಎಚ್‌.ಎಸ್‌. ನಂಜಪ್ಪ, ಕಬ್ಬಹಳ್ಳಿ ಮಹೇಶ್‌, ಜಿಲ್ಲಾಧಿಕಾರಿ ಶ್ರೀರೂಪ, ಸಿಇಓ ಮೋನಾರೋತ್‌, ಎಸ್ಪಿ ಮುತ್ತುರಾಜ್‌, ಎಡಿಸಿ ಜವರೇಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್.ನಂದಕುಮಾರ್‌, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಸ್.ಶಿವನಾಗಪ್ಪ, ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು, ಹಾಪ್‌ ಕಾಮ್ಸ್‌ ಅಧ್ಯಕ್ಷ ಎಂ.ನಾಗೇಶ್, ತಾಪಂ ಮಾಜಿ ಉಪಾಧ್ಯಕ್ಷ ಬಂಗಾರ ನಾಯಕ, ತಾಪಂ ಮಾಜಿ ಸದಸ್ಯ ಬೆಟ್ಟಹಳ್ಳಿ ಕೆಂಪರಾಜು, ಪುರಸಭೆ ನಿಕಟ ಪೂರ್ವ ಅಧ್ಯಕ್ಷ ಶಶಿಧರ್‌ ಪಿ ದೀಪು, ಗ್ರಾಪಂ ಮಾಜಿ ಅಧ್ಯಕ್ಷರಾದ ದೇವರಹಳ್ಳಿ ಪ್ರಭು, ಜಿ.ಮಹೇಶ್‌, ಕೋಟೆಕೆರೆ ಫ್ಯಾಕ್ಸ್‌ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ, ವಕೀಲ ಕಿರಣ್‌, ಅಂಬರೀಶ್‌ ಸೇರಿ ಸಹಸ್ರಾರು ಮಂದಿ ಇದ್ದರು.