ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಗುವಿಗೆ ಜನ್ಮಸ್ಥಳವೇ ಮೊದಲ ಪಾಠಶಾಲೆ, ಜನ್ಮದಾತೆ ತಾಯಿಯೇ ಮೊದಲ ಗುರು, ಶಾಲೆ ಮತ್ತು ಗುರು ಮಕ್ಕಳಿಗೆ ವಿದ್ಯೆಮತ್ತು ಬುದ್ದಿ ನೀಡುವ ಎರಡನೆ ಶಾಲೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.ನಗರ ಹೊರವಲಯದ ಸೂಲಾಲಪ್ಪ ದಿನ್ನೆಯ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ನರ್ಸರಿ ಮತ್ತು ಎಲ್.ಕೆ.ಜಿಯ 350 ಮಕ್ಕಳಿಗಾಗಿ ಆಯೋಜಿಸಿದ್ದ ಪ್ರಥಮ ಅಕ್ಷರಾಭ್ಯಾಸದ ಕಾರ್ಯಕ್ರಮ ಜ್ಞಾನಾಂಕುರ - 2025ರ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಪೋಷಕರು ಜಗಳವಾಡಬೇಡಿಮಕ್ಕಳ ಮನಸ್ಸು ತುಂಬಾ ಸೂಕ್ಮವಾಗಿರುತ್ತದೆ. ಪೋಷಕರು ಏನು ಮಾಡುತ್ತಾರೋ ಅದು ಮಕ್ಕಳ ಮನಸ್ಸಿಗೆ ನಾಟುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಮುಂದೆ ಜಗಳ, ಮುನಿಸು, ಬೈಗುಳಗಳಂತಹುದನ್ನು ಮಾಡಬೇಡಿ, ಮಾಡಿದರೆ ನಿಮ್ಮ ಮಗು ನಾಳೆ ಅದನ್ನೆ ಮಾಡುತ್ತದೆ. ಹಾಗೇನಾದರೂ ಮಾಡುವುದಿದ್ದರೆ ಮಕ್ಕಳಿಲ್ಲದಾಗ ನೀವಿಬ್ಬರೆ ಇದ್ದಾಗ ಮಾಡಿಕೊಳ್ಳ ಬೇಕು. ನಿಮ್ಮ ಬದುಕು ಸ್ವರ್ಗದಂತಿರಬೇಕಾದರೆ ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳಸಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಮಕ್ಕಳು ಮೊದಲ ತಪ್ಪಿಗೆ ಹೆತ್ತವರು ಶಿಕ್ಷೆ ನೀಡಿದರೆ ಮುಂದೆ ಆ ಮಕ್ಕಳು ತಪ್ಪು ಮಾಡಲು ಹೆದರುತ್ತವೆ. ಎಲ್ಲ ಮಕ್ಕಳಿಗೂ ಸಂಸ್ಕಾರ ಜನ್ಮದಿಂದಲೇ ಮನಸ್ಸಿನಲ್ಲೇ ಇರುತ್ತದೆ ಅದಕ್ಕೆ ಪೋಷಕರು ನೀರೆರೆದು ಬೆಳಸಿ ಪೋಷಿಸಿದಾಗ ಸಮಾಜ ಮತ್ತು ದೇಶಕ್ಕೆ ಗೌರವ ತರುತ್ತಾರೆ ಎಂದು ತಿಳಿಸಿದರು.ಮಕ್ಕಳ ತಪ್ಪು ತಿದ್ದಬೇಕು
ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್ ಮಾತನಾಡಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ತಾಯಿಯ ಪಾತ್ರ ನಿರಂತರವಾಗಿರಬೇಕು. ತಾಯಿಯಿಂದ ಪ್ರಾರಂಭವಾದ ಪಾಠ ಸರಿಯಾದ ದಾರಿಯಲ್ಲಿ ಸಾಗಿದರೆ ಮಕ್ಕಳು ಅತ್ಯುನ್ನತ ಸ್ಥಾನವನ್ನು ತಲುಪಬಹುದು. ತಾಯಿಯು ಮಕ್ಕಳ ತಪ್ಪುಗಳನ್ನು ತಿದ್ದುವ ಸಮಾಜದಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದರು.ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ಎನ್.ಶಿವರಾಮರೆಡ್ಡಿ ಮಾತನಾಡಿ, ಮಕ್ಕಳಿಗೆ ಮನೆಯು ಎಷ್ಟು ಮುಖ್ಯವೋ ಶಾಲೆಯೂ ಅಷ್ಟೇ ಮುಖ್ಯ. ಮಕ್ಕಳು ತಾಯಿಯ ಗರ್ಭದಿಂದಲೇ ಕಲಿತಿರುವ ಅಂಶಗಳನ್ನು ಚಿಗುರೊಡಿಯುವಂತೆ ಮಾಡುವುದೇ ಈ ಜ್ಞಾನಾಂಕುರ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.
ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಿಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ಮಾತನಾಡಿ,ಬೆಳೆಯುವ ಸಿರಿ ಮೊಳೆಕೆಯಲ್ಲಿ ಎಂಬ ಗಾದೆಯಂತೆ ಮಕ್ಕಳ ಪ್ರತಿಭೆಯನ್ನು ಚಿಕ್ಕವಯಸ್ಸಿನಲ್ಲಿಯೇ ಗುರ್ತಿಸಿ ಪ್ರೋತ್ಸಾಹಿಸಿದರೆ ಉನ್ನತ ಸಾಧನೆಯನ್ನು ಮಾಡಬಹುದು ಎಂದರು.
ಸಮಾರಂಭದಲ್ಲಿ ನ್ಯಾ. ಬಿ.ಶಿಲ್ಪ, ತಹಸೀಲ್ದಾರ್ ಅನಿಲ್, ಅಗಲಗುರ್ಕಿ ಬಿಜಿಎಸ್ ಶಾಲೆಯ ಪ್ರಾಂಶುಪಾಲ ಡಿ.ಸಿ.ಮೋಹನ್‌ಕುಮಾರ್, ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಇದ್ದರು.