ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಹಿಂದೆದೂ ಕಾಣದಂತಹ ದುರಾಡಳಿತ ಈಗೀನ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಕರ ಕುಲಕರ್ಣಿ ಆರೋಪಿಸಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಗರಣಗಳ ಸರಮಾಲೆ ಆರಂಭಗೊಂಡಿದೆ. ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯನವರು ಮುಡಾ ಹಗರಣ ಹೊತ್ತು ಸರ್ಕಾರ ನಡೆಸುತ್ತಿದ್ದಾರೆ. ವಾಲ್ಮೀಕಿ ನಿಗಮದಿಂದ ₹187 ಕೋಟಿ ಲೂಟಿ , ಸ್ಮಾರ್ಟ್ ಮೀಟರ್ ಹೆಸರಿನಲ್ಲಿ 15,568 ಕೋಟಿ ಹಗರಣ ಹೀಗೆ ಸಾಲು ಸಾಲು ಹಗರಣಗಳ ಜೊತೆಗೆ ಭ್ರಷ್ಟಾಚಾರ ಮಾಡುವ ಮೂಲಕ ವಸೂಲಿ ಸರ್ಕಾರವಾಗಿದೆ ಎಂದು ದೂರಿದರು.ಇದು ಶೇ.60 ಕಮಿಷನ್ ಸರ್ಕಾರ. ಪ್ರತಿಯೊಂದು ಯೋಜನೆಯನ್ನು ಪ್ರತಿ ಟೆಂಡರ್‌ನಲ್ಲೂ ಕಮಿಷನ್ ನಡೆಸಲಾಗುತ್ತಿದೆ. ಅಲ್ಲದೇ ರಾಜ್ಯದ ಆರ್ಥಿಕ ಪರಿಸ್ಥಿತಿಯೂ ದಿವಾಳಿಯ ಅಂಚಿಗೆ ತಲುಪಿದೆ. ಕಾಂಗ್ರೆಸ್ ದುರಾಡಳಿತ ಮತ್ತು ವ್ಯಾಪಕ ಭ್ರಷ್ಟಾಚಾರದಿಂದ ಹಣಕಾಸು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಸ್ವತಃ ಉಪಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ ಎಂದರು.ಸರ್ಕಾರದ ಜನ ವಿರೋಧಿ ನೀತಿಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ ಹಾಲು ನೀರು ವಿದ್ಯುತ್ ಡೀಸೆಲ್ ಬೆಲೆ ಏರಿಕೆ, ವಿವಿಧ ತೆರಿಗೆ ಮತ್ತು ಶುಲ್ಕಗಳ ವಿಪರೀತ ಹೆಚ್ಚಳದಿಂದಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರು ತೀವೃ ಸಂಕಷ್ಟದಲ್ಲಿದ್ದಾರೆ. ಜನಸಾಮಾನ್ಯರ ಬದುಕನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿದ್ದಾರೆ. ಇಂತಹ ದುರಾಡಳಿತ ನಡೆಸಿ ಕಾಂಗ್ರೆಸ್ ನಾವು ಎರಡು ವರ್ಷದಲ್ಲಿ ಸಾಧನೆ ಮಾಡಿದ್ದೇವೆ ಎಂದು ಹೇಳುತ್ತಿರುವುದು ನಾಚಿಕೆಯ ಸಂಗತಿ ಎಂದರು.ಮಾಜಿ ಶಾಸಕ ಮಹಂತೇಶ ದೊಡ್ಡಗೌಡರ, ಬೆಳಗಾವಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ, ಬಸವರಾಜ ಪರವಣ್ಣವರ, ಉಳುವಪ್ಪ ಉಳ್ಳೆಗಡ್ಡಿ, ಬಸವರಾಜ ಮಾತ್ನವರ, ಸರಸ್ವತಿ ಹೈಬತ್ತಿ ಸೇರಿದಂತೆ ಇತರರಿದ್ದರು.