ಸಮಾವೇಶಕ್ಕೆ ಸುಮಾರು 20 ಸಾವಿರಕ್ಕೂ ಅಧಿಕ ಜನತೆ ಸ್ವಯಂಪ್ರೇರಿತರಾಗಿ ಆಗಮಿಸಿ ಯೋಜನೆಯನ್ನು ಒಕ್ಕೊರಲಿನಿಂದ ವಿರೋಧಿಸಿದರು. ಇದೊಂದು ಐತಿಹಾಸಿಕ ಅಭೂತಪೂರ್ವ ಸಮಾವೇಶವಾಗಿ ಗೋಚರಿಸಿತು.
ಕನ್ನಡಪ್ರಭ ವಾರ್ತೆ ಶಿರಸಿ
ಸಮಾವೇಶಕ್ಕೆ ಸುಮಾರು 20 ಸಾವಿರಕ್ಕೂ ಅಧಿಕ ಜನತೆ ಸ್ವಯಂಪ್ರೇರಿತರಾಗಿ ಆಗಮಿಸಿ ಯೋಜನೆಯನ್ನು ಒಕ್ಕೊರಲಿನಿಂದ ವಿರೋಧಿಸಿದರು. ಇದೊಂದು ಐತಿಹಾಸಿಕ ಅಭೂತಪೂರ್ವ ಸಮಾವೇಶವಾಗಿ ಗೋಚರಿಸಿತು.ಸಾವಿರಾರು ಸಂಖ್ಯೆಯಲ್ಲಿದ್ದ ಮಹಿಳೆಯರು, ಯುವಕರು ಸಹ ಯೋಜನೆ ವಿರುದ್ಧ ಘೋಷಣೆ ಮೊಳಗಿಸುತ್ತ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕಲಾವಿದರಿಂದ ಮೊಳಗಿದ ಪರಿಸರಗೀತೆಗಳಿಗೆ ಜನತೆ ತಾಳ ಹಾಕುತ್ತ ದನಿಗೂಡಿಸಿದರು.ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಬೇರೆ ಬೇರೆ ಕಡೆಗಳಿಂದ ಆಗಮಿಸಿದ ಶ್ರೀಗಳು ಪಕ್ಷಾತೀತವಾಗಿ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದು ಯೋಜನೆಯ ವಿರುದ್ಧ ಕಹಳೆ ಮೊಳಗಿತು.ಸಮಾವೇಶದ ನಿರ್ಣಯಗಳು
1. ಪಶ್ಚಿಮ ಘಟ್ಟದಲ್ಲಿ ನದಿ ತಿರುವು, ಶರಾವತಿ ಪಂಪ್ಡ್ ಸ್ಟೋರೇಜ್ ಸೇರಿದಂತೆ ಬೃಹತ್ ಜಲ ವಿದ್ಯುತ್ ಯೋಜನೆ ಜಾರಿ ಮಾಡಬಾರದು.2. ವನವಾಸಿಗಳು, ರೈತರು, ವನ್ಯಜೀವಿಗಳು, ನದಿ ಹಾಗೂ ಅರಣ್ಯಗಳಿಗೆ ಬೇಡ್ತಿ-ಅಘನಾಶಿಸಿ ನದಿ ತಿರುವು ಯೋಜನೆ ಕುತ್ತು ತರಲಿದೆ ಎಂದು ಸಮಾವೇಶ ಏಕಾಭಿಪ್ರಾಯ ವ್ಯಕ್ತಪಡಿಸುತ್ತಿದೆ.3. ಜಿಲ್ಲೆಯ ಪರಿಸರ ಧಾರಣ ಸಾಮರ್ಥ್ಯ ಈಗಾಗಲೇ ಮುಗಿದಿದೆ ಎಂಬ ತಜ್ಞರ ವರದಿ ಹಾಗೂ ಜನಾಭಿಪ್ರಾಯ ಪರಿಗಣಿಸಿ ಸರ್ಕಾರ ನದಿ ತಿರುವು ಯೋಜನೆಗಳನ್ನು ಶಾಶ್ವತವಾಗಿ ಕೈ ಬಿಡಬೇಕು.4. ಮುಖ್ಯಮಂತ್ರಿ ನೀಡಿದ ಭರವಸೆಯಂತೆ ತಜ್ಞರು, ಕೊಳ್ಳ ಸಂರಕ್ಷಣಾ ಸಮಿತಿ ಪ್ರಮುಖರ ಸಭೆಯ ದಿನಾಂಕ ಪ್ರಕಟಿಸಬೇಕು.5. ಬೇಡ್ತಿ-ಅಘನಾಶಿಸಿ ಕೊಳ್ಳ ಸಂರಕ್ಷಣಾ ಸಮಿತಿ ನಿಯೋಗ ಕೇಂದ್ರ ಪರಿಸರ-ಅರಣ್ಯ ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡುವ ದಿನಾಂಕವನ್ನು ಜನಪ್ರತಿನಿಧಿಗಳ ಶೀಘ್ರ ನಿರ್ಧರಿಸಬೇಕು.6. ನದಿ ತಿರುವು ಯೋಜನೆಗಳ ಬಗ್ಗೆ ಡಿಪಿಆರ್ ತಯಾರಿಕೆ ರಾಜ್ಯ ಸರ್ಕಾರ ನೀಡಿರುವ ಒಪ್ಪಿಗೆಯನ್ನು ಹಿಂಪಡೆಯಬೇಕು.7. ಯೋಜನೆಗಳ ಸ್ಥಳ ಸಮೀಕ್ಷೆಗೆ ಅರಣ್ಯ ಇಲಾಖೆ ಅನುಮತಿ ನೀಡಬಾರದು.8. ಬೇಡ್ತಿ-ಅಘನಾಶಿನಿ ತೀರ ಪ್ರದೇಶದಲ್ಲಿ ಜನಸಹಭಾಗಿತ್ವದ ಕಿರು ನೀರಾವರಿ ಯೋಜನೆ ಕೈಗೊಳ್ಳಬೇಕು.9. ನದಿಗಳಿಗೂ ಜೀವಿಸುವ ಹಕ್ಕು ಹಾಗೂ ನೈಸರ್ಗಿಕ ಹರಿವು ಉಳಿಸಿಕೊಳ್ಳುವ ಹಕ್ಕು ನೀಡುವ ಕಾನೂನು ಜಾರಿಗೆ ಕೇಂದ್ರ, ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು.10. ಇನ್ನಷ್ಟು ಪ್ರಬಲವಾಗಿ ಅಹಿಂಸಾತ್ಮಕವಾಗಿ ಪಶ್ಚಿಮ ಘಟ್ಟ ಉಳಿಸಿ ಚಳವಳಿ ನಡೆಸಲು ಸಮಾವೇಶ ನಿರ್ಧರಿಸಿದೆ.ಸಭೆಯಲ್ಲಿ ನಿರ್ಣಯವನ್ನು ಸ್ಕೊಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯಕ ವಾಚಿಸಿದರು.