ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಸಾಲ ಮಾಡಿ 2 ಎಕರೆ 30 ಗುಂಟೆ ಜಮೀನಿನಲ್ಲಿ ಸಾತ್ವಿಕ್ ತಂದೆ ಸತೀಶ ಲಿಂಬೆ ಬೆಳೆದಿದ್ದರು. ಮಗ ಸಾತ್ವಿಕ್ ಕೊಳವೆ ಬಾವಿಗೆ ಬಿದ್ದ ಹಿನ್ನೆಲೆಯಲ್ಲಿ ಮಗನ ರಕ್ಷಣೆಯ ಕಾರ್ಯಾಚರಣೆ ವೇಳೆ 40ಕ್ಕೂ ಅಧಿಕ ಲಿಂಬೆ ಗಿಡಗಳು ನಾಶವಾಗಿವೆ. ಇದರೊಟ್ಟಿಗೆ ಜಮೀನು ಕೂಡ ಹಾಳಾಗಿದೆ. ಮೊದಲೇ ಸಾಲಗಾರನಾಗಿರುವ ಸತೀಶ ಇದೀಗ ದಿಕ್ಕು ತೋಚದಂತಾಗಿದ್ದಾರೆ.
ಒಂದು ಕಡೆ ಮಗು ಉಳಿದ ಸಂತೋಷದಲ್ಲಿದ್ದರೆ, ಇನ್ನೊಂದು ಕಡೆಗೆ ಜಮೀನು ಹಾಳಾಗಿ ಅದನ್ನು ಅಭಿವೃದ್ಧಿ ಪಡಿಸುವುದು ಹೇಗೆ ಚಿಂತೆ ರೈತ ಸತೀಶನನ್ನು ಕಾಡುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಪ್ರತಿವರ್ಷ ಲಿಂಬೆ ಹಾಗೂ ಕಬ್ಬು ಬೆಳೆಯನ್ನು ಉಳಿಸಿಕೊಳ್ಳಲು ಸಾಲ ಮಾಡಿ ಎರಡು ಬೋರ್‌ವೆಲ್ ಕೊರೆಸಿದ್ದಾನೆ. ಇಂಡಿ ಕೆನರಾ ಬ್ಯಾಂಕಿನಲ್ಲಿ ₹2 ರಿಂದ 3 ಲಕ್ಷ, ಸ್ಥಳೀಯ ಪಿಕೆಪಿಎಸ್‌ನಲ್ಲಿ ₹1.50 ಲಕ್ಷಗಳನ್ನು ಸಾಲ ತೆಗೆದುಕೊಂಡರೆ, ಬೋರ್‌ವೆಲ್ ಕೊರೆಸಲು ಕೈಗಡವಾಗಿ ಗ್ರಾಮದ ಅವರಿವರ ಹತ್ತಿರ ಸಾಲ ತೆಗೆದುಕೊಂಡಿದ್ದು, ಒಟ್ಟು ₹10 ಲಕ್ಷಕ್ಕೂ ಅಧಿಕ ಸಾಲ ಬೆಳೆ ಉಳಿಸಿಕೊಳ್ಳಲು ಮಾಡಿದ್ದಾನೆ ಎನ್ನಲಾಗಿದೆ.ಮಗು ರಕ್ಷಿಸಲು ಭೂಮಿ ಅಗೆಯುವಾಗ ಸುಮಾರು 30 ರಿಂದ 40 ಲಿಂಬೆ ಬೆಳೆ ಹಾನಿಯಾಗಿವೆ. ಅಲ್ಲದೇ, ಜಮೀನಿನ ಎಲ್ಲೆಂದರಲ್ಲಿ ಮಣ್ಣಿನ ಡಿಗ್ಗಿ ಕಾಣುತ್ತಿದೆ.
ಮಗುವನ್ನು ಬದುಕುಳಿಸಿದಂತೆ, ರೈತನನ್ನು ಬದುಕಿಸಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಹೀಗಾಗಿ ತಾಲೂಕು ಆಡಳಿತ ಅಗೆದಿರುವ ಭೂಮಿಯನ್ನು ಮುಚ್ಚಿಸಿ, ರೈತ ಜಮೀನು ಸಾಗುವಳಿ ಮಾಡುವಂತೆ ಮಾಡಿದರೆ ರೈತ ಮತ್ತಷ್ಟು ಖುಷಿಯಾಗುತ್ತಾನೆ. 23 ಅಡಿ ಆಳದ ಭೂಮಿ ಅಗೆದು ತಗೆದಿರುವ ಮಣ್ಣು ಬಂಡೆಗಲ್ಲಿನ ರಾಶಿ ಜಮೀನ ತುಂಬೆಲ್ಲಾ ಬಿದ್ದಿದೆ. ಮಗು ಬದುಕಿ ಬಂದು ಆಟವಾಡುತ್ತಿರುವುದು ಕಣ್ಣಾರೆ ಕಂಡು ಸಂತೋಷ ಪಡುತ್ತಿದ್ದರೆ, ಇತ್ತ ಕುಟುಂಬ ವರ್ಗ ಜಮೀನದಲ್ಲಿ ಮಣ್ಣಿನ ರಾಶಿ ಕಂಡು ಮಮ್ಮಲು ಮರಗುತ್ತಿದ್ದಾರೆ. ಹೀಗಾಗಿ ತಾಲೂಕು ಆಡಳಿತ ಬಡ ರೈತನ ಜಮೀನು ಅಭಿವೃದ್ದಿಪಡಿಸಲು ಕ್ರಮ ಕೈಗೊಳ್ಳಬೇಕು ಎಂಬುದು ನಾಡಿನ ಜನತೆಯ ಆಗ್ರಹವಾಗಿದೆ.--
ಕೋಟ್ಲಚ್ಯಾಣದ ಸಿದ್ದಲಿಂಗ ಮಹಾರಾಜರ ದಯದಿಂದ ಮಗು ಬದುಕುಳಿದು ಬಂದಿದ್ದು ಸಂತಸ ತಂದಿದೆ. ತಾಲೂಕು ಆಡಳಿತ, ಜಿಲ್ಲಾಡಳಿತ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ, ಪೊಲೀಸ್ ಇಲಾಖೆ ಸಿಬ್ಬಂದಿ ಬಹಳ ಕಷ್ಟುಕಟ್ಟು ಈ ಕಾರ್ಯಾಚರಣೆ ಮಾಡಿ ಯಶಸ್ವಿಗೊಳಿಸಿದ್ದಾರೆ. ಮಗುವನ್ನು ಹೊರಗೆ ತೆಗೆಯುವುವಾಗ ಭೂಮಿಯನ್ನು ಅಗೆಯಲಾಗಿದೆ. ಅದನ್ನು ಮುಚ್ಚಿಸುವ ಕುರಿತು ಅಧಿಕಾರಿಗಳ ಜೊತೆ ಮಾತನಾಡಿ ಹೇಳುತ್ತೇನೆ.
-ಯಶವಂತರಾಯಗೌಡ ಪಾಟೀಲ,ಶಾಸಕರು,ಇಂಡಿ.--
ಮಗುವನ್ನು ಉಳಿಸಿಕೊಳ್ಳವುದಕ್ಕೆ ಮೊದಲು ಪ್ರಾಶಸ್ತ್ಯ ನೀಡಲಾಗಿದೆ. ಭೂಮಿ ಹಾಳಾಗವುದು, ಲಿಂಬೆ ಬೆಳೆ ಹಾಳಾಗುವದಕ್ಕಿಂತ ಮಗುವನ್ನು ಬದುಕುಳಿಸಬೇಕು ಎಂಬುವುದು ಎಲ್ಲರ ಬಯಕೆಯಾಗಿತ್ತು. ಮಗು ಎಲ್ಲರ ದಯದಿಂದ ಬದುಕಿ ಹೊರಬಂದಿದ್ದಾನೆ. ಮಗುವನ್ನು ಹೊರತಗೆಯಲು ಅಗೆದಿರುವ ತಗ್ಗು ಮುಚ್ಚಿಸುವ ಯಾವುದೇ ಪ್ರಾವಿಜನ್ ಇಲ್ಲ. ರೈತರೇ ಅದನ್ನು ಮುಚ್ಚಿಸಿಕೊಳ್ಳಬೇಕು.-ಅಬೀದ್ ಗದ್ಯಾಳ, ಎಸಿ,ಇಂಡಿ.
--ಮಗು ಬದುಕುಳಿದಿದ್ದು ದೊಡ್ಡದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಅಗೆದಿರುವ ತಗ್ಗು ಮುಚ್ಚಿಸುವ ಯೋಜನೆ ಇರುವುದಿಲ್ಲ. ಬೋರ್‌ವೆಲ್ ಕೊರೆದು ,ಅದರಲ್ಲಿ ನೀರು ಬಾರದಿದ್ದರೆ ಅದನ್ನು ಮುಚ್ಚುವ ಜವಾಬ್ದಾರಿ ಬೋರ್‌ವೆಲ್‌ದವರದ್ದು. ಹೀಗಾಗಿ ಅದನ್ನು ಬೋರ್‌ವೆಲ್ ಕೊರೆದ, ಬೋರ್‌ವೆಲ್ ಮಾಲೀಕನೇ ಮುಚ್ಚಿಸಬೇಕು. ಈ ಕುರಿತು ಎಸಿ ಅವರ ಗಮನಕ್ಕೆ ತಂದಿದ್ದೇನೆ. ಮೇಲಧಿಕಾರಿಗಳು ಬೋರ್‌ವೆಲ್ ಮಾಲೀಕರಿಗೆ ನೋಟಿಸ್ ನೀಡಬಹುದು.
-ನೀಲಗಂಗಾ,ತಾಪಂ,ಇಒ,ಇಂಡಿ.--
ನನ್ನ ಮಗನನ್ನು ಹಗಲಿ -ರಾತ್ರಿ, ಬಿಸಿಲು, ಊಟ,ನೀರು ಇಲ್ಲದೆ ಕಷ್ಟಪಟ್ಟು ಬೋರ್‌ವೆಲ್‌ದಿಂದ ಹೊರತಗೆದು ಮಗನನ್ನು ಉಳಿಸಿದಕ್ಕೆ ಎಲ್ಲ ಅಧಿಕಾರಿಗಳಿಗೆ ನಮ್ಮ ಕುಟುಂಬದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ. ಇರುವ 2 ಎಕರೆ 30 ಗುಂಟೆ ಜಮೀನದಲ್ಲಿ ಲಿಂಬೆ ಬೆಳೆ ಬೆಳೆದು ಬದುಕುತ್ತಿದ್ದೇವೆ. ಮಗು ಉಳಿದು ಕಣ್ಣಮುಂದೆ ಆಟವಾಡುತ್ತಿದ್ದಾನೆ. ನಮಗೆ ಅತೀವ ಸಂತೋಷವಾಗಿದೆ. ಆದರೆ ಬೆಳೆ ಬೆಳೆಯಲು ನಾಲ್ಕೈದು ವರ್ಷದಿಂದ ಬೋರ್‌ವೆಲ್ ಕೊರೆಯಿಸುತ್ತಾ ಬಂದಿರುವುದದರಿಂದ ₹10 ಲಕ್ಷಕ್ಕೂ ಅಧಿಕ ಸಾಲವಾಗಿದೆ. ಹೀಗಾಗಿ ಜಮೀನದಲ್ಲಿನ ತಗ್ಗು ಮುಚ್ಚಿಸುವುದು ನನಗೆ ಕಷ್ಟವಾಗುತ್ತಿದೆ. ಅಧಿಕಾರಿಗಳು ಇದೊಂದು ಪುಣ್ಯಕಟ್ಟಿಕೊಂಡರೆ ಸಹಾಯ ಮಾಡಿದಂತಾಗುತ್ತದೆ.-ಸತೀಶ ಮುಜಗೊಂಡ, ಸಾತ್ವಿಕ್ ತಂದೆ