ಸಾರಾಂಶ
ವಿ.ಎಂ. ನಾಗಭೂಷಣ
ಸಂಡೂರು: ತನ್ನ ಸುತ್ತ ಗಣಿ ಪ್ರದೇಶ, ದಟ್ಟ ಅರಣ್ಯ ಪ್ರದೇಶ, ಹಲವು ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ರಾಮಗಡದ ರಸ್ತೆ ಹದಗೆಟ್ಟು ದ್ವಿಚಕ್ರ ವಾಹನ ಸೇರಿದಂತೆ ಸಣ್ಣಗಾತ್ರದ ವಾಹನಗಳು ಸಂಚರಿಸಲು ಸಾಧ್ಯವಾಗದಂತಹ, ಒಂದು ವೇಳೆ ಸಂಚರಿಸಿದರೂ ಪ್ರಯಾಸ ಪಟ್ಟು ಸಾಗುವಂತಹ ಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನ ಸುಶೀಲಾನಗರದ ಮೂಲಕ ರಾಮಗಡ ಮಾರ್ಗವಾಗಿ ಸಂಡೂರು-ಹೊಸಪೇಟೆಯ ಮಾರ್ಗದಲ್ಲಿನ ಗೋಶಾಲೆಯವರೆಗೆ ಲೋಕೋಪಯೋಗಿ ಇಲಾಖೆಯ ರಸ್ತೆ ಇದೆ. ಇದೇ ಮಾರ್ಗದಲ್ಲಿ ಗಣಿ ಲಾರಿಗಳು ಸಂಚರಿಸುತ್ತವೆ. ಈ ರಸ್ತೆ ಗಣಿ ಲಾರಿಗಳ ನಿರಂತರ ಸಂಚಾರ, ಗಣಿ ಮಣ್ಣು ಲಾರಿಯ ಚಕ್ರಗಳಿಗೆ ಹತ್ತಿಕೊಂಡು ಅದು ರಸ್ತೆಯ ಮೇಲೆ ಬಿದ್ದು, ಮಳೆ ಬಂದಾಗ ಕೆಸರಿನ ಗದ್ದೆಯಂತಾಗುತ್ತದೆ. ಬೇಸಿಗೆಯಲ್ಲಿ ಈ ರಸ್ತೆ ಧೂಳುಮಯವಾಗುತ್ತದೆ. ಇಲ್ಲಿ ಡಾಂಬರ್ ರಸ್ತೆ ಇತ್ತೆಂಬುದರ ಗುರುತು ಕಾಣಿಸದ ಮಟ್ಟಿಗೆ ರಸ್ತೆ ಹದಗೆಟ್ಟಿದೆ.
ರಾಮಗಡ ರಸ್ತೆ ಹದಗೆಟ್ಟಿರುವುದು ಹಾಗೂ ಧೂಳು ಕೆಸರುಮಯವಾಗಿರುವ ಕಾರಣ ರಾಮಗಡಕ್ಕೆ ಸರ್ಕಾರಿ ಬಸ್ ಬರುವುದಿಲ್ಲ. ಗ್ರಾಮದ ಜನತೆ ತಾಲೂಕು ಕೇಂದ್ರ ಸಂಡೂರು, ಸುಶೀಲಾನಗರದಲ್ಲಿನ ಗ್ರಾಪಂ ಕೇಂದ್ರಕ್ಕೆ ಕಚೇರಿ ಕೆಲಸ, ವಾರದ ಸಂತೆ, ಶಾಲಾ ಕಾಲೇಜುಗಳು, ಆಸ್ಪತ್ರೆಗೆ ಹೋಗಿ ಬರಲು ಗಣಿ ಕಂಪನಿಗಳು ಒದಗಿಸುವ ಬಸ್, ಆ್ಯಂಬುಲೆನ್ಸ್ ಹಾಗೂ ಇನ್ನಿತರೆ ವಾಹನಗಳನ್ನೇ ಅವಲಂಬಿಸುವಂತಾಗಿದೆ. ಕೆಲವು ಬಾರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ. ಇದರಿಂದ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ತುಂಬ ತೊಂದರೆ ಅನುಭವಿಸಬೇಕಾಗಿದೆ. ಇತ್ತೀಚೆಗೆ ರಾಮಗಡದಲ್ಲಿ ನಡೆದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿಯೂ ಈ ಭಾಗದ ಗ್ರಾಮಸ್ಥರು ರಾಮಗಡ ರಸ್ತೆಯ ದುರಸ್ತಿ ಕುರಿತು ಅಧಿಕಾರಿಗಳನ್ನು ಒತ್ತಾಯಿಸಿದ್ದು ಕಂಡು ಬಂದಿತು.ರಾಮಗಡ ಗ್ರಾಮದ ಮುಖಂಡ ದೇವರಾಜ್ ತಮ್ಮ ಗ್ರಾಮದ ದುಃಸ್ಥಿತಿ ಕುರಿತು ಮಾತನಾಡಿ, ನಮ್ಮ ಗ್ರಾಮದ ರಸ್ತೆ ತುಂಬ ಹದಗೆಟ್ಟಿದೆ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ. ರಸ್ತೆ ಹದಗೆಟ್ಟಿರುವುದರಿಂದ ಆಸ್ಪತ್ರೆ, ಕಚೇರಿ, ಶಾಲಾ ಕಾಲೇಜುಗಳಿಗೆ, ರೇಷನ್ ತರಲು ತಾಲೂಕು ಹಾಗೂ ಗ್ರಾಪಂ ಕೇಂದ್ರಕ್ಕೆ ಹೋಗಿ ಬರಲು ತುಂಬ ತೊಂದರೆಯಾಗುತ್ತಿದೆ. ಸರ್ಕಾರ ರಸ್ತೆ ದುರಸ್ತಿಗೊಳಿಸಿದರೆ, ಸಾರ್ವಜನಿಕರಿಗೆ ತುಂಬ ಅನುಕೂಲವಾಗಲಿದೆ ಎಂದರು.
ಲೋಕೋಪಯೋಗಿ ಇಲಾಖೆ ಎಇಇ ಎನ್. ಕೃಷ್ಣಾನಾಯ್ಕ್ ರಸ್ತೆ ಅಭಿವೃದ್ಧಿ ಕುರಿತು ಪ್ರತಿಕ್ರಿಯಿಸಿ, ಸುಶೀಲಾನಗರದಿಂದ ರಾಮಗಡ ಮಾರ್ಗವಾಗಿ ಗೋಶಾಲೆಯವರೆಗೆ ೧೩ ಕಿ.ಮೀ. ಸಿಸಿ ರಸ್ತೆಯನ್ನು ಕೆಎಂಇಆರ್‌ಸಿ ಅನುದಾನದಡಿ ನಿರ್ಮಿಸಲು ಅನುಮತಿ ದೊರೆತಿದೆ. ಈ ಯೋಜನೆ ಟೆಂಡರ್ ಪ್ರಕ್ರಿಯೆಯ ಹಂತದಲ್ಲಿದೆ ಎಂದರು.ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ರಾಮಗಡ ಮಾರ್ಗದಲ್ಲಿನ ರಸ್ತೆಯ ಅಭಿವೃದ್ಧಿಯಿಂದ ರಾಮಗಡ ಗ್ರಾಮಸ್ಥರ ಬಹು ಕಾಲದ ಬೇಡಿಕೆಯೊಂದು ಈಡೇರಿದಂತಾಗುವುದಲ್ಲದೆ, ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ. ಈ ಭಾಗದ ರಸ್ತೆ ಬೇಗನೆ ದುರಸ್ತಿ ಭಾಗ್ಯವನ್ನು ಕಾಣಲಿ ಎಂಬುದು ಈ ಭಾಗದ ಜನರ ಆಶಯವಾಗಿದೆ.
ರಾಮಗಡ ರಸ್ತೆ ಕೆಸರುಮಯವಾಗಿದ್ದು, ಸಾರ್ವಜನಿಕರಿಗೆ ಸಂಚಾರಕ್ಕೆ ತುಂಬ ತೊಂದರೆಯಾಗಿದೆ. ಇದನ್ನು ಶೀಘ್ರ ದುರಸ್ತಿಪಡಿಸಬೇಕಿದೆ ಎನ್ನುತ್ತಾರೆ ಸುಶೀಲಾನಗರ ರೈತ ಮುಖಂಡ ಪಿ.ಎಸ್. ಧರ್ಮಾ ನಾಯ್ಕ್.ಗಣಿಗಾರಿಕೆಗೆ ಪರೋಕ್ಷವಾಗಿ ಲಾಭ ಮಾಡಿಕೊಡಲು ಸರ್ಕಾರ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುತ್ತಿಲ್ಲ ಎಂಬ ಸಂಶಯ ಮೂಡಿದೆ. ರಾಮಗಡ ಗ್ರಾಮಸ್ಥರಿಗೆ ರಸ್ತೆ ಅಭಿವೃದ್ಧಿ ಜೊತೆಗೆ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಬೇಕಿದೆ ಎನ್ನುತ್ತಾರೆ ಜನ ಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಉಪಾಧ್ಯಕ್ಷ ಶ್ರೀಶೈಲ ಆಲ್ದಳ್ಳಿ.