ಅಧಿವೇಶನದ ಘೋಷಣೆ ಅನುಷ್ಠಾನಕ್ಕೆ ಬರುತ್ತಿಲ್ಲ; ಶಾಸಕ ಮಹೇಶ ಟೆಂಗಿನಕಾಯಿ

| Published : Dec 18 2024, 12:48 AM IST

ಅಧಿವೇಶನದ ಘೋಷಣೆ ಅನುಷ್ಠಾನಕ್ಕೆ ಬರುತ್ತಿಲ್ಲ; ಶಾಸಕ ಮಹೇಶ ಟೆಂಗಿನಕಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಗೆ ಎಫ್‌ಎಂಸಿಜಿ ಕ್ಲಸ್ಟರ್ ಅಡಿಯಲ್ಲಿ 50ಕ್ಕೂ ಹೆಚ್ಚು ಕಂಪನಿಗಳು ಬರಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಪ್ಪಿಗೆ ಸೂಚಿಸಿದ್ದವು. ಆದರೆ, ಈಗಿನ ಸರ್ಕಾರ ಬಂದ ಕೂಡಲೇ ಭೂಮಿಯ ಬೆಲೆಯನ್ನು ಏರಿಸಿದೆ. ಇದರಿಂದಾಗಿ ಕಂಪನಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿವೆ.

ಹುಬ್ಬಳ್ಳಿ:

ಕಳೆದ ಅಧಿವೇಶನದಲ್ಲಿ ಪ್ರಸ್ತಾಪಿಸಿದ ಈ ಭಾಗದ ಅಭಿವೃದ್ಧಿ ಕಾರ್ಯಗಳು ಈ ವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಟೀಕಿಸಿದರು.ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಅವರು, ಉತ್ತರ ಕರ್ನಾಟಕ ಅಭಿವೃದ್ಧಿ ಎಂದು ಅಧಿವೇಶನದಲ್ಲಿ ಬರೀ ಘೋಷಣೆ ಮಾಡಿ ಹೋಗಲಾಗುತ್ತಿದೆ. ಆದರೆ ಘೋಷಣೆಗಳು ಮಾತ್ರ ಅನುಷ್ಠಾನಕ್ಕೆ ಬರುವುದೇ ಇಲ್ಲ. ಕಾಟಾಚಾರಕ್ಕೆ ಘೋಷಣೆ ಎಂಬಂತಾಗಿದೆ ಎಂದು ಕಿಡಿಕಾರಿದರು.

ಹುಬ್ಬಳ್ಳಿಗೆ ಎಫ್‌ಎಂಸಿಜಿ ಕ್ಲಸ್ಟರ್ ಅಡಿಯಲ್ಲಿ 50ಕ್ಕೂ ಹೆಚ್ಚು ಕಂಪನಿಗಳು ಬರಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಪ್ಪಿಗೆ ಸೂಚಿಸಿದ್ದವು. ಆದರೆ, ಈಗಿನ ಸರ್ಕಾರ ಬಂದ ಕೂಡಲೇ ಭೂಮಿಯ ಬೆಲೆಯನ್ನು ಏರಿಸಿದೆ. ಇದರಿಂದಾಗಿ ಕಂಪನಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿವೆ. 50ರಲ್ಲಿ ಏಳು ಕಂಪನಿಗಳು ಈಗಲೂ ಬರಲು ತಯಾರಿವೆ. ಅವುಗಳನ್ನು ತರಿಸಬೇಕು. ಜತೆಗೆ ಇನ್ನುಳಿದ ಕಂಪನಿಗಳ ಜತೆಗೂ ಸರ್ಕಾರ ಮಾತನಾಡಿ ಅವುಗಳನ್ನು ಒಪ್ಪಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಐಟಿ-ಬಿಟಿ ಅಂದರೆ ಕೇವಲ ಬೆಂಗಳೂರು ಮಾತ್ರವಲ್ಲ. ಹುಬ್ಬಳ್ಳಿಗೂ ಕಂಪನಿಗಳು ಬರಬೇಕು. ಇನ್ಫೋಸಿಸ್ ಹುಬ್ಬಳ್ಳಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಬೇಗನೆ ಮುಗಿಸಬೇಕು. ಹುಬ್ಬಳ್ಳಿಯನ್ನು ಪ್ರವಾಸೋದ್ಯಮ ಕ್ಲಸ್ಟರ್ ಎಂದು ಘೋಷಿಸಬೇಕು. ಇಲ್ಲಿನ ನೃಪತುಂಗ ಬೆಟ್ಟ, ಸಿದ್ಧಾರೂಢ ಮಠ, ಮೂರುಸಾವಿರ ಮಠ ಚಂದ್ರಮೌಳೇಶ್ವರ ದೇವಸ್ಥಾನ, ಸವದತ್ತಿಯ ಯಲ್ಲಮ್ಮ ದೇವಿ ದೇವಸ್ಥಾನ ಸೇರಿದಂತೆ ಅನೇಕ ಪ್ರೇಕ್ಷಣೀಯ ಸ್ಥಳಗಳು 50ರಿಂದ 60 ಕಿಲೋಮೀಟರ್ ಹತ್ತಿರದಲ್ಲಿ ಇರುವುದರಿಂದ ಘೋಷಣೆ ಮಾಡಬೇಕಿದೆ ಎಂದರು.

ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಟ್ರಸ್ಟ್ ಗುರುಶಿಷ್ಯರ ಪರಂಪರೆ ಹೊಂದಿದ ದೇಶದ ಏಕೈಕ ಗುರುಕುಲ. ಇದು ವಿಶೇಷ ಪೀಠ ಆಗಲಿ ಎಂದು ಸರ್ಕಾರ ಘೋಷಿಸಬೇಕು. ಹುಬ್ಬಳ್ಳಿಯ ಕೆಎಂಸಿಐಆರ್‌ ಅನ್ನು ಕ್ಯಾನ್ಸರ್ ಕೇಂದ್ರವನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಎಸ್ಎಸ್‌ಕೆ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಿ ಅಭಿವೃದ್ಧಿಗಾಗಿ ₹ 200 ಕೋಟಿ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.