ಸಾಲುಮರದ ತಿಮ್ಮಕ್ಕ ನಿಧನದಿಂದ ರಾಜ್ಯ, ರಾಷ್ಟ್ರಕ್ಕೆ ತುಂಬಲಾರದ ನಷ್ಟ

| Published : Nov 17 2025, 01:02 AM IST

ಸಾಲುಮರದ ತಿಮ್ಮಕ್ಕ ನಿಧನದಿಂದ ರಾಜ್ಯ, ರಾಷ್ಟ್ರಕ್ಕೆ ತುಂಬಲಾರದ ನಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ತಿಮ್ಮಕ್ಕ ಅವರು ಪರಿಸರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಇವರ ಸಾಧನೆಯನ್ನು ಹಲವು ಸಂಘ- ಸಂಸ್ಥೆಗಳು ಶ್ಲಾಘಿಸಿ ಸನ್ಮಾನಿಸಿವೆ. ವೃಕ್ಷ ಮಾತೆ ತಿಮ್ಮಕ್ಕನ ಸಾಧನೆಗಳು ಮತ್ತು ಪರಿಸರ ಪ್ರೇಮ ಇಂದಿನ ಯುವಕರಿಗೆ ಆದರ್ಶಪ್ರಾಯವಾಗಲಿ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸಹಸ್ರಾರು ಗಿಡ, ಮರಗಳನ್ನು ನೆಟ್ಟು ಪರಿಸರಕ್ಕೆ ಅಪಾರ ಕೊಡುಗೆ ನೀಡಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನದಿಂದ ರಾಜ್ಯ ಮತ್ತು ರಾಷ್ಟ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ ನೂತನವಾಗಿ ಆರಂಭಿಸಿರುವ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳ ಉದ್ಘಾಟನಾ ಸಮಾರಂಭದಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಸಾಲುಮರದ ತಿಮ್ಮಕ್ಕ ಅವರು ಪರಿಸರ ಕಾಳಜಿ ಇಟ್ಟುಕೊಂಡಿದ್ದ ದಿಟ್ಟ ಮಹಿಳೆ. ಸಾವಿರಾರು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಿ ಬೆಳೆಸುವ ಮೂಲಕ ನಾಡಿಗೆ ಮಾರ್ಗದರ್ಶನ ಮಾಡಿದ ಮಹಾನ್ ಮಾತೆ. ಅವರು ಅಂದು ನೆಟ್ಟು ಬೆಳೆಸಿರುವ ಸಸಿಗಳು ಇಂದು ಹೆಮ್ಮರವಾಗಿ ಬೆಳೆದು ಮಾನವರಿಗೆ ನೆರಳಾದರೆ, ಪ್ರಾಣಿ, ಪಕ್ಷಿ ಸಂಕುಲಕ್ಕೆ ಆಶ್ರಯ ತಾಣವಾಗಿವೆ ಎಂದರು.

ತಿಮ್ಮಕ್ಕ ಅವರು ಪರಿಸರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಇವರ ಸಾಧನೆಯನ್ನು ಹಲವು ಸಂಘ- ಸಂಸ್ಥೆಗಳು ಶ್ಲಾಘಿಸಿ ಸನ್ಮಾನಿಸಿವೆ. ವೃಕ್ಷ ಮಾತೆ ತಿಮ್ಮಕ್ಕನ ಸಾಧನೆಗಳು ಮತ್ತು ಪರಿಸರ ಪ್ರೇಮ ಇಂದಿನ ಯುವಕರಿಗೆ ಆದರ್ಶಪ್ರಾಯವಾಗಲಿ ಎಂದರು.

ನಾನು ಶಾಸಕ, ಸಚಿವನಾಗಿ ಅಭಿವೃದ್ಧಿ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇನೆ. ಡಿಗ್ರಿ, ಡಿಪ್ಲೊಮಾ ಕಾಲೇಜುಗಳು, ಹಿಂದುಳಿದ ಮಕ್ಕಳ ಅನುಕೂಲಕ್ಕಾಗಿ 21ಕ್ಕೂ ಹೆಚ್ಚು ವಿದ್ಯಾರ್ಥಿ ನಿಲಯಗಳನ್ನು ತಂದಿದ್ದೇನೆ. ಇದರಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ಮಕ್ಕಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ನಾನು ಸೋತ ಹತ್ತು ವರ್ಷಗಳಲ್ಲಿ ಯಾವೊಂದು ವಿದ್ಯಾರ್ಥಿ ನಿಲಯಗಳೂ ಬರಲಿಲ್ಲ. ಆಗ ಗೆದ್ದವರು ಒಂದೇ ಒಂದು ವಿದ್ಯಾರ್ಥಿ ನಿಲಯ ಮಂಜೂರು ಮಾಡಿಸಲಿಲ್ಲ ಎಂದು ದೂರಿದರು.

ಜಿಲ್ಲಾ ಕೇಂದ್ರದಲ್ಲಿ ತೆರೆಯಬೇಕಿದ್ದ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ ತೆರೆಯಲಾಗಿದೆ ಎಂದರು.

ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳು ಈ ಭಾಗದಲ್ಲೇ ಹೆಚ್ಚು ಇದ್ದು, ಜಿಲ್ಲಾ ಕೇಂದ್ರಗಳಲ್ಲಿ ದೊರಕಬಹುದಾದ ಶಿಕ್ಷಣಕ್ಕಿಂತ ಹೆಚ್ಚು ಗುಣಮಟ್ಟದ ಶಿಕ್ಷಣ ಇಲ್ಲಿ ದೊರಕುತ್ತಿದೆ. ಭೈರವೈಕ್ಯ ಡಾ. ಬಾಲಗಂಗಾಧರನಾಥ ಶ್ರೀಗಳು ಶಿಕ್ಷಣದ ಮೇಲೆ ಇಟ್ಟಿದ್ದ ಕಾಳಜಿ ಮತ್ತು ದೂರದೃಷ್ಟಿಯ ಫಲದಿಂದಾಗಿ ಈ ಭಾಗದ ಲಕ್ಷಾಂತರ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿ ನಿಲಯದಿಂದ ಬಡ ಮಕ್ಕಳಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.

ಈ ವೇಳೆ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಿನೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕೆ.ಮಂಜುಳ, ತಹಸೀಲ್ದಾರ್ ಜಿ.ಆದರ್ಶ, ಬಿಜಿಎಸ್ ಐಟಿ ಉಪ ಪ್ರಾಂಶುಪಾಲ ಆನಂದ್ ರಾಜ್, ಜಂಟಿ ರಿಜಿಸ್ಟ್ರಾರ್ ಉಮೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ದಾಸಪ್ಪ ಭೋವಿ ಸೇರಿದಂತೆ ಹಲವರು ಇದ್ದರು.