ಭಕ್ತರ ಕಣ್ತುಂಬಿದ ಶಾರದೆಯ ವೃಷಭವಾಹಿನಿ ಅಲಂಕಾರ

| Published : Sep 25 2025, 01:00 AM IST

ಭಕ್ತರ ಕಣ್ತುಂಬಿದ ಶಾರದೆಯ ವೃಷಭವಾಹಿನಿ ಅಲಂಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ದಿನೇ ದಿನೇ ಕಳೆಗಟ್ಟುತ್ತಿದೆ. ದೇವಿ ಸನ್ನಿದಿಯಲ್ಲಿ ನಡೆಯುತ್ತಿರುವ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳು, ಜಗದ್ಗುರುಗಳ ನವರಾತ್ರಿಯ ದರ್ಬಾರ್, ದಿಂಡೀ ದೀಪಾರಾಧನೆ, ರಾಜಬೀದಿ ಹಾಗೂ ನವರಾತ್ರಿ ಉತ್ಸವಕ್ಕೆ ವಿಶೇಷ ಮೆರಗು ನೀಡುತ್ತಿದೆ. ಆಗಾಗ ಸುರಿಯುತ್ತಿರುವ ಮಳೆ ಲೆಕ್ಕಿಸದೇ ಶೃಂಗೇರಿಯತ್ತ ಜನ ಸ್ತೋಮವೇ ಹರಿದು ಬರುತ್ತಿದೆ.

ಮಳೆಯನ್ನು ಲೆಕ್ಕಿಸದೇ ಹರಿದು ಬರುತ್ತಿದೆ ಜನಸ್ತೋಮ । ಮೆರಗು ನೀಡುತ್ತಿದೆ ಸಾಂಸ್ಕೃತಿಕ ,ಧಾರ್ಮಿಕ ಕಲರವ । ರಾಜಬೀದಿ ಉತ್ಸವ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವ ದಿನೇ ದಿನೇ ಕಳೆಗಟ್ಟುತ್ತಿದೆ. ದೇವಿ ಸನ್ನಿದಿಯಲ್ಲಿ ನಡೆಯುತ್ತಿರುವ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳು, ಜಗದ್ಗುರುಗಳ ನವರಾತ್ರಿಯ ದರ್ಬಾರ್, ದಿಂಡೀ ದೀಪಾರಾಧನೆ, ರಾಜಬೀದಿ ಹಾಗೂ ನವರಾತ್ರಿ ಉತ್ಸವಕ್ಕೆ ವಿಶೇಷ ಮೆರಗು ನೀಡುತ್ತಿದೆ. ಆಗಾಗ ಸುರಿಯುತ್ತಿರುವ ಮಳೆ ಲೆಕ್ಕಿಸದೇ ಶೃಂಗೇರಿಯತ್ತ ಜನ ಸ್ತೋಮವೇ ಹರಿದು ಬರುತ್ತಿದೆ.

ಶರನ್ನವರಾತ್ರಿ ಮೋಹೋತ್ಸವ ಮೂರನೆ ದಿನವಾದ ಬುಧವಾರ ಶಾರದಾಂಬೆಗೆ ವೃಷಭವಾಹಿನಿ ಅಲಂಕಾರದಲ್ಲಿ ಪೂಜಿಸಲಾಯಿತು. ಹಂಸವಾಹಿನಿ, ಬ್ರಾಹ್ಮಿ ಸ್ವರೂಪಿಣಿಯಾಗಿ ಕಂಗೊಳಿಸಿದ ವಾಗ್ದೇವಿ, ಜಗಜ್ಜನನಿ ಶಾರದೆ ಬುಧವಾರ ವೃಷಭ ವಾಹನವನ್ನೇರಿ ಮಾಹೇಶ್ವರಿಯಾಗಿ ಭಕ್ತರನ್ನು ಅನುಗ್ರಹಿಸಿದಳು. ಶಿವನ ಶಕ್ತಿ ಪಡೆದು ದುಷ್ಟನಿಗ್ರಹ,ಶಿ ಷ್ಟಪರಿಪಾಲನೆ ಮಾಡುವ ಮಾಹೇಶ್ವರಿಗೆ ಕರದಲ್ಲಿ ತ್ರಿಶೂಲ ವಿರಾಜಿಸಿತ್ತು.

ಶೃಂಗೇರಿಯಲ್ಲಿ ಶಿವ ಮತ್ತು ಶಕ್ತಿ ಎರಡೂ ಶಾರದೆಯೇ. ಆದ್ದರಿಂದಲೇ ಆಕೆಗೆ ಶಾರದಾ ಪರಮೇಶ್ವರಿ ಎಂಬ ನಾಮಧೇಯ. ದೇಶದ ಇತರೆ ಶಕ್ತಿ ಸ್ಥಳಗಳಲ್ಲಿ ಶಿವಲಿಂಗವಿರುತ್ತದೆ. ಆದರೆ ಶೃಂಗೇರಿಯಲ್ಲಿ ಲಿಂಗವಿಲ್ಲ. ಶಾರದೆಯೇ ಪರಮೇಶ್ವರಿ ಯಾಗಿರುವುದರಿಂದ ಲಿಂಗವಿಲ್ಲ ಎನ್ನಲಾಗಿದೆ. ಹೀಗೆಂದೇ ಮಾಹೇಶ್ವರಿ ಪೂಜೆ ವಿಶೇಷ ಶ್ರದ್ಧೆಯಿಂದ ಸಲ್ಲುತ್ತದೆ. ಅದ್ವೈತ ಕೇಂದ್ರ ಸ್ಥಳ ಶೃಂಗೇರಿಯಲ್ಲಿ ಪರಮಾತ್ಮ ಒಂದೇ ಚೈತನ್ಯ ಸ್ವರೂಪ. ಶಾರದೆಯೇ ಶಿವಶಕ್ತಿ, ಶೀಘ್ರ ವರಪ್ರಸಾದಿನಿ, ಭಕ್ತ ರಕ್ಷಿಣಿ ಎಂದೇ ಪ್ರಖ್ಯಾತಿಗೊಂಡು ಪೊರೆಯುತ್ತಿದ್ದಾಳೆ.

ಸಂಪೂರ್ಣ ಸ್ವರ್ಣ ಲೇಪಿತ ಗರ್ಭಗುಡಿಯ ಸ್ವರ್ಣಮಂಟಪದಲ್ಲಿ ಕುಳಿತ ಶಾರದಾ ಪರಮೇಶ್ವರಿಯನ್ನು ನೋಡುವುದೆಂದರೆ ಭಕ್ತರ ಪಾಲಿಗೆ ಮಹದಾನಂದ. ದಿನಪೂರ್ತಿ ಆ ಮಂದಾಸ್ಮಿತೆ ಶಾರದೆ ದರ್ಶನಕ್ತೆ ಭಕ್ತ ಸಾಗರವೇ ಸೇರುತ್ತದೆ. ದಸರೆಯ ದರ್ಬಾರಿನ ಸಮಯದಲ್ಲಿ ಆಕೆಯದು ಇನ್ನೊಂದು ರೂಪ, ಅರ್ಚಕರು, ಪರಿಚಾರಕರು, ಎಲ್ಲರೂ ಸೇರಿ ಶಾರದೆಯನ್ನು ವಿಶೇಷವಾಗಿ ಅಲಂಕರಿಸುತ್ತಾರೆ.

ಪ್ರತಿದಿನ ರಾತ್ರಿ ಜಗದ್ಗುರುಗಳು ಚಂದ್ರಮೌಳೇಶ್ವರ ಪೂಜೆ ಮಾಡುತ್ತಾರೆ. ಶ್ರೀ ಶಂಕರಾಚಾರ್ಯರು ತಮ್ಮ ಶಿಷ್ಯ ಸುರೇಶ್ವರಾ ಚಾರ್ಯರಿಗೆ ಕೈಲಾಸದಿಂದ ತಂದ ಚಂದ್ರಮೌಳೇಶ್ವರನನ್ನು ದಯಪಾಲಿಸಿ ಅನುಗ್ರಹಿಸಿದ್ದರು. ಅಂದಿನಿಂದ ಶೃಂಗೇರಿಯಲ್ಲಿ ಜಗದ್ಗುರುಗಳಿಂದ ಅವಿಚ್ಛಿನ್ನವಾಗಿ ಚಂದ್ರಮೌಳೇಶ್ವರ ಪೂಜೆ ನಡೆದುಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ನೂರಾರು ಕಂಠ ಗಳಿಂದ ಹೊರಹೊಮ್ಮುವ ರುದ್ರಪಠಣ ಅಲೌಕಿಕ ವಾತಾವರಣ ಸೃಷ್ಠಿಸುತ್ತದೆ. ಚಂದ್ರಮೌಳೇಶ್ವರ ಪೂಜೆ ನಂತರವೇ ಚಂದ್ರಮೌಳೇಶ್ವರ ತೊಟ್ಟಿಯಲ್ಲಿ ರಾಜಪೋಷಕು ಧರಿಸಿ ಜಗದ್ಗುರು ಹೊರಬರುವುದು. ನಂತರ ಬಂಗಾರದ ದಂಡ ಹಿಡಿದ ಪಾಠಕರು ಜಗದ್ಗುರು ಸ್ತುತಿಸುತ್ತಾ ಮುಂದೆ ಸಾಗುತ್ತಾರೆ. ಇದು ರಾಜವೈಭವದ ಮೆರವಣಿಗೆ. ನವರಾತ್ರಿ ಕೊನೆ ದಿನದವರೆಗೂ ವೈಭವದ ದಸರೆ ದರ್ಬಾರ್ ನಡೆಯುತ್ತದೆ.

ಉಭಯ ಜಗದ್ಗುರುಗಳು ಬೆಳಿಗ್ಗೆ ಶ್ರೀ ಶಾರದಾಂಬೆಗೆ ನವರಾತ್ರಿ ವಿಶೇಷ ಪೂಜೆ ನೆರವೇರಿಸಿದರು. ಮಹಾಮಂಗಳಾರತಿ ನೆರವೇರಿತು. ನವರಾತ್ರಿ ಅಂಗವಾಗಿ ನಾಲ್ಕು ವೇದಗಳ ಪಾರಾಯಣಗಳು, ವಾಲ್ಮಿಕಿ ರಾಮಾಯಣ, ದೇವಿ ಭಾಗವತ, ಮಾಧವೀಯಶಂಕರ ದಿಗ್ವಿಜಯ, ಸೂತಸಂಹಿತೆ,ಲಕ್ಷ್ಮಿ ನಾರಾಯಣ ಹೃದಯ, ದುರ್ಗಾಸಪ್ತಶತಿ ಪಾರಾಯಣಗಳು ನಡೆಯಿತು. ದುರ್ಗಾ ಜಪ, ಭುವನೇಶ್ವರಿ ಜಪ,ಶ್ರೀಸೂಕ್ತ ಜಪಗಳು,ಶ್ರೀ ಚಂದ್ರಮೌಳೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಶಾಸ್ತ್ರದಲ್ಲಿ ಜಗನ್ಮಾತೆ ಆವಾಸಸ್ಥಾನವೆಂದು ತಿಳಿಸಿರುವ ಶ್ರೀ ಚಕ್ರಕ್ಕೆ ನವಾರಣ ಪೂಜೆ, ಸುವಾಸಿನಿ ಪೂಜೆ,ಕುಮಾರಿ ಪೂಜೆ ನೆರವೇರಿತು.

ರಾಜಬೀದಿ ಉತ್ಸವದಲ್ಲಿ ಕೂತಗೋಡು ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು, ವಿವಿಧ ಸ್ತಬ್ದ ಚಿತ್ರಗಳು ಪಾಲ್ಗೊಂಡಿದ್ದವು.ಸಾಂಸ್ಕೃತಿಕ ಮಹೋತ್ಸವದಲ್ಲಿ ಶೃಂಗೇರಿ ಸಿಸ್ಟರ್ಸ್ ತಂಡದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಗುರುವಾರ ಶಾರದೆಗೆ ಮಯೂರ ವಾಹಿನಿ ಅಲಂಕಾರ ನಡೆಯಲಿದೆ ರಾಜಬೀದಿ ಉತ್ಸವದಲ್ಲಿ ವಿದ್ಯಾರಣ್ಯ ಪುರ ಪಂಚಾಯಿತಿ ವ್ಯಾಪ್ತಿ ಭಕ್ತಾದಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು ಪಾಲ್ಗೊಳ್ಳಲಿದೆ. ಸಾಂಸ್ಕೃತಿಕ ಮಹೋತ್ಸವದಲ್ಲಿ ಚೆನೈನ ವಿದುಷಿ ಭುವನೇಶ್ವರಿ ಮತ್ತು ಕೃತಿಗಾ ತಂಡದವರಿಂದ ಹಾಡುಗಾರಿಕೆ ನಡೆಯಲಿದೆ.

ದೇಗುಲದ ಒಳಗೆ ಭಕ್ತಿ, ಶಕ್ತಿ ಸ್ವರೂಪಿಣಿಗೆ ವಿಶೇಷ ಪೂಜೆ, ದರ್ಶನದಂತಹ ಧಾರ್ಮಿಕ ಕಾರ್ಯಕ್ರಮಗಳು ನೆಮ್ಮದಿ ಕರುಣಿಸಿದರೆ, ದೇಗುಲದ ಪ್ರಾಂಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯುತ್ತವೆ. ಇನ್ನೂ ದೇಗುಲದ ಬಳಿಯ ರಸ್ತೆ ಇಕ್ಕೆಲಗಳಲ್ಲಿ ಸಾಲು ಸಾಲಾಗಿ ಹಾಕಲಾಗಿರುವ ಅಂಗಡಿಗಳು ಭಕ್ತರಿಂದ ತುಂಬಿ ತುಳುಕುತ್ತಾ ಉತ್ಸವಕ್ಕೆ ಮೆರುಗು ಮೂಡಿಸಿದೆ.

24 ಶ್ರೀ ಚಿತ್ರ 1-ಶೃಂಗೇರಿಯಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಶಾರದೆಗೆ ವೃಷಭವಾಹಿನಿಯಲಂಕಾರ ಮಾಡಲಾಗಿತ್ತು.

24 ಶ್ರೀ ಚಿತ್ರ 2-ಶೃಂಗೇರಿ ನವರಾತ್ರಿಯಲ್ಲಿ ರಸ್ತೆ ಇಕ್ಕೆಲಗಳಲ್ಲಿ ಜನರನ್ನು ಆಕರ್ಷಿಸುತ್ತಿರುವ ಸಾಲು ಸಾಲು ಅಂಗಡಿ ಮುಂಗಟ್ಟುಗಳು.