ನಿವೃತ್ತ ಪೊಲೀಸರೊಂದಿಗೆ ಪೊಲೀಸ್ ಇಲಾಖೆ ಸದಾ ಬೆಂಗಾವಲಾಗಿ ಇರುತ್ತದೆ ಮತ್ತು ಅವರಿಗೆ ಬೇಕಾದ ಸೌಲಭ್ಯಗಳನ್ನು ನೀಡಲು ಸದಾ ಸಿದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.

ಶಿವಮೊಗ್ಗ: ನಿವೃತ್ತ ಪೊಲೀಸರೊಂದಿಗೆ ಪೊಲೀಸ್ ಇಲಾಖೆ ಸದಾ ಬೆಂಗಾವಲಾಗಿ ಇರುತ್ತದೆ ಮತ್ತು ಅವರಿಗೆ ಬೇಕಾದ ಸೌಲಭ್ಯಗಳನ್ನು ನೀಡಲು ಸದಾ ಸಿದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.

ಸೋಮವಾರ ಡಿಎಆರ್ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಸಂಘದ ಕಚೇರಿ ಕಟ್ಟಡ ನಿರ್ಮಾಣದ ಶಿಲನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿ, ಸೇವೆಯಲ್ಲಿದ್ದಾಗ ಪೊಲೀಸ್ ಇಲಾಖೆಗೆ ಸರ್ಕಾರ ಎಲ್ಲಾ ಸೌಲಭ್ಯ ನೀಡುತ್ತದೆ. ಆದರೆ ನಿವೃತ್ತರಾದ ಮೇಲೆ ಅವರ ಬಗ್ಗೆ ಯಾರಿಗೂ ಕಳಕಳಿ ಇಲ್ಲ ಎಂಬ ಆತಂಕ ಬೇಡ ಎಂದರು. ಬಹಳ ವರ್ಷದ ನಂತರ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಹೋರಾಟದ ಫಲವಾಗಿ ಒಂದು ನಿವೇಶನ ಸಿಕ್ಕಿದೆ. ಅದರಲ್ಲಿ ಎಲ್ಲಾ ನಿವೃತ್ತ ಪೊಲೀಸರಿಗೆ ಸಮಯ ಕಳೆಯಲು ಮತ್ತು ಗೆಳೆಯರೊಂದಿಗೆ ಸೇರಿ ಸಾಂಸ್ಕೃತಿಕ ಮತ್ತು ಇತರ ಕ್ರೀಯಾಶೀಲಾ ಚಟುವಟಿಕೆಗಳನ್ನು ಮಾಡಲು ಒಂದು ಭವನದ ಅವಶ್ಯಕತೆ ಇತ್ತು. ಅನೇಕ ಕುಟುಂಬಗಳಲ್ಲಿ ಮಕ್ಕಳು ತಮ್ಮ ಉದ್ಯೋಗದ ನಿಮಿತ್ತ ಬೇರೆ ಊರಿನಲ್ಲಿ ಕೆಲಸಕ್ಕೆ ಹೋಗುತ್ತಾರೆ. ಇಲ್ಲಿ ತಂದೆ-ತಾಯಿ ಮಾತ್ರ ಇರುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಮನರಂಜನೆ ಮತ್ತು ಗೆಳೆಯರೊಂದಿಗೆ ಬೆರೆಯಲು ಇದೊಂದು ಉತ್ತಮ ಅವಕಾಶ ನೀಡಿದಂತ್ತಾಗುತ್ತದೆ. ನಿಮ್ಮನ್ನು ನೋಡುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ. ನಾವು ಕೂಡ ನಾಳೆ ನಿವೃತ್ತರಾಗುವವರೇ ಎಂದು ಹೇಳಿದರು. ಕೆಲಸಕ್ಕೆ ಸೇರಿದಾಗಲೇ ನಿವೃತ್ತಿಯ ದಿನ ನಿಗದಿಯಾಗುತ್ತದೆ. ಪೊಲೀಸ್ ಇಲಾಖೆಯಿಂದ ಮತ್ತು ವೈಯಕ್ತಿಕವಾಗಿ ಈ ಭವನಕ್ಕೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆ. ಚೆನ್ನಾಗಿ ಯೋಜನೆ ರೂಪಿಸಿ ದೊಡ್ಡಮಟ್ಟದಲ್ಲಿ ಇದನ್ನು ಮಾಡಿ ಎಂದ ಅವರು, ನಿವೃತ್ತ ಪೊಲೀಸ್ ಅಧಿಕಾರಿಗಳೊಂದಿಗೆ ಸದಾ ಜಿಲ್ಲಾ ಪೊಲೀಸ್ ಇರುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಸಂಘದ ಅಧ್ಯಕ್ಷ ಎಚ್.ಈ.ಮಂಜಪ್ಪ ಮಾತನಾಡಿ, ಸಂಘ ಸ್ಥಾಪನೆಯಾಗಿ ೨೮ ವರ್ಷಗಳಾಗಿದೆ. ನಾವು ಹಲವು ಬಾರಿ ಮನವಿ ಮಾಡಿದ್ದೆವು. ಇತ್ತೀಚೆಗೆ ರಾಜ್ಯ ಪೊಲೀಸ್ ಡಿಜಿ, ಐಜಿಪಿ ಸಲೀಂ ಅವರು ಬಂದಾಗ ನಾವು ಮನವಿ ನೀಡಿದ ತಕ್ಷಣ ಸ್ಪಂದಿಸಿ ಜಿಲ್ಲಾ ರಕ್ಷಣಾಧಿಕಾರಿಗಳ ಮೂಲಕ ನಮ್ಮ ಮನವಿಗೆ ಸ್ಪಂದಿಸಿ ನಿವೇಶನ ನೀಡಿದ್ದಾರೆ. ಶೀಘ್ರದಲ್ಲೇ ಎಲ್ಲರ ನೆರವಿನೊಂದಿಗೆ ಇಲ್ಲಿ ಭವ್ಯಕಟ್ಟಡ ನಿರ್ಮಾಣವಾಗಲಿದೆ. ಪೊಲೀಸ್ ಬಂಧುಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕರಿಸುವಂತೆ ಅವರು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ರಮೇಶ್‌ ಕುಮಾರ್, ಕಾರ್ಯಪ್ಪ, ಡಿವೈಎಸ್ಪಿಗಳಾದ ಅಂಜನಪ್ಪ, ಸಂಜೀವ್‌ಕುಮಾರ್, ಐಪಿಎಸ್ ಪ್ರೊಬೆಷನರಿ ಮೇಘಾ ಅಗರ್‌ವಾಲ್, ಸಂಘದ ಪದಾಧಿಕಾರಿಗಳಾದದೆ ಎಚ್.ಮಂಜಪ್ಪ, ಎಂ.ಚಂದ್ರಶೇಖರಪ್ಪ, ವಿ.ಜಗನ್ನಾಥಯ್ಯ, ಕೃಷ್ಣೇಗೌಡ, ಡಿ.ಜಿ.ನಾಗರಾಜ್, ತುಕಾರಾಂ ಮತ್ತು ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.