ಎಸ್ ಐ ತನ್ವೀರ್ ಅಮಾನತಿಗೆ ಇಂದು ಸಂಜೆವರೆಗೆ ಗಡುವು

| Published : Feb 13 2024, 12:48 AM IST

ಸಾರಾಂಶ

ಹೊಟ್ಟೆ ತುಂಬಿರುವ ಮನುಷ್ಯನನ್ನು ಜಿಲ್ಲಾಧಿಕಾರಿಯಾಗಿ ರಾಮನಗರ ಜನರು ಪಡೆದಿರುವುದು ಶೋಚನೀಯ. ಆ ಜಿಲ್ಲಾಧಿಕಾರಿಗೆ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಗುಣವೇ ಇಲ್ಲ.

ಕನ್ನಡಪ್ರಭ ವಾರ್ತೆ ರಾಮನಗರ

ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ರನ್ನು ಇಂದು ಸಂಜೆಯೊಳಗೆ ಅಮಾನತುಗೊಳಿಸದಿದ್ದರೆ ಫೆ.14ರ ನಾಳೆ ಉಗ್ರ ಪ್ರತಿಭಟನೆ ನಡೆಸಲು ಜಿಲ್ಲಾ ವಕೀಲರ ಸಂಘ ನಿರ್ಧರಿಸಿದೆ.

ರಾಜ್ಯ ವಕೀಲ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು ನೇತೃತ್ವದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಅವಿನಾಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿಯವರನ್ನು ಭೇಟಿಯಾಗಿ ಘಟನೆ ಕುರಿತು ವಿವರಣೆ ನೀಡಿತು. ಆದರೆ, ಸೂಕ್ತ ಸ್ಪಂದನೆ ವ್ಯಕ್ತವಾಗದ ಕಾರಣ ವಕೀಲರ ಅಭಿಪ್ರಾಯ ಸಂಗ್ರಹಿಸಿ ವಕೀಲರ ಸಂಘ ಸಬ್ ಇನ್ಸ್ ಪೆಕ್ಟರ್ ಅಮಾನತ್ತಿಗೆ ಗಡುವು ನೀಡಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶಾಲ್ ರಘು, ಹೊಟ್ಟೆ ತುಂಬಿರುವ ಮನುಷ್ಯನನ್ನು ಜಿಲ್ಲಾಧಿಕಾರಿಯಾಗಿ ರಾಮನಗರ ಜನರು ಪಡೆದಿರುವುದು ಶೋಚನೀಯ. ಆ ಜಿಲ್ಲಾಧಿಕಾರಿಗೆ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಗುಣವೇ ಇಲ್ಲ. ವಕೀಲರ ಮೇಲಿನ ಸುಳ್ಳು ಪ್ರಕರಣ ದಾಖಲಿಸಿರುವ ಸಂಬಂಧ ಮಾಹಿತಿ ನೀಡಲು ತೆರಳಿದ್ದರೆ. ನಮ್ಮ ಅಹವಾಲು ಆಲಿಸದೆ, ಅಪರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡುವಂತೆ ತಿಳಿಸಿ ಅಗೌರವದಿಂದ ನಡೆದುಕೊಂಡರು ಎಂದು ಕಿಡಿಕಾರಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿಯವರು ವಕೀಲರನ್ನು ಗೌರವಯುತವಾಗಿ ನಡೆಸಿಕೊಂಡರು. ಘಟನೆ ಕುರಿತು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಈ ಸಂಬಂಧ ಅವರಿಂದ ಸೂಕ್ತ ಸ್ಪಂದನೆ ದೊರಕಿದೆ. ಪ್ರಕರಣದ ತನಿಖೆಯನ್ನು ಬೇರೆ ಅಧಿಕಾರಿಗಳಿಗೆ ವರ್ಗಾಯಿಸುವ ಭರವಸೆ ನೀಡಿದ್ದಾರೆ. ಆದರೆ, ಸಬ್ ಇನ್ಸ್ ಪೆಕ್ಟರ್ ತನ್ವೀರ್ ರನ್ನು ಅಮಾನತುಗೊಳಿಸುವ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

ಇಂದೂ ವಕೀಲರು ಪ್ರತಿಭಟನೆ ಮುಂದುವರೆಸಲಿದ್ದಾರೆ. ಸಂಜೆಯೊಳಗೆ ಎಸ್‌ ಐ ತನ್ವೀರ್ ರನ್ನು ಅಮಾನತುಗೊಳಿಸದಿದ್ದರೆ, ಫೆ.14ರಂದು ರಾಮನಗರದಲ್ಲಿ ರಾಜ್ಯದ 193 ವಕೀಲರ ಸಂಘದ ಸದಸ್ಯರು ಉಗ್ರ ಹೋರಾಟ ಮಾಡಲಿದ್ದಾರೆ. ಈ ವೇಳೆ ಯಾವುದೇ ಅನಾಹುತ ಸಂಭವಿಸಿದರೂ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕಾಗುತ್ತದೆ. ನಮ್ಮ ಬೇಡಿಕೆ ಈಡೇರುವವರೆಗೂ ನಾವೂ ಪ್ರಾಣ ಒತ್ತೆಯಿಟ್ಟು ಹೋರಾಡುತ್ತೇವೆ ಎಂದು ವಿಶಾಲ್ ರಘು ಹೇಳಿದರು.

ಕಾರ್ಯ ಕಲಾಪಗಳಿಂದ ದೂರ ಉಳಿದು ವಕೀಲರ ಧರಣಿ

ಕನ್ನಡಪ್ರಭ ವಾರ್ತೆ ರಾಮನಗರ

ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ಅಮಾನತ್ತಿಗೆ ಒತ್ತಾಯಿಸಿ ವಕೀಲರು ಸೋಮವಾರ ನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರವುಳಿದು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಸಂಘದ ಆವರಣದಲ್ಲಿ ಪ್ರತಿಭಟಿಸಿದ ವಕೀಲರು, 40 ವಕೀಲರ ವಿರುದ್ಧ ಸುಳ್ಳು ಪ್ರಕರಣದ ದಾಖಲಸಿರುವ ಎಸ್‌ಐ ತನ್ವೀರ್ ಹುಸೇನ್ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.

ಮಂಡ್ಯ ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಮಾತನಾಡಿ, ಜ್ಞಾನ ವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡಿದ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ವಿಷಯಗಳನ್ನು ಪೋಸ್ಟ್ ಮಾಡಿದ ವಕೀಲ ಚಾನ್ ಪಾಷ ವಿರುದ್ಧ ನ್ಯಾಯಾಲಯವೇ ಸುಮಟೋ ಪ್ರಕರಣ ದಾಖಲಿಸಬೇಕಿತ್ತು. ಆದರೆ, ಆ ಕೆಲಸವನ್ನು ವಕೀಲರು ಮಾಡಿದ್ದಾರೆ ಎಂದು ಹೇಳಿದರು.

ವಕೀಲರಾದವರೇ ಕಾನೂನನ್ನು ಟೀಕಿಸಿದರೆ ಎಷ್ಟು ಸರಿ? ಈ ಬಗ್ಗೆ ಆತನಿಗೆ ಪರಿಜ್ಞಾನ ಇರಬೇಕಿತ್ತು. ನ್ಯಾಯಾಲಯದ ಆದೇಶವನ್ನು ಅಣಕು ಮಾಡಿದ ಚಾನ್ ಪಾಷ ನನ್ನು ಅಮಾನತ್ತು ಮಾಡಿ ಮನೆಗೆ ಕಳುಹಿಸಬೇಕು ಎಂದು ಹೇಳಿದರು.

ಇನ್ನು ಪೊಲೀಸರು ವಕೀಲರ ವಿರುದ್ಧ ಪ್ರಕರಣ ದಾಖಲಿಸುವಾಗ ಸಂಘದ ಗಮನಕ್ಕೆ ಏಕೆ ತರಲಿಲ್ಲ? ನಿಮ್ಮ ಮೇಲಿನ ಗೌರವವನ್ನು ಭಯ ಎಂದು ಪೊಲೀಸರು ತಿಳಿಯಬಾರದು. ಪೊಲೀಸರು ವಕೀರಲನ್ನು ಭೇಟಿ ಮಾಡಿದಾಗ ನಾವು ಸೌಜನ್ಯಯುತವಾಗಿ ವರ್ತಿಸುತ್ತೇವೆ. ಆದರೆ, ವಕೀಲರು ಪೊಲೀಸ್ ಠಾಣೆಗೆ ತೆರಳಿದರೆ ಕುಳಿತುಕೊಳ್ಳಿ ಎಂದು ಹೇಳುವಷ್ಟು ಸೌಜನ್ಯವನ್ನು ತೋರುವುದಿಲ್ಲ ಎಂದು ಟೀಕಿಸಿದರು.

ವಕೀಲ ಸಿದ್ದರಾಜು ಮಾತನಾಡಿ, ಈ ಪ್ರಕರಣದಲ್ಲಿ ವಕೀಲರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ತೀರ್ಮಾನ ಇರಬೇಕು. ಪಕ್ಷ - ಸಮುದಾಯ ಮುಂದಿಟ್ಟುಕೊಂಡು ಭಿನ್ನಾಭಿಪ್ರಾಯ ಮೂಡಿಸುವುದು ಬೇಡ. ವಕೀಲರ ವಿರುದ್ಧ ಪ್ರಕರಣ ದಾಖಲಿಸುವಾಗ ಹಿರಿಯ ಅಧಿಕಾರಿಗಳು ಹೇಗೆ ಒಪ್ಪಿಗೆ ನೀಡಿದರು? ನಾವು ಪ್ರಕರಣದ ಸಂಬಂಧ ಬಿ ರಿಪೋರ್ಟ್ ಹಾಕುವಂತೆ ಏಕೆ ಕೇಳಬೇಕು? ಎಂದು ಪ್ರಶ್ನಿಸಿದರು.

ವಕೀಲರ ಅಭಿಪ್ರಾಯ ಸಂಗ್ರಹಿಸಿ ಮಾತನಾಡಿದ ರಾಜ್ಯ ವಕೀಲ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು, ಚಾನ್ ಪಾಷಾರವರ ಸದಸ್ಯತ್ವ ರದ್ದು ಪಡಿಸುವ ಅಥವಾ ಕ್ಷಮೆ ಕೇಳುವ ಅವಕಾಶ ನೀಡುವ ಕುರಿತು ಸಂಘದಲ್ಲಿ ಚರ್ಚಿಸಿ ತೀರ್ಮಾನ ಮಾಡೋಣ. ಆದರೆ, ಸಬ್ ಇನ್ಸ್ ಪೆಕ್ಟರ್ ತನ್ವಿರ್ ಅವರಿಗೆ ಒಳ್ಳೆಯ ಮನೋಭಾವನೆ ಇದ್ದಿದ್ದರೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಬಹುದಾಗಿತ್ತು. ಅದು ಅವರಿಗೆ ಬೇಕಾಗಿರಲಿಲ್ಲ. ಆದ್ದರಿಂದ ಅವರನ್ನು ಅಮಾನತುಗೊಳಿಸುವವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಭೇಟಿ ಮಾಡೋಣ. ಶಾಸಕರ ಕುಮ್ಮಕ್ಕಿನಿಂದ ಸುಳ್ಳು ಪ್ರಕರಣ ದಾಖಲಿಸಿರುವುದು ಸಾಬೀತಾದರೆ ಅವರನ್ನೂ ಬಿಡುವುದಿಲ್ಲ ಎಂದು ವಿಶಾಲ್ ರಘು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರಾಮನಗರ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ವಕೀಲರು ಭಾಗವಹಿಸಿದ್ದರು.