ಸಮಾನ ಮನಸ್ಕರ ಜೊತೆಗೆ, ಭಿನ್ನಮತಗಳ ಜೊತೆಗೆ ಕುಳಿತುಕೊಂಡು ಚರ್ಚಿಸುವ ಅವಕಾಶಗಳೇ ಕಡಿಮೆಯಾಗುತ್ತಿರುವ ಕಾಲದಲ್ಲಿ, ನಾವು ಒಂದು ಸಂವಾದದ ಸಂಸ್ಕೃತಿಯನ್ನು ನಮ್ಮ ಪ್ರಜಾಸತ್ತಾತ್ಮಕವನ್ನು ಉಳಿಸುವ ಭಾಗವಾಗಿ ಮತ್ತೊಮ್ಮೆ ಮುಂಚೂಣಿಗೆ ತರಬೇಕಾದ ಅಗತ್ಯ ಇದೆ ಎಂದು ಪ್ರೊ.ರಹಮತ್ ತರೀಕೆರೆ ಹೇಳಿದರು.
ಮಂಗಳೂರು : ಸಮಾನ ಮನಸ್ಕರ ಜೊತೆಗೆ, ಭಿನ್ನಮತಗಳ ಜೊತೆಗೆ ಕುಳಿತುಕೊಂಡು ಚರ್ಚಿಸುವ ಅವಕಾಶಗಳೇ ಕಡಿಮೆಯಾಗುತ್ತಿರುವ ಕಾಲದಲ್ಲಿ, ನಾವು ಒಂದು ಸಂವಾದದ ಸಂಸ್ಕೃತಿಯನ್ನು ನಮ್ಮ ಪ್ರಜಾಸತ್ತಾತ್ಮಕವನ್ನು ಉಳಿಸುವ ಭಾಗವಾಗಿ ಮತ್ತೊಮ್ಮೆ ಮುಂಚೂಣಿಗೆ ತರಬೇಕಾದ ಅಗತ್ಯ ಇದೆ ಎಂದು ಪ್ರೊ.ರಹಮತ್ ತರೀಕೆರೆ ಹೇಳಿದರು.
ಅಭಿಮತ ಮಂಗಳೂರು, ಭಗತ್ ಸಿಂಗ್ ಮೆಮೋರಿಯಲ್ ಕಲ್ಚರಲ್ ಟ್ರಸ್ಟ್ ವತಿಯಿಂದ ಮಂಗಳೂರಿನ ಬಲ್ಮಠ ಕೆಟಿಸಿ ಕ್ಯಾಂಪಸ್ನ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ‘ಜನ ನುಡಿ’ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ಸಂವಾದ ಸಂಸ್ಕೃತಿ ಭಾರತದಲ್ಲಿ, ಕರ್ನಾಟಕದಲ್ಲಿ ಕಾಣೆಯಾಗುತ್ತಿರುವ ಆತಂಕವಾಗುತ್ತದೆ. ಸಂವಾದ ಒಂದು ಡೆಮಾಕ್ರಟಿಕ್ ಆಕ್ಟ್. ಯಾವ ಸಮಾಜದಲ್ಲಿ ಸಂವಾದಗಳು ನಿಂತು ಹೋಗುತ್ತವೆಯೋ ಅಲ್ಲಿ ಸರ್ವಾಧಿಕಾರಿಗಳ ಉದಯವಾಗುತ್ತದೆ, ಶ್ರೇಷ್ಠತೆಯ ವ್ಯಸನಗಳು ಹುಟ್ಟುತ್ತವೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ, ಆಡಳಿತ-ವಿರೋಧ ಪಕ್ಷದವರು ತಮ್ಮ ಜವಾಬ್ದಾರಿ ನಿರ್ವಹಿಸುತ್ತಾರೆ ಎಂದು ನಾವು ಸುಮ್ಮನಿರದೆ, ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ, ಜಾಗೃತಿ ಕೆಲಸ ಮಾಡಬೇಕು ಎಂದರು.ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ದೆಹಲಿ ವಿದ್ಯಾರ್ಥಿ ಚಳುವಳಿಯ ಪ್ರತಿನಿಧಿ ಶರಣ್ಯ ವರ್ಮ, ಪ್ರೊ.ನರೇಂದ್ರ ನಾಯಕ್, ಡಾ.ರಮೇಶ್ ಬೆಳ್ಳಂಕೂಂಡ, ವಾಸುದೇವ ಉಚ್ಚಿಲ, ಡಾ.ಅಮರ್ ಕುಮಾರ್ ಮತ್ತಿತರರು ಇದ್ದರು.ಲವಿತ್ ವಸ್ತ್ರದ್ ಪ್ರಾಸ್ತಾವಿಕ ಮಾತನಾಡಿದರು. ಮನೋಜ್ ವಾಮಮಂಜೂರು ನಿರೂಪಿಸಿದರು.
ಪುಸ್ತಕ ಮೇಳಕ್ಕೆ ಚಾಲನೆ:ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿರುವ ಪುಸ್ತಕ ಮೇಳವನ್ನು ಧಾರವಾಡ ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ ಉದ್ಘಾಟಿಸಿದರು. ಪತ್ರಕರ್ತ ಅನಿಲ್ ಹೊಸಮನಿ, ಡಾ.ಗಣಪತಿ ಎಕ್ಕಾರು ಇದ್ದರು. ಕಾರ್ಯಕ್ರಮ ಅಂಗವಾಗಿ ಹಳೆ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.ವಿವಿಧ ಗೋಷ್ಠಿಗಳು:
ಬಳಿಕ ವಿವಿಧ ಗೋಷ್ಠಿಗಳು ನಡೆಯಿತು. ‘ಭವಿಷ್ಯದ ಭಾರತ: ಆರ್ಥಿಕತೆ ಮತ್ತು ಜೀವನೋಪಾಯ’ ವಿಷಯದ ಬಗ್ಗೆ ಶಿವಸುಂದರ್ ವಿಷಯ ಮಂಡನೆ ಮಾಡಿದರು. ಡಾ.ಸಬಿತಾ ಬನ್ನಾಡಿ ಅಧ್ಯಕ್ಷತೆ ವಹಿಸಿದ್ದರು. ‘ಅಸಮಾನತೆಯ ಹಾಡು-ಪಾಡು’ ವಿಷಯದ ಬಗ್ಗೆ ಭರತ್ ಡಿಂಗ್ರಿ ವಿಷಯ ಮಂಡಿಸಿದರು. ‘ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ’ ವಿಷಯದ ಬಗ್ಗೆ ಬಿ.ಶ್ರೀಪಾದ ಭಟ್ ಮತ್ತು ವಿಕಾಸ್ ಮೌರ್ಯ ವಿಷಯ ಮಂಡಿಸಿದರು. ಚಂದ್ರಶೇಖರ ಗೊರೆಬಾಳು ಅಧ್ಯಕ್ಷತೆ ವಹಿಸಿದ್ದರು.