ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರದೇಶದಲ್ಲೇ ಮೊದಲ ಬಾರಿಗೆ ಮೈಸೂರು ಇನ್ಸೂರೆನ್ಸ್ ಎಂಬ ಜೀವವಿಮೆ ತಂದ ಹೆಗ್ಗಳಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ಇತಿಹಾಸ ತಜ್ಞ ಧರ್ಮೇಂದ್ರಕುಮಾರ್ ಬಣ್ಣಿಸಿದರು.ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಾಗೂ ಪ್ರತಿಭಾ ಪುರಷ್ಕಾರ ಸಮಾರಂಭದಲ್ಲಿ ಮಾತನಾಡಿ, ಮೈಸೂರು ಸಂಸ್ಥಾನ ಆಳಿದ 10ನೇ ಚಾಮರಾಜ ಒಡೆಯರ್, 3ನೇ ಕೃಷ್ಣರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಈ ಭಾಗದ ಜನತೆ ಸದಾ ನೆನಪು ಮಾಡಿಕೊಳ್ಳಬೇಕು ಎಂದರು.ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ಕಾಲ ಅವಿಸ್ಮರಣೀಯವಾಗಿದೆ. ತಮ್ಮ ಆಡಳಿತದಲ್ಲಿ ಕೃಷಿ, ಶಿಕ್ಷಣ, ಮೀಸಲಾತಿ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸುಧಾರಣೆ ತಂದು ಈ ಭಾಗದ ಜನರು ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡಿದರು. ನಾಲ್ವಡಿಯವರು ಎಲ್ಲಿಗೆ ಹೋದರು ಸದಾ ಮೈಸೂರು ದೇಶದ ಜನರ ನೆಮ್ಮದಿಯನ್ನೇ ಬಯಸುತ್ತಿದ್ದರು.ನಾಲ್ವಡಿಯವರು ಆ ಕಾಲದಲ್ಲಿಯೇ ಪ್ರಪಂಚದ 7ನೇ ಶ್ರೀಮಂತರಾಗಿದ್ದರು. ಗುರು-ಹಿರಿಯರ ಬಗ್ಗೆ ಭಕ್ತಿ ಹೊಂದಿದ್ದರು. ಆ ಕಾಲದಲ್ಲಿ ರಾಜ್ಯಭಾರ ಬೆಂಕಿಯ ಮೇಲಿನ ಹಾಸಿಗೆಯಂತಿತ್ತು. ಸಾಕಷ್ಟು ಅಡೆತಡೆಗಳು ಎದುರಾದರೂ ಯಶಸ್ವಿಯಾಗಿ ಅಧಿಕಾರ ನಡೆಸಿದರು ಎಂದು ತಿಳಿಸಿದರು.ದೇಶದಲ್ಲಿ ಜೀವವಿಮೆಯ ಬಗ್ಗೆ ಪರಿಕಲ್ಪನೆಯೇ ಇಲ್ಲದ ದಿನಗಳಲ್ಲಿ 1936ರಲ್ಲಿ ಮೊದಲ ಬಾರಿಗೆ ಮೈಸೂರು ಇನ್ಸೂರೆನ್ಸ್ ಹೆಸರಿನ ಜೀವವಿಮೆ ಜಾರಿಗೆ ತಂದರು. ಮೊದಲ ಬಾರಿಗೆ ಮೀಸಲಾತಿ ಕಲ್ಪಿಸಿದರು. ವಾಣಿವಿಲಾಶ ಹೆಣ್ಣುಮಕ್ಕಳ ಶಾಲೆ ಆರಂಭಿಸಿ ದೇಶದಲ್ಲಿ ಮೊದಲಬಾರಿಗೆ ಹೆಣ್ಣುಮಕ್ಕಳಿಗೆ ಶಿಕ್ಷಣ ದೊರಕಿಸಿಕೊಟ್ಟರು ಎಂದರು.ಮತದಾನದ ಹಕ್ಕು ನೀಡಿ ಮೊದಲ ಬಾರಿಗೆ ಮತದಾನ ನಡೆಸಿ 144 ಮಂದಿ ಕೌನ್ಸಿಲರ್ ಚುನಾಯಿಸಿದ್ದ ಮೊದಲ ರಾಜಸಂಸ್ಥಾನ. 1960ರಲ್ಲಿ ವನ್ಯಜೀವಿ ಸಂರಕ್ಷಣೆ ಕಾಯ್ದೆ ಜಾರಿಗೆ ತರುವ ಜತೆಗೆ ಈ ಭಾಗದಲ್ಲಿ 18 ಲಕ್ಷ ಎಕರೆ ಪ್ರದೇಶವನ್ನು ಅರಣ್ಯ ಸಂರಕ್ಷಿತ ಪ್ರದೇಶವೆಂದು ಘೋಷಿಸಿದ್ದ ಪರಿಣಾಮವೇ ಈ ಭಾಗದಲ್ಲಿ ಕಾಡುಗಳು ಅರಣ್ಯಗಳು ಬೆಳೆಯುವಂತಾಯಿತು. ಮೈಸೂರಿ ಸ್ಯಾಂಡಲ್ ಸೋಪು ತಯಾರಿಸುವುದು ಜತೆಗೆ ಪ್ರಪಂಚದ ಹಲವು ದೇಶಗಳಿಗೆ ಶ್ರೀಗಂಧದ ಎಣ್ಣೆ ರಫ್ತು ಮಾಡುತ್ತಿದ್ದು ಹೆಮ್ಮಯ ಮೈಸೂರು ಸಂಸ್ಥಾನ ಎಂದರು.ಸ್ವಾತಂತ್ರ್ಯ ಚಳವಳಿಗೆ ನಾಲ್ವಡಿಯವರು ಹಣ ನೀಡಿದ್ದರು. ಮಹಾತ್ಮಗಾಂಧಿಜೀ ಅವರು ಮೈಸೂರಿಗೆ ಬಂದ ವೇಳೆ ಮೈಸೂರಿಗೆ ಸ್ವಾತಂತ್ರ್ಯ ಚಳವಳಿಯ ಅವಶ್ಯಕತೆ ಇಲ್ಲ. ಮೈಸೂರು ಸಂಸ್ಥಾನ ಮುಂದಿನ 100 ವರ್ಷದಷ್ಟು ಅಭಿವೃದ್ದಿ ಹೊಂದಿದೆ ಎಂದು ಹೇಳಿ ವಾಪಸ್ಸಾಗಿದ್ದರು. ಅಷ್ಟರ ಮಟ್ಟಿಗೆ ಮೈಸೂರು ದೇಶದ ಸಂವೃದ್ಧಿಯಾಗಿತ್ತು ಎಂದು ಹೇಳಿದರು.ಬಿಜಿಎಸ್ ಶಿಕ್ಷಣ ಸಂಸ್ಥೆ ಕಾರ್‍ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಮೂಲಕ ಕಸಾಪ ಮಕ್ಕಳನ್ನು ಪ್ರೊತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದರು. ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಅಂಕಗಳಿಸಿದ ಶಾಲೆಗಳಿಗೆ, ಕನ್ನಡದಲ್ಲಿ 125ಕ್ಕೆ ಅಂಕಗಳಿಸಿದ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ 50 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ವೇಳೆ ಸಾಹಿತಿ ಹಿರೇಮರಳಿ ಗ್ರಾಮದ ಶಂಕರಾನಂದ ಬರೆದ ‘ದೇವರು ಕಾಣೆಯಾದನು’ ಎಂಬ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ, ಉಪ ತಹಸೀಲ್ದಾರ್ ಸಂತೋಷ್, ಬಿಆರ್‌ಸಿ ಪ್ರಕಾಶ್, ಬಿಸಿಓ ಅನಿತ, ಪ್ರೌಢಶಾಲೆ ಸಹ ಶಿಕ್ಷಕ ಸಂಘದ ಅಧ್ಯಕ್ಷ ಕೇಶವಮೂರ್ತಿ, ಶಿಕ್ಷಕರ ಸಂಘದ ರಾಜ್ಯ ಸಂಘಟಕ ಕಾರ್‍ಯದರ್ಶಿ ಜಯರಾಮು, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ,ಮಲ್ಲೇಶ್ ಹಾಜರಿದ್ದರು.