ವಿಧಾನ ಪರಿಷತ್‌ ಉಪಚುನಾವಣೆ ಮೇಲೆ ಬಹಿಷ್ಕಾರದ ಕರಿನೆರಳು!

| Published : Oct 19 2024, 12:25 AM IST

ವಿಧಾನ ಪರಿಷತ್‌ ಉಪಚುನಾವಣೆ ಮೇಲೆ ಬಹಿಷ್ಕಾರದ ಕರಿನೆರಳು!
Share this Article
  • FB
  • TW
  • Linkdin
  • Email

ಸಾರಾಂಶ

ಕಸ್ತೂರಿರಂಗನ್ ವರದಿ ಜಾರಿಯಾದರೆ ಕಾಡಂಚಿನಲ್ಲಿರುವ ಕಾರ್ಕಳ, ಹೆಬ್ರಿ, ಕುಂದಾಪುರ, ಬೈಂದೂರು ಭಾಗದ ಅನೇಕ ಗ್ರಾಮಗಳಲ್ಲಿ ಜನರನ್ನು ಒಕ್ಕಲೆಬ್ಬಿಸುತ್ತಾರೆ, ಜನಜೀವನಕ್ಕೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಇಲ್ಲಿನ ಗ್ರಾಪಂ ಸದಸ್ಯರು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

ಗ್ರಾಪಂ ಸದಸ್ಯರ ಮನವೊಲಿಸಲು ಬಿಜೆಪಿ ನಾಯಕರ ಪ್ರಯತ್ನ

ಕನ್ನಡಪ್ರಭ ವಾರ್ತೆ ಉಡುಪಿ ಅ.21ರಂದು ಸ್ಥಳೀಯಾಡಳಿತ ಸಂಸ್ಥೆಗಳ ವಿಧಾನಪರಿಷತ್ ಉಪಚುನಾವಣೆಯ ಮೇಲೆ ಕಸ್ತೂರಿರಂಗನ್ ವರದಿಯ ಕರಿಛಾಯೆ ಆವರಿಸಿದೆ. ಇದನ್ನು ನಿವಾರಿಸಲು ರಾಜಕೀಯ ನಾಯಕರು ಹರಸಾಹಸ ಪಡುತಿದ್ದಾರೆ. ಕಸ್ತೂರಿರಂಗನ್ ವರದಿ ಜಾರಿಯಾದರೆ ಕಾಡಂಚಿನಲ್ಲಿರುವ ಕಾರ್ಕಳ, ಹೆಬ್ರಿ, ಕುಂದಾಪುರ, ಬೈಂದೂರು ಭಾಗದ ಅನೇಕ ಗ್ರಾಮಗಳಲ್ಲಿ ಜನರನ್ನು ಒಕ್ಕಲೆಬ್ಬಿಸುತ್ತಾರೆ, ಜನಜೀವನಕ್ಕೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಇಲ್ಲಿನ ಗ್ರಾಪಂ ಸದಸ್ಯರು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಈ ಚುನಾವಣೆಯಲ್ಲಿ ಗ್ರಾಪಂ ಸದಸ್ಯರೇ ಮತದಾರರಾಗಿರುವುರಿಂದ ಅವರ ಮತದಾನದ ಬಹಿಷ್ಕಾರದ ಎಚ್ಚರಿಕೆಯ ಬಿಸಿ ಮುಖ್ಯವಾಗಿ ಬಿಜೆಪಿಗೆ ಬಲವಾಗಿ ತಟ್ಟಿದೆ. ಬೈಂದೂರು ಮತ್ತು ಕುಂದಾಪುರ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪರ ಪ್ರಚಾರ ನಡೆಸಲು ಬಂದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸ್ಥಳೀಯ ಗ್ರಾಪಂ ಸದಸ್ಯರೊಂದಿಗೆ ಮಾತನಾಡಿದ್ದಾರೆ. ಕಸ್ತೂರಿರಂಗನ್ ವರದಿಯನ್ನು ವಿರೋಧಿಸುತ್ತಿರುವ ಪಂಚಾಯತ್ ಸದಸ್ಯರ ಜೊತೆ ತಾವೂ ಇದ್ದೇವೆ ಎಂಬ ಭರವಸೆ ನೀಡಿ, ಮತದಾನ ಬಹಿಷ್ಕಾರ ಮಾಡದಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೂಡ, ರಾಜ್ಯದಲ್ಲಿ ಪ್ರತ್ಯೇಕ ಭೂ ಸರ್ವೆ ಮಾಡಲು ಸರ್ಕಾರಕ್ಕೆ ಒತ್ತಾಯಿಸಿದ್ದು, ಸರ್ಕಾರ ಒಪ್ಪಿದೆ, ಕಸ್ತೂರಿರಂಗನ್ ವರದಿಯನ್ನು ಒಪ್ಪುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ, ಜನರ ಜೊತೆ ತಾವಿದ್ದೇವೆ ಎಂದಿದ್ದಾರೆ.ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಕೂಡ ಕಸ್ತೂರಿರಂಗನ್ ವರದಿ ವಿರುದ್ಧ ಜನಾಂದೋಲನವಾಗುತ್ತಿದೆ. ತಮ್ಮ ಜೀವನಕ್ಕೆ ತೊಂದರೆಯಾಗುತ್ತಿದೆ. ನಮ್ಮ ಮಾತನ್ನು ಯಾರು ಕೇಳುತ್ತಿಲ್ಲ ಎಂಬ ಆಕ್ರೋಶವಿದೆ. ಆದ್ದರಿಂದ ಗ್ರಾಮಸ್ಥರ ಹೋರಾಟಕ್ಕೆ ನಾವು ಬೆಂಬಲವಾಗಿದ್ದೇವೆ ಎಂದಿದ್ದಾರೆ.ಅಲ್ಲದೇ ಗ್ರಾಮ ಪಂಚಾಯತ್ ಸದಸ್ಯರು ಮತದಾನ ಮಾಡಬೇಕು, ಮತದಾನ ಮಾಡಿದ ಬಳಿಕ ತಮ್ಮ ಹಕ್ಕನ್ನು ಕೇಳಬೇಕು, ಮತದಾನ ಮಾಡಿದಿದ್ದರೇ ಹಕ್ಕು ಕೇಳುವ ಅಧಿಕಾರ ಇರುವುದಿಲ್ಲ, ಮತದಾನ ಬಹಿಷ್ಕಾರ ಬೇಡ ಎಂದು ಮನವಿ ಮಾಡಿದ್ದಾರೆ.