ಸಾರಾಂಶ
ಹೊಸದುರ್ಗ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಸಾಂಸ್ಕೃತಿಕ ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೇಂಜರ್ಸ್ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ಉದ್ಘಾಟನೆಯನ್ನು ಶಾಸಕ ಬಿ.ಜಿ.ಗೋವಿಂದಪ್ಪ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಹಾಗೂ ಉತ್ತಮ ವ್ಯಕ್ತಿತ್ವ ಬೆಳಸಿಕೊಂಡಾಗ ಸಮಾಜದಲ್ಲಿ ಒಬ್ಬ ದೊಡ್ಡ ವ್ಯಕ್ತಿಯಾಗಲು ಸಾಧ್ಯ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಸಾಂಸ್ಕೃತಿಕ ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೇಂಜರ್ಸ್ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಯ ಶಿಕ್ಷಣ ಮತ್ತು ಯುವಜನತೆಯ ಮೇಲೆ ಅವಲಂಭಿತವಾಗಿದೆ. ದೇಶವನ್ನು ಎಲ್ಲಾ ಕೇತ್ರಗಳಲ್ಲಿಯೂ ಅಭಿವೃದ್ದಿಪಡಿಸುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ. ಇಂದಿನ ಯುವಜನತೆ ಉತ್ತಮ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು. ಅಭಿವೃದ್ಧಿಶೀಲ ರಾಷ್ಟ್ರ, ರಾಜ್ಯ ಹಾಗೂ ಗ್ರಾಮಗಳನ್ನು ನಿರ್ಮಾಣ ಮಾಡಬೇಕು. ಕಾಲೇಜಿಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾಲೇಜಿಗೆ ಒಳ್ಳೆಯ ಫಲಿತಾಂಶ ನೀಡಬೇಕು. ಕಾಲೇಜಿನ ಗೌರವ ಕಾಪಾಡಬೇಕು ಎಂದು ತಿಳಿಸಿದರು.ಮುಂದಿನ ಪೀಳಿಗೆಗೆ ಯಾವುದೇ ಸವಲತ್ತುಗಳು ಕೊರತೆಯಾಗದಂತೆ ಅಭಿವೃದ್ಧಿ ಪಡಿಸುವ ಹೊಣೆಗಾರಿಕೆ ನನ್ನ ಮೇಲಿದೆ. ಮತದಾರರ ಮೌಲ್ಯ ಎತ್ತಿ ಹಿಡಿಯುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ 2 ಕೋಟಿ ರು. ಅನುದಾನ ನೀಡಲಾಗಿದ್ದು, ಸದ್ಯದಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗುವುದು. ಆಹಾರ ಮತ್ತು ನಾಗರೀಕ ಸರಬರಾಜ ನಿಗಮದಲ್ಲಿ ಲಭ್ಯವಿದ್ದ 1.17 ಕೋಟಿ ರು. ಸಿಎಸ್‌ಆರ್ ಹಣವನ್ನು ತಾಲೂಕಿನ ಕಾಲೇಜುಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ಸಂಗೇನಹಳ್ಳಿ ಮಾತನಾಡಿದರು. ಪ್ರಾಂಶುಪಾಲ ಡಾ.ಅಶ್ವಥ್ ಯಾದವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಾಜ ಸೇವಕ ಆಗ್ರೋ ಶಿವಣ್ಣ, ಪುರಸಭೆ ನಾಮನಿರ್ದೇಶನ ಸದಸ್ಯ ಬ್ರಹ್ಮಪಾಲ್, ಜಿಪಂ ಕೆಪಿಡಿ ಸದಸ್ಯೆ ದೀಪಿಕಾ ಸತೀಶ್, ಕೆ.ಸಿ.ನಿಂಗಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಧುಸೂಧನ್ ಚಕ್ರವರ್ತಿ, ಓರಗಲ್ಲಪ್ಪ, ಚಂದ್ರಶೇಖರ್, ಎಚ್.ಪಿ.ಸತೀಶ್, ಬಸವರಾಜ್, ಕೃಷ್ಣಮೂರ್ತಿ, ಪಾಷ, ಹನುಮಂತಪ್ಪ, ಬನಸೀಹಳ್ಳಿ ಅಜ್ಜಪ್ಪ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಆರ್.ಜಯಪ್ರಕಾಶ್, ಐಕ್ಯೂಎಸಿ ಸಂಚಾಲಕ ಎಂ.ಈ.ಸತೀಶ್, ದೈಹಿಕ ಶಿಕ್ಷಣ ವಿಭಾಗ ಸಂಚಾಲಕ ಎಸ್.ವಿ.ಶೈಲೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಕೆ.ಆರ್.ಧನಂಜಯ್, ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಎಚ್.ಕೆ.ಸುಬ್ರಹ್ಮಣ್ಯಶೆಟ್ಟಿ ಸೇರಿ ಅನೇಕರಿದ್ದರು.