ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ನಾನು ಇಡೀ ರಾಜ್ಯಕ್ಕೇ ನೀರಾವರಿ ಮಂತ್ರಿಯಾಗಿದ್ದೇನೆ. ತುಮಕೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿನ ಅಭಿವೃದ್ಧಿ, ಶ್ರೇಯಸ್ಸು ನನಗೆ ಮುಖ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.ಜಿಲ್ಲೆಯ ಗುಬ್ಬಿ ತಾಲೂಕಿನ ಸುಂಕಾಪುರ ಬಳಿಯ ಟಿ.ಬಿ. ಕೆನಾಲ್‌ಗೆ ಭೇಟಿ ನೀಡಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯ ಪರಿವೀಕ್ಷಣೆ ನಡೆಸಿ ಮಾತನಾಡಿದರು.
ಸುಮಾರು 2 ತಿಂಗಳಿನಿಂದ ಕೇಂದ್ರ ಮಂತ್ರಿಗಳು ಹಾಗೂ ಶಾಸಕರು ಲಿಂಕ್ ಕೆನಾಲ್ ಕಾಮಗಾರಿ ಪರಿವೀಕ್ಷಣೆ ಮಾಡುವಂತೆ ಸಲಹೆ ನೀಡಿದ್ದರು. ಅದರಂತೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ್ದೇನೆ ಎಂದರು.ತುಮಕೂರು ಜಿಲ್ಲೆಯ ಜನತೆ ಎಲ್ಲ ಸಂದರ್ಭದಲ್ಲೂ ನನಗೆ ಹಾಗೂ ನಮ್ಮ ಸರ್ಕಾರ ರಚನೆಗೆ ಸಹಕಾರ ನೀಡಿದ್ದಾರೆ. ಅವರ ಹಿತ ಕಾಪಾಡುವುದು ನನ್ನ ಕರ್ತವ್ಯ. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಾನು ನೀರಾವರಿ ಸಚಿವನಾಗಿದ್ದೆ, ಆಗ ಈ ಯೋಜನೆಯನ್ನು ಮಂಜೂರಾತಿ ಮಾಡಿದೆವು. ಆ ನಂತರ ಬಂದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಆಗಿನ ಜಿಲ್ಲಾ ಸಚಿವರು ಈ ಕಾಮಗಾರಿಯನ್ನು ನಿಲ್ಲಿಸಿದ್ದರಿಂದ ಅಂದು ಇದರ ವೆಚ್ಚ 600 ಕೋಟಿ ರು. ಇದ್ದದ್ದು ಇಂದು 1000 ಕೋಟಿ ರು.ಗೆ ತಲುಪಿದೆ. ಕೇವಲ ನಾಲ್ಕೆೈದು ವರ್ಷಗಳಲ್ಲಿ 400 ಕೋಟಿ ರು. ಹೆಚ್ಚಳವಾಗಿದೆ ಎಂದು ಹೇಳಿದರು.
ಮಾಜಿ ಸಚಿವ ದಿ. ವೈ.ಕೆ. ರಾಮಯ್ಯನವರ ಕಾಲದಿಂದ ಈ ಯೋಜನೆಗಾಗಿ ಹೋರಾಟ ನಡೆದಿದೆ. ಅವರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಈಗಾಗಲೇ ಕೆಲಸ ಪ್ರಾರಂಭವಾಗಿದ್ದು, 400 ಕೋಟಿ ರು. ಹಣ ಕೂಡ ಬಿಡುಗಡೆ ಮಾಡಿ ಪೈಪ್ ಖರೀದಿ ಮಾಡಿದ್ದೇವೆ. ಇನ್ನು ನಾಲ್ಕೆೈದು ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದರು.ಕಾವೇರಿ ಜಲಾಶಯದಿಂದ ತಮಿಳುನಾಡಿಗೆ 177 ಟಿಎಂಸಿ ನೀರು ಹರಿಸಬೇಕಿದೆ. ಹಾಗೆಯೇ ಹೇಮಾವತಿ, ಹಾರಂಗಿ, ಕಬಿನಿ, ಕಾವೇರಿ ಎಲ್ಲ ಸೇರಿ ಈಗಾಗಲೇ 220 ಟಿ.ಎಂ.ಸಿ.ಯಷ್ಟು ನೀರು ಹೋಗಿದೆ. ಇನ್ನು ನಾಲ್ಕೆೈದು ತಿಂಗಳು ಮಳೆ ಬರುವ ಸಾಧ್ಯತೆ ಇದೆ. ಬಹುಶಃ 200 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗುವ ನಿರೀಕ್ಷೆಯಿದೆ. ಈ ನೀರನ್ನು ತಡೆಗಟ್ಟಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೆನಾಲ್‌ನಲ್ಲಿ ನೀರು ಹರಿಸುವ ಚಿಂತನೆ ಇದೆ. ಯಾವಾಗ ನೀರು ಅನುಕೂಲವಾಗಿ ಇರುತ್ತದೋ ಆಗ ಮಾತ್ರ ನೀರು ಹರಿಸಲು ಈ ಯೋಜನೆ ತಂದಿದ್ದೇವೆ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಕೂಡ ನೀರನ್ನು ಈ ಚಾನಲ್‌ನಿಂದ ಕೆಳಗಡೆ ಹೋಗಲು ಅವಕಾಶ ನೀಡಲ್ಲ. ಒಂದು ಲೆವೆಲ್‌ನಲ್ಲಿ ನೀರು ಹೋಗುವಂತೆ ಕ್ರಮ ಕೈಗೊಳ್ಳುತ್ತೇವೆ. ಸ್ಕ್ಯಾಡ್ ಅಳವಡಿಸಿ ನೀರನ್ನು ಕಂಟ್ರೋಲ್ ಮಾಡುತ್ತೇವೆ. ನೀರನ್ನು ಎಲ್ಲ ನಾಗರಿಕರು ಕಂಟ್ರೋಲ್ ಮಾಡುವ ಜತೆಗೆ ನೋಡಲು ಸಹ ಅವಕಾಶ ಮಾಡಿಕೊಡಲಾಗುತ್ತದೆ ಎಂದರು.ಕೃಷ್ಣ ಡ್ಯಾಂ ಎತ್ತರಕ್ಕೇರಿಸಲು ಬಿಡಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆ ರೀತಿ ಇಲ್ಲಿನ ಸ್ಥಳೀಯ ಶಾಸಕರಿಂದ ಆಗಬಾರದು. ಎಲ್ಲ ಬಿಜೆಪಿ ಶಾಸಕರು, ಕಾಂಗ್ರೆಸ್ ಶಾಸಕರು ನಮ್ಮವರೇ, ಎಲ್ಲ ಕ್ಷೇತ್ರಗಳ ಜನರ ಹಿತ ಕಾಪಾಡುವುದು ಸಹ ನನ್ನ ಕರ್ತವ್ಯ ಎಂದರು.
ಕುಣಿಗಲ್ ಒಂದೇ ಅಲ್ಲ, ತುಮಕೂರು ಜಿಲ್ಲೆಯ ಯಾವ ತಾಲೂಕಿಗೂ ಅನ್ಯಾಯವಾಗದಂತೆ ಗಮನವಹಿಸಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. 14 ಟಿ.ಎಂ.ಸಿ. ಕುಡಿಯುವ ನೀರು ಹೊರತುಪಡಿಸಿ, ಹೆಚ್ಚಿಗೆ ನೀರು ಬಂದಾಗ ಪಾವಗಡ, ಸಿರಾ, ಮಧುಗಿರಿ ಕೆರೆಗಳನ್ನು ತುಂಬಿಸಿ ಅಂತರ್ಜಲ ವೃದ್ಧಿಸಲು ಕ್ರಮ ವಹಿಸಲಾಗುವುದು ಎಂದರು.ಯಾವ ರೈತರೂ ಸಹ ಗಾಬರಿ, ಆತಂಕಕ್ಕೆ ಒಳಗಾಗುವುದು ಬೇಡ. ಜಿಲ್ಲೆಯ ಬೇರೆ ತಾಲೂಕುಗಳನ್ನು ಯಾವ ರೀತಿ ರಕ್ಷಣೆ ಮಾಡಬೇಕು ಎಂಬ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು ಎಂದರು.
ರೈತರ ಬದುಕನ್ನು ಕಾಪಾಡಲು ಹಾಗೂ ಅವರ ಸೇವೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ನನಗೆ ಕುಣಿಗಲ್ ಮಾತ್ರ ಮುಖ್ಯವಲ್ಲ, ಎಲ್ಲ ಕ್ಷೇತ್ರಗಳ ಹಿತ ಕಾಪಾಡುವುದು ನನ್ನ ಜವಾಬ್ದಾರಿ. ಎಲ್ಲ ಶಾಸಕರು, ರೈತರು ಎಲ್ಲರೂ ಸೇರಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡೋಣ. ಏನೇ ಸಮಸ್ಯೆ ಇದ್ದರೂ ಬಗೆಹರಿಸೋಣ ಎಂದರು.ಬೇರೆ ತಾಲೂಕಿಗೆ ಎಷ್ಟು ನೀರು ಸಿಗಬೇಕೋ ಅದಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ನಾವು ಕ್ರಮ ವಹಿಸುತ್ತೇವೆ. ನಿಮಗೆ ಕಡಿಮೆ ಮಾಡಿ, ಅವರಿಗೆ ಜಾಸ್ತಿ ಕೊಡುವ ಪ್ರಶ್ನೆಯೇ ಇಲ್ಲ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಈ ದೃಷ್ಟಿಯಿಂದ ಕಾರ್ಯಕ್ರಮ ರೂಪಿಸುತ್ತೇವೆ ಎಂದರು.
ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಿ ಕುಣಿಗಲ್‌ಗೆ ನೀರು ಹರಿಸುತ್ತೇವೆ. ಸಮಾನತೆಯಿಂದ ಎಷ್ಟು ನೀರಿನ ಪಾಲು ಸಿಗಬೇಕು ಆ ಪಾಲಿಗೆ ನಾವು ಜವಾಬ್ದಾರಿಯಾಗುತ್ತೇವೆ ಎಂದು ಅವರು ಹೇಳಿದರು.ಕಾನೂನು ಪ್ರಕಾರ ರೈತರಿಗೆ ಏನು ಪರಿಹಾರ ಕೊಡಬೇಕು ಅದನ್ನು ಕೊಡುತ್ತೇವೆ ಎಂದ ಅವರು, ಒಂದು ಶುಭ ಮುಹೂರ್ತ ನೋಡಿ ಕಾಮಗಾರಿ ಆರಂಭಿಸಲಾಗುವುದು ಎಂದರು.
ಶಾಸಕರಾದ ಟಿ.ಬಿ. ಜಯಚಂದ್ರ, ಎಸ್.ಆರ್. ಶ್ರೀನಿವಾಸ್, ಡಾ. ರಂಗನಾಥ್ ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರು ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಹಾಗೂ ಹೇಮಾವತಿ ನಾಲೆಯಲ್ಲಿ ನೀರು ಹರಿಯುತ್ತಿರುವುದನ್ನು ವೀಕ್ಷಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ, ಮುಖಂಡರಾದ ತುರುವೇಕೆರೆ ರಾಜಣ್ಣ ಸೇರಿ ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಪಾಲ್ಗೊಂಡಿದ್ದರು.