ಹೊಲಗಳಿಗೆ ಹೋಗಲು ರಸ್ತೆ ದುರಸ್ತಿ ಮಾಡಿಸಿಕೊಡುವಂತೆ ದೊಡ್ಡೂರು ಗ್ರಾಮಸ್ಥರ ಆಗ್ರಹ

| Published : Jan 19 2024, 01:45 AM IST

ಹೊಲಗಳಿಗೆ ಹೋಗಲು ರಸ್ತೆ ದುರಸ್ತಿ ಮಾಡಿಸಿಕೊಡುವಂತೆ ದೊಡ್ಡೂರು ಗ್ರಾಮಸ್ಥರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮೂರಿನ ಹೊಲಕ್ಕೆ ಹೋಗುವ ಕೆರೆ ಮೇಲಿನ ರಸ್ತೆ ದುರಸ್ತಿ ಮಾಡಿಕೊಡುವಂತೆ ಲಕ್ಷ್ಮೇಶ್ವರ ಸಮೀಪದ ದೊಡ್ಡೂರು ಗ್ರಾಮಸ್ಥರು ವಿಶೇಷ ಗ್ರಾಮಸಭೆಯಲ್ಲಿ ಒತ್ತಾಯಿಸಿದ್ದಾರೆ.

ಲಕ್ಷ್ಮೇಶ್ವರ: ನಮ್ಮೂರಿನ ಕೆರೆಯ ಮೇಲಿನ ರಸ್ತೆ ಸರಿಯಾಗಿಲ್ಲದ ಕಾರಣ ಹೊಲಗಳಿಗೆ ಹೋಗಲು ಸಾಕಷ್ಟು ತೊಂದರೆಯಾಗುತ್ತಿದೆ. ಶೀಘ್ರದಲ್ಲಿ ರಸ್ತೆ ದುರಸ್ತಿ ಮಾಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ ಘಟನೆ ಸಮೀಪದ ದೊಡ್ಡೂರ ಗ್ರಾಪಂನ ವಿಶೇಷ ಗ್ರಾಮಸಭೆಯಲ್ಲಿ ನಡೆಯಿತು.ಗುರುವಾರ ಸಮೀಪದ ದೊಡ್ಡೂರ ಗ್ರಾಪಂ ಆವರಣದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯ ಮೇಲೆ ಇರುವ ರಸ್ತೆ ಸುಧಾರಣೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದರು.

ಈ ವೇಳೆ ಗ್ರಾಪಂ ಅಧ್ಯಕ್ಷ ಮಲ್ಲಪ್ಪ ತೋಟದ ಮಾತನಾಡಿ, ಗ್ರಾಪಂಗೆ ಅಷ್ಟು ದೊಡ್ಡ ಮಟ್ಟದ ಅನುದಾನ ಬರುವುದಿಲ್ಲ. ಬಂದಿರುವ ಅನುದಾನದಲ್ಲಿ ಗ್ರಾಪಂ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಇರುವ ಕಾಮಗಾರಿಗೆ ಹಣ ನೀಡಬೇಕಾಗುತ್ತದೆ. ಈಗ ಬಂದಿರುವ ಅನುದಾನದಲ್ಲಿ ಅರ್ಧ ಕಾಮಗಾರಿ ನಡೆಸಲಾಗುವುದು. ಉಳಿದ ಕಾಮಗಾರಿಯನ್ನು ಮುಂದಿನ ಹಂತದಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.

ಈ ವೇಳೆ ಗ್ರಾಪಂ ಮಾಜಿ ಸದಸ್ಯ ಅಮರಪ್ಪ ಗುಡಗುಂಟಿ ಮಾತನಾಡಿ, ನಮ್ಮೂರಿನ ಗ್ರಾಪಂ ಸದಸ್ಯರು ತಾವು ಮಾಡಿದ ಕಾಮಗಾರಿಯ ಕುರಿತು ಮಾಹಿತಿ ಕೇಳಿದರೆ ಜನರ ಬಾಯಿ ಮುಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಮಾತನಾಡಿ, ಇಲ್ಲಿ ವೈಯಕ್ತಿಕ ದ್ವೇಷಕ್ಕೆ ಅವಕಾಶವಿಲ್ಲ. ಗ್ರಾಪಂ ವಿಷಯದ ಕುರಿತು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಯಾರೊಬ್ಬರೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಲು ಅವಕಾಶವಿಲ್ಲ ಎಂದು ಹೇಳಿದರು.

ಗ್ರಾಮದ ಮುಖಂಡ ಬಸವರಾಜ ಹಡಪದ ಮಾತನಾಡಿ, ಗ್ರಾಮದಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಿ ಸಾರ್ವಜನಿಕರಿಗೆ ಸಂಚಾರ ಮಾಡಲು ಉತ್ತಮ ರಸ್ತೆ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ನಿವೃತ್ತ ಶಿಕ್ಷಕ ಬಿ.ಎಸ್. ಈಳಗೇರ ಮಾತನಾಡಿ, ಗ್ರಾಮದಲ್ಲಿನ ಬಸ್ ನಿಲ್ದಾಣವನ್ನು ದುರಸ್ತಿ ಮಾಡಿಸಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ಗ್ರಾಪಂ ಹಾಗೂ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಉಳಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.

ಪಿಡಿಒ ಮಂಜುನಾಥ ಮಲ್ಲೂರ ಮಾತನಾಡಿ, ಈ ಕುರಿತು ಗ್ರಾಪಂ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ ಅಂಗಡಿ, ನಿಂಗಪ್ಪ ಬಂಕಾಪುರ, ನಾನಪ್ಪ ಲಮಾಣಿ, ಜಯಮ್ಮ ಮಣ್ಣಮ್ಮನವರ, ದವಕ್ಕ ಭಜಕ್ಕನವರ, ಇಂದ್ರವ್ವ ಲಮಾಣಿ, ಫಕ್ಕೀರಗೌಡ ಭರಮಗೌಡ್ರ, ನೀಲವ್ವ ಕಟಗಿ, ಸಕ್ರಪ್ಪ ಲಮಾಣಿ, ಸುಶೀಲಾ ಲಮಾಣಿ, ಮಧುಮಾಲತಿ ಈಳಗೇರ, ಚಂದ್ರಶೇಖರ ಈಳಗೇರ, ಮಹಾಂತೇಶ ಲಮಾಣಿ ಸಾಕವ್ವ ಲಮಾಣಿ, ಕಾರ್ಯದರ್ಶಿ ಆರ್.ಕೆ. ಗುರುವಿನ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.