ತರಹೇವಾರಿ ಚಿತ್ತಾರದಿಂದ ಡಿಸಿ ಆವರಣ ಸುಂದರ!

| Published : Aug 14 2025, 02:09 AM IST

ಸಾರಾಂಶ

ಯುವ ಕಲಾವಿದರು ತಮ್ಮ ಕುಂಚಗಳಿಂದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣ ಗೋಡೆಯನ್ನು ವಿವಿಧ ಸಾಧಕರ ಭಾವಚಿತ್ರಗಳನ್ನು ಬಿಡಿಸುವ ಮೂಲಕ ಅಲಂಕರಿಸುತ್ತಿದ್ದಾರೆ.

ಧಾರವಾಡ: ಜಿಲ್ಲೆಯ ಸಾಹಿತ್ಯ, ಸಂಗೀತ ಮತ್ತು ಕಲೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ ಮಹನೀಯರ ಭಾವಚಿತ್ರಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಕಾಯುವ ಕೊಠಡಿ ಮತ್ತು ಆವರಣ ಗೋಡೆಯು ಅಲಂಕರಿಸಿರುವುದು 79ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಕಚೇರಿಯ ಸೊಗಡನ್ನು ಮತ್ತಷ್ಟು ಹೆಚ್ಚಿಸಿದೆ.

ಸರ್ಕಾರಿ ಚಿತ್ರಕಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕಳೆದ ಎರಡು ದಿನಗಳಿಂದ ಸ್ಥಳೀಯ ಕಲಾವಿದರು, ಯುವ ಕಲಾವಿದರು ತಮ್ಮ ಕುಂಚಗಳಿಂದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣ ಗೋಡೆಯನ್ನು ವಿವಿಧ ಸಾಧಕರ ಭಾವಚಿತ್ರಗಳನ್ನು ಬಿಡಿಸುವ ಮೂಲಕ ಅಲಂಕರಿಸುತ್ತಿದ್ದಾರೆ. ಒಟ್ಟು 40 ಚಿತ್ರಕಲಾ ವಿದ್ಯಾರ್ಥಿಗಳು ಹಾಗೂ ನಾಲ್ಕು ಜನ ಶಿಕ್ಷಕರಿದ್ದಾರೆ.

ವಿಶೇಷವಾಗಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದ ಡಾ. ದ.ರಾ. ಬೇಂದ್ರೆ, ಡಾ. ವಿ.ಕೃ. ಗೋಕಾಕ, ಡಾ. ಗಿರೀಶ ಕಾರ್ನಾಡರ ಭಾವಚಿತ್ರಗಳು, ಸಂಗೀತಗಾರರಾದ ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು ಅವರ ಭಾವಚಿತ್ರಗಳನ್ನು ಚಿತ್ರಿಸಿದ್ದಾರೆ.

ಯಾವ್ಯಾವ ಕಲೆ: ಭಾರತೀಯ ಜಾನಪದ ಕಲೆ, ಮಹಾರಾಷ್ಟ್ರ ಮೂಲದ ವರ್ಲಿಕಲೆಯ ಸೊಬಗು, ಸ್ಥಳೀಯ ಸ್ಮಾರಕಗಳು, ವಾದ್ಯಗಳನ್ನು ನುಡಿಸುವುದು, ಗ್ರಾಮೀಣ ಸೊಗಡು, ಪಕ್ಷಿಗಳ ನೈಸರ್ಗಿಕ ಸೌಂದರ್ಯ, ವನ್ಯಜೀವಿಗಳ ಜೀವನ ಶೈಲಿ ಹಾಗೂ ಸಾಹಿತ್ಯದ ಪ್ರೇರಣೆಯನ್ನು ಕಲಾತ್ಮಕವಾಗಿ ಚಿತ್ರಗಳ ಮೂಲಕ ಬಿತ್ತರಿಸುತ್ತಿದ್ದಾರೆ. ಅಲ್ಟ್ರೀಮಾ ಬಣ್ಣ, ಅಕ್ರಾಲಿಕ್ ಬಣ್ಣವನ್ನು ಬಳಸಿಕೊಂಡು ಚಿತ್ರಗಳನ್ನು ಬಿಡಿಸಿದ್ದಾರೆ. ಇದು ಹಲವು ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಕಲಾವಿದರಿಗೆ ಸಹಕಾರಿಯಾಗಿ ಪ್ರೊ. ಎಸ್.ಕೆ. ಪತ್ತಾರ, ಶಿವಕುಮಾರ ಕಂಕನವಾಡಿ ಇದ್ದಾರೆ ಎಂದು ಸರ್ಕಾರಿ ಚಿತ್ರಕಲಾ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಕುರಿ ಮಾಹಿತಿ ನೀಡಿದರು.

ಹೆಮ್ಮೆಯ ಸ್ಮರಣೆ: ಸ್ಥಳೀಯ ಕಲೆ, ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯ ಸಾಧಕರನ್ನು ಸರ್ಕಾರಿ ಕಚೇರಿ ಹಾಗೂ ಕಟ್ಟಡಗಳಲ್ಲಿ ಚಿತ್ರಿಸುವುದರಿಂದ ನಮ್ಮ ಪರಂಪರೆ, ಸಂಸ್ಕೃತಿ ಸಾಧನೆಯನ್ನು ಹೆಮ್ಮೆಯಿಂದ ನೆನಪಿಸಿಕೊಂಡಂತೆ ಆಗುತ್ತದೆ. ಯುವ ಪೀಳಿಗೆಗೆ ನಮ್ಮ ಜಿಲ್ಲೆಯ ಹೆಮ್ಮೆಯ ಸಂಗತಿಗಳು, ಸಾಧನೆಗಳನ್ನು ತಿಳಿಸುವುದು ಈ ಚಿತ್ರಕಲೆಗಳ ಉದ್ದೇಶವಾಗಿದೆ. ದಿನನಿತ್ಯ ನೂರಾರು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಗೆ ವಿವಿಧ ಕಾರಣಗಳಿಗಾಗಿ ಭೇಟಿ ನೀಡುವುದರಿಂದ ಅವರ ಮನ, ಮನೆಗಳಿಗೆ ಜಿಲ್ಲೆಯ ಇತಿಹಾಸ, ಸಾಧಕರ ಮಾಹಿತಿ ತಲಪುತ್ತದೆ. ಜಿಲ್ಲಾಡಳಿತ ಸ್ಥಳೀಯ ಕಲೆ, ಸಾಹಿತ್ಯ, ಸಂಗೀತ ಪೋಷಣೆಗೆ ಆದ್ಯತೆ ನೀಡಿ, ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಆಂದೋಲನವಾಗಲಿ: ಧಾರವಾಡ ಕರ್ನಾಟಕಕ್ಕೆ ಅಸಂಖ್ಯಾತ ಕವಿಗಳು, ಬರಹಗಾರರು ಮತ್ತು ಗಾಯಕರನ್ನು ಉಡುಗೊರೆಯಾಗಿ ನೀಡಿದೆ. ಅವರ ಮಾತುಗಳು ಮತ್ತು ಹಾಡುಗಳು ನಮ್ಮ ಮಣ್ಣಿನ ಪರಿಮಳವನ್ನು ಹೊತ್ತಿವೆ. ಡಿಸಿ ಕಚೇರಿ ಒಳಾಂಗಣ ಮತ್ತು ಆವರಣ ಗೋಡೆಗಳನ್ನು ಈ ಕಾರ್ಯ ಸುಂದರಗೊಳಿಸುವುದಲ್ಲದೆ ಸರ್ಕಾರವನ್ನು ಜನರ ಸರ್ಕಾರವನ್ನಾಗಿ ಮಾಡುತ್ತದೆ. ಇದು ಎಲ್ಲೆಡೆ ಸ್ಥಳೀಯ ಸಂಸ್ಕೃತಿಯನ್ನು ಆಚರಿಸುವ ಆಂದೋಲನದ ಆಗಲಿ ಎಂದು ಕಲಾ ಆರಾಧಕ ಮುರಳಿ ರಾಮನಾಥ ಹೆಮ್ಮೆ ವ್ಯಕ್ತಪಡಿಸಿದರು.