ಕೈಗೆ ಬಂದ ಬೆಳೆ ನೀರು ಪಾಲು

| Published : Oct 14 2024, 01:20 AM IST

ಸಾರಾಂಶ

ತಾಲೂಕಿನ ಕಿನ್ನಾಳ ಬಳಿಯ ಹಿರೇಹಳ್ಳ ಡ್ಯಾಂ ಭರ್ತಿಯಾದ ಹಿನ್ನೆಲೆ ನೀರು ಬಿಡಲಾಗಿದ್ದು, ಇದರಿಂದ ತೊಂದರೆಯೇ ಹೆಚ್ಚಾಗಿದೆ.

ಹಿರೇಹಳ್ಳ ನೀರಿನ ನೆರೆ ಅಪಾರ ಹಾನಿ । ನೀರಿನ ರಭಸಕ್ಕೆ ಕಿತ್ತು ಹೋದ ರಸ್ತೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಕಿನ್ನಾಳ ಬಳಿಯ ಹಿರೇಹಳ್ಳ ಡ್ಯಾಂ ಭರ್ತಿಯಾದ ಹಿನ್ನೆಲೆ ನೀರು ಬಿಡಲಾಗಿದ್ದು, ಇದರಿಂದ ತೊಂದರೆಯೇ ಹೆಚ್ಚಾಗಿದೆ.

ನೀರಿನ ರಭಸಕ್ಕೆ ರಸ್ತೆಗಳು ಸಹ ಕಿತ್ತು ಹೋಗಿವೆ. ಅಲ್ಲದೆ ಇನ್ನೇನೂ ಕೈ ಸೇರಬೇಕಾಗಿದ್ದ ಬೆಳೆ ನೀರು ಪಾಲಾಗಿವೆ.

ನಮ್ಮ ಕಷ್ಟ ಯಾರ್ ಮುಂದ ಹೇಳೋನ್ರೀ, ನಾಳೆ, ನಾಡಿದ್ದು ಹೊಲಕ್ಕ ಹೋಗಿ ಬೆಳೆ ಕಟಾವು ಮಾಡಬೇಕು ಅಂತಾ ಮಾಡಿದ್ವಿ, ಆದ್ರ ಹಿರೇಹಳ್ಳದ ನೀರು ಹೊಲಕ್ಕ ನುಗ್ಗಿ ಬಂದ ಬೇಳಿನ್ನೆಲ್ಲಾ ಹಾಳು ಮಾಡೆತ್ರೀ, ಇದರಿಂದ ಸಮೃದ್ಧಿಯಿಂದ ಬೆಳೆ ನೀರು ಪಾಲಾಗೈತ್ರಿ ಅಂತಾ ರೈತರು ದುಖಃ ತೊಡಿಕೊಳ್ಳುತ್ತಿದ್ದಾರೆ.

ನಮ್ಮ ಹೊಲ್ದಾನ ಬೆಳೆ ನೀರು ಪಾಲಾಗೈತ್ರಿ, ನಮ್ಮ ಬದುಕು ಇದರಿಂದ ನುಚ್ಚು ನೂರಾಗೈತಿ ನೋಡ್ರಿ ಎಂದು ನೋವು ಹಿರೇಸಿಂದೋಗಿಯ ಬಸಯ್ಯ ಹಿರೇಮಠ ರೈತ ನಮ್ಮ ನೋವು ತೊಡಿಕೊಂಡರು. ನಾನು 14 ಎಕರೆ ಮೆಕ್ಕೆಜೋಳ ಬೆಳೆದಿನ್ರೀ, ಎಕರೆಗೆ ಬೀಜ, ಗೊಬ್ಬರ ಹಿಡಿದು ಐದು ಸಾವಿರಕ್ಕೂ ಹೆಚ್ಚು ಖರ್ಚು ಮಾಡಿನ್ರೀ, ಆದ್ರ ಅದೆಲ್ಲಾ ಈಗ್ಸದ್ದೆ ನೀರಾಗ ಹಾಕಿದಂತ ಆಗೈತೀ ನೋಡ್ರೀ, 14 ಎಕರೆ ಮೆಕ್ಕೆಜೋಳ ಸಂಪೂರ್ಣ ಕೊಳೆತು ಹೋಕ್ಕೈತ್ರೀ ಎಪ್ಪಾ, ನಮ್ ಬದುಕಾ ನೀರು ಪಾಲಾಕ್ಕೈತಿ ನೋಡ್ರಿ ಎಂದು ನಮ್ಮ ಒಡಲಾಳದ ಅಳಲು ತೊಡಿಕೊಳ್ಳುತ್ತಾರೆ.

ಖರ್ಚು ಮಾಡಿದ ಹಣವೂ ಇಲ್ಲ, ಬೆಳೆಯೂ ಇಲ್ಲ. ಮತ್ತೆ ಬಿತ್ತಿ ಉಳುವುದು ಸಹ ಬಿಡಲು ಆಗದು ಅನ್ನುತ್ತಾರೆ ರೈತ ಬಸಯ್ಯ. ಹೀಗೆ ಹಿರೇಹಳ್ಳದ ನೀರಿನ ನೆರೆಗೆ ನೂರಾರು ರೈತರ ಬದುಕು ನೀರಿನಲ್ಲಿ ಮುಳುಗಿದೆ. ಅವರ ಕಂಬಿನಿಗೆ ಪರಿಹಾರ ಇಲ್ಲದಂತಾಗಿದೆ.

ನಿಜ, ಇನ್ನೇನೂ ಬೆಳೆ ರಾಶಿ ಮಾಡಬೇಕು ಅಂತಿದ್ದ ರೈತರ ಒಡಲಿಗೆ ಹಿರೇಹಳ್ಳ ನೀರಿನ ಬಿಸಿ ತಾಕಿದೆ. ಜಮೀನುಗಳಿಗೆ ನೀರು ನುಗ್ಗಿ ಬಂದ ಬೆಳೆ ಕೊಳೆಯುವಂತೆ ಮಾಡಿದೆ. ಜಮೀನಿನಲ್ಲಿ ನಿಂತ ನೀರು ತಗ್ಗುವುದು ಸುಲಭದ ಮಾತಲ್ಲ. ನೀರು ನಿಂತು ನಿಂತು ಭೂಮಿ ತೇವಾಂಶದಿಂದ ಹುದುಲು ಬಿಳುತ್ತದೆ. ಮನುಷ್ಯರು ಆ ಜಮೀನಿನಲ್ಲಿ ನಡೆದಾಡಲು ಸುಮಾರು ಹದಿನೈದು, ಇಪ್ಪತ್ತು ದಿನ ಬೇಕಾಗುತ್ತದೆ. ಸಂಪೂರ್ಣ ನೀರು ಇಂಗಿ ಜಮೀನು ಒಣಗುವವರೆಗೂ ನಡೆದಾಡಲು ಸಾದ್ಯವಾಗುವುದಿಲ್ಲ. ಅಷ್ಟರಲ್ಲಿ ಬೆಳೆಯಲ್ಲ ಸಂಪೂರ್ಣ ಕೊಳೆತು ಹೋಗುತ್ತದೆ.ಕಿತ್ತುಹೋದ ರಸ್ತೆಗಳ ಡಾಂಬರು:

ಹಿರೇಹಳ್ಳ ಡ್ಯಾಂನಿಂದ ಹಳ್ಳಕ್ಕೆ ನೀರು ಬಿಟ್ಟು ಪರಿಣಾಮವಾಗಿ ತಾಲೂಕಿನ ಕಲ್ಮಲಾ ಶಿಗ್ಗಾವ್ ರಸ್ತೆಯ ಡಾಂಬರ್ ಕಿತ್ತು ಹೋಗಿದೆ. ಸಂಪೂರ್ಣವಾಗಿ ರಸ್ತೆಯ ಡಾಂಬರ್ ಕಿತ್ತು ಹೋಗಿದ್ದು, ರಸ್ತೆ ಸಹ ನೀರಿನ ತೇವಾಂಶದಿಂದ ಹುದುಲು ಬಿದ್ದಿದೆ. ಇದರಿಂದ ಸಂಚಾರಿಗಳಿಗೆ ವಾಹನದ ಹಿಡಿತ ಸಹ ತಪ್ಪುತ್ತಿದೆ. ನೀರಿನ ರಭಸಕ್ಕೆ ರಸ್ತೆಗಳ ಮಗ್ಗಲುಗಳು ಸಹ ಕೊಚ್ಚಿ ಹೋಗಿವೆ. ಜನರು ಜಾಗೃತಯಿಂದ ವಾಹನ ಓಡಿಸುವ ಸಂದರ್ಭ ಎದುರಾಗಿದೆ.

ಹಿರೇಹಳ್ಳ ನೀರಿನ ಮಹಾಪೂರ ಡ್ಯಾಂ ಭರ್ತಿಯಾದರೆ ಇದ್ದೆ ಇರುತ್ತದೆ. ಆ ನಿಟ್ಟಿನಲ್ಲಿ ರೈತ ವರ್ಗಕ್ಕೆ ಇದರಿಂದ ತೊಂದರೆಗಳ ಮಹಾಪೂರ ತಗ್ಗದು. ಬೆಳೆ ಹಾಳಾದ ರೈತಗೆ ನೆರೆ ಪರಿಹಾರ ದೊರೆತರೆ ಹಿರೇಹಳ್ಳದ ನೀರಿಗೆ ಕಣ್ಣೀರಿಟ್ಟ ರೈತನ ಬದುಕಿಗೆ ಕೊಂಚ ನೆಮ್ಮದಿ ಸಿಕ್ಕಿತು.