ಭೂಮಿಯಲ್ಲಿ ಕ್ರೂರವಾದ ಜೀವಿ ಸೊಳ್ಳೆ: ಡಾ. ಈಶ್ವರ ಸವಡಿ

| Published : Jul 15 2024, 01:52 AM IST

ಸಾರಾಂಶ

ಭೂಮಿಯ ಮೇಲೆ ಅತ್ಯಂತ ಕ್ರೂರವಾದ ಜೀವಿ ಇದ್ದರೆ ಅದು ಸೊಳ್ಳೆ.

ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಗಂಗಾವತಿ

ಭೂಮಿಯ ಮೇಲೆ ಅತ್ಯಂತ ಕ್ರೂರವಾದ ಜೀವಿ ಇದ್ದರೆ ಅದು ಸೊಳ್ಳೆ ಎಂದು ಗಂಗಾವತಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ ಹೇಳಿದರು.

ಆಸ್ಪತ್ರೆಯ ಸಭಾಂಗಣದಲ್ಲಿ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭೂಮಿಯ ಮೇಲೆ ಅತ್ಯಂತ ಕ್ರೂರವಾದ ಜೀವಿ ಯಾವುದಾದರೂ ಇದ್ದರೆ ಅದು ಸೊಳ್ಳೆ ಮಾತ್ರ. ಏಕೆಂದರೆ ಭೂಮಿಯ ಇರುವ ಸೊಳ್ಳೆಯಿಂದ ಕಚ್ಚಿಸಿಕೊಂಡು ಸಾಯುವವರಲ್ಲಿ ಮಾನವರ ಸಂಖ್ಯೆ ಅಧಿಕವಾಗಿದೆ. ಈ ಕಾರಣಕ್ಕಾಗಿ ಸೊಳ್ಳೆಯ ಕಡಿತ ಚಿಕ್ಕದಿದ್ದರೂ ಸಹ ಕಂಟಕ ತುಂಬಾ ದೊಡ್ಡದಾಗಿರುತ್ತದೆ. ಆದ್ದರಿಂದ ಸೊಳ್ಳೆಯಿಂದ ಉಂಟಾಗುವ ಎಲ್ಲ ಕಾಯಿಲೆಗಳ ನಿಯಂತ್ರಣ ಮಾಡುವುದು ಸಾರ್ವಜನಿಕರ ಜವಾಬ್ದಾರಿ ಆಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತರಬೇತಿದಾರರಾಗಿ ಆಗಮಿಸಿದ ಜಿಲ್ಲಾ ಮಲೇರಿಯಾ ಕಾರ್ಯಾಲಯದ ಕನ್ಸಲ್ಟೆಂಟ್ ರಮೇಶ್ ಸೊಳ್ಳೆಯಿಂದ ಬರುವ ಕಾಯಿಲೆಗಳ ಬಗ್ಗೆ ಹಾಗೂ ನಿಯಂತ್ರಣದ ಬಗ್ಗೆ ಶಿಕ್ಷಕರ ಪಾತ್ರದ ಬಗ್ಗೆ ತರಬೇತಿ ನೀಡಿದರು. ತಾಲೂಕು ಮೇಲ್ವಿಚಾರಕ ದೇವಿಂದ್ರ ಗೌಡ ಶಿಕ್ಷಕರಿಗೆ ಮಾಹಿತಿ ನೀಡಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗುರುರಾಜ್ ಹಿರೇಮಠ ಮಾತನಾಡಿ, ಡೆಂಘೀ ಒಂದು ಸಾಂಕ್ರಾಮಿಕ ಕಾಯಿಲೆ. ಇದಕ್ಕೆ ಕಾರಣವಾಗು ಸೊಳ್ಳೆ ನಮ್ಮ ಮನೆಯ ಸುತ್ತಮುತ್ತ ಇರುವ ಶುದ್ಧವಾದ ನೀರಿನಲ್ಲಿ ಹುಟ್ಟುತ್ತದೆ. ಹಾಗಾಗಿ ಎಲ್ಲ ನೀರಿನ ಸಲಕರಣೆಗಳನ್ನು ಮುಚ್ಚಬೇಕು, ವಾರಕ್ಕೆ ಒಂದು ದಿನವಾದರೂ ಸಂಪೂರ್ಣವಾಗಿ ಖಾಲಿ ಮಾಡಿ ಒಣಗಿಸಿ ಮತ್ತೆ ನೀರು ತುಂಬಬೇಕು ಎಂದು ತಿಳಿಸಿದರು.

ಜಿಲ್ಲಾ ಮಲೇರಿಯಾ ಕಾರ್ಯಾಲಯದ ಮೇಲ್ವಿಚಾರಕ ಭೀಮೇಶ್ ಮಾತನಾಡಿದರು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸುರೇಶ್, ರಮೇಶ್, ಗುರು ಭಾಗವಹಿಸಿದ್ದರು.