ಮಠದ ಭಕ್ತರೇ ಉತ್ತರಾಧಿಕಾರಿ ಬಂಧುಗಳು

| Published : Nov 21 2024, 01:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿ ಯಾವುದೇ ಮಠ, ಪೀಠಕ್ಕೆ ನೂತನವಾಗಿ ಉತ್ತರಾಧಿಕಾರಿಯಾದವರು ಸಂಬಂಧಗಳನ್ನು ಕಡಿದುಕೊಳ್ಳಬೇಕಾಗುತ್ತದೆ. ಸಮಾಜ ಹಾಗೂ ಮಠದ ಭಕ್ತರೇ ಅವರ ಬಂಧುಗಳಾಗುತ್ತಾರೆ ಎಂದು ಗದಗಿನ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.ನಗರದ ಓಲೇಮಠದಲ್ಲಿ ಲಿಂ.ಡಾ.ಅಭಿನವ ಕುಮಾರಚನ್ನಬಸವ ಮಹಾಸ್ವಾಮಿಗಳ ಸ್ಮರಣೋತ್ಸವ-ನುಡಿ ನಮನ ಹಾಗೂ ನೂತನ ಉತ್ತರಾಧಿಕಾರಿ ನೇಮಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಯಾವುದೇ ಮಠ, ಪೀಠಕ್ಕೆ ನೂತನವಾಗಿ ಉತ್ತರಾಧಿಕಾರಿಯಾದವರು ಸಂಬಂಧಗಳನ್ನು ಕಡಿದುಕೊಳ್ಳಬೇಕಾಗುತ್ತದೆ. ಸಮಾಜ ಹಾಗೂ ಮಠದ ಭಕ್ತರೇ ಅವರ ಬಂಧುಗಳಾಗುತ್ತಾರೆ ಎಂದು ಗದಗಿನ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.ನಗರದ ಓಲೇಮಠದಲ್ಲಿ ಲಿಂ.ಡಾ.ಅಭಿನವ ಕುಮಾರಚನ್ನಬಸವ ಮಹಾಸ್ವಾಮಿಗಳ ಸ್ಮರಣೋತ್ಸವ-ನುಡಿ ನಮನ ಹಾಗೂ ನೂತನ ಉತ್ತರಾಧಿಕಾರಿ ನೇಮಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಮಠದ ಪೀಠ ಅಲಂಕರಿಸುವವರು ತಂದೆ, ತಾಯಿ, ಬಂದು ಬಾಂಧವರ ಸಂಬಂಧವನ್ನು ಕಡಿದುಕೊಳ್ಳಬೇಕು. ಜವಾಬ್ದಾರಿಯುತ ಸಮಾಜದ ಮಗುವಾಗಿ ಇರಬೇಕು. ಆಧ್ಯಾತ್ಮಿಯಾಗಿ, ಬಸವಾದಿ ಶರಣರ ಆಶಯದಂತೆ ನಡೆಯಬೇಕು. ವಚನಗಳ ಅಧ್ಯಯನ ಮಾಡಬೇಕು, ಅಧ್ಯಯನದಿಂದ ಜ್ಞಾನ ಹೆಚ್ಚುತ್ತದೆ. ಲಿಂಗಪೂಜೆ, ಸಮಾಜ ಸೇವೆ ಎರಡೂ ಮುಖ್ಯವಾದ ಕಾರ್ಯಗಳಾಗಿವೆ ಎಂದು ವಿವರಿಸಿದರು.

ಲಿಂಗೈಕ್ಯ ಡಾ.ಚನ್ನಬಸವ ಸ್ವಾಮೀಜಿ ಅವರು ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯ ಸಂಪಾದಿಸಿದ್ದರು. 21ನೇ ಶತಮಾನದ ಆಧುನಿಕ ವಚನಕಾರರಾಗಿದ್ದರು. ದ್ವಿಪತಿ ಛಂದಸಿನಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲನೆಯದಾಗಿ ಬಸವ ಪುರಾಣ ಬರೆದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು ಎಂದರು.

ಹಂದಿಗುಂದ ಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಶ್ರೀಮಠದ ಸಾಹಿತ್ಯ ವಿದ್ವತ್ ಪರಂಪರೆಯನ್ನು ಓಲೇಮಠದ ಶ್ರೀಗಳು ಪ್ರಾರಂಭಿಸಿದ್ದಾರೆ. ಮಠಕ್ಕೂ ಭಕ್ತರಿಗೂ ಅವಿನಾಭಾವ ಸಂಬಂಧ ಇದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.

ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಲಿಂ.ಡಾ.ಅಭಿನವ ಕುಮಾರಚನ್ನಬಸವ ಸ್ವಾಮಿಗಳು ದಯಾಮಯಿಗಳಾಗಿದ್ದರು. ಭಕ್ತರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು. ಅವರ ಅಪಾರವಾದ ಪಾಂಡಿತ್ಯದಿಂದ ಎಲ್ಲರನ್ನೂ ತಮ್ಮತ್ತ ಸೆಳೆದುಕೊಳ್ಳುತ್ತಿದ್ದರು. ಅವರು ರಚಿಸಿರುವ ಗ್ರಂಥಗಳಿಗೆ ಗ್ರಂಥಾಲಯವನ್ನು ನಿರ್ಮಿಸಲು ಸಹಕಾರ ನೀಡುವುದಾಗಿ ತಿಳಿಸಿದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಓಲೇಮಠದ ಶ್ರೀಗಳು ಜಮಖಂಡಿ ಜಿಲ್ಲೆಯಾಗಬೇಕು ಎಂದು ಅಭಿಲಾಸೆ ಹೊಂದಿದ್ದರು. ವಿವಿಧ ಹೋರಾಟಗಳಲ್ಲಿಯೂ ಮುಂದೆ ಇರುತ್ತಿದ್ದರು. ಜಮಖಂಡಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಜನಪರ ಕಾಳಜಿಯ ಒಬ್ಬ ಧೀಮಂತ ಸನ್ಯಾಸಿಯನ್ನು ಕಳೆದುಕೊಂಡು ಜಮಖಂಡಿ ಬಡವಾಗಿದೆ ಎಂದು ಹೇಳಿದರು.

ಓಲೇಮಠದ ನೂತನ ಉತ್ತರಾಧಿಕಾರಿ ಆನಂದ ದೇವರು ಮಾತನಾಡಿ, ಜಮಖಂಡಿ ಓಲೇಮಠಕ್ಕೆ ನಾನು ಹೂ ತರುವ ಕೆಲಸ ಮಾಡುತ್ತೇನೆ. ನಾನು ಜಮಖಂಡಿಯ ಮನೆ ಮಗನಾಗಿ ಸಮಾಜ ಸೇವೆ ಮಾಡುತ್ತೇನೆ. ಮಠದ ಮೇಲೆ ಎಂದಿನಂತೆ ಎಲ್ಲರೂ ಸಹಕಾರ ಕೊಡಿ ಎಂದು ಭಕ್ತರಲ್ಲಿ ಮನವಿ ಮಾಡಿದರು.

ಗೌರಿಶಂಕರ ಶಿವಾಚಾರ್ಯ ಶ್ರೀಗಳು, ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಕೊಣ್ಣೂರ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಶ್ರೀಗಳು, ನಾಗನೂರ ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿದರು.

-----------ಬಾಕ್ಸ್‌....

ಆನಂದ ದೇವರು ಓಲೇಮಠದ ನೂತನ ಉತ್ತರಾಧಿಕಾರಿ

ಗದಗಿನ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಹಂದಿಗುಂದ ಶಿವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೆವಾಡಿ ತಾಲೂಕಿನ ಹುಣಶ್ಯಾಳದ ಆನಂದ ದೇವರು ಅವರಿಗೆ ರುದ್ರಾಕ್ಷಿ ಕಿರೀಟ, ಚಿನ್ನದ ಗುಂಡಗಡಿಗಿ, ಶೀರೋ ವಸ್ತ್ರ, ತಾಂಡೊಲೆಗಳನ್ನು ಹಸ್ತಾಂತರಿಸುವ ಮೂಲಕ ಜಮಖಂಡಿಯ ಓಲೇಮಠದ ನತೂನ ಉತ್ತರಾಧಿಕಾರಿಯಾಗಿ ನೇಮಿಸಲಾಯಿತು.

ಈ ವೇಳೆ ಮರೆಗುದ್ದಿಯ ಡಾ.ನೀರುಪಾದೀಶ್ವರ ಶ್ರೀಗಳು, ಚಿಮ್ಮಡದ ಪ್ರಭು ಸ್ವಾಮೀಜಿ, ಮಹಾಂತ ಸ್ವಾಮೀಜಿ, ಗುರುಮಹಾಂತ ಶ್ರೀಗಳು ಇತರರು ಇದ್ದರು. ಸರಸ್ವತಿ ಸಬರದ ವಚನ ಗಾಯನ ಹಾಡಿದರು. ಬಸವರಾಜೇಂದ್ರ ಝುಂಜರವಾಡ ಸ್ವಾಗತಿಸಿ ನಿರೂಪಿಸಿದರು. ಬೆಳಗ್ಗೆ 5ರಿಂದ 8.30 ರವರೆಗೆ ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾದ ಅಶೋಕ ಬರಗುಂಡಿ, ರವಿ ಯಡಹಳ್ಳಿ ನೇತೃತ್ವದಲ್ಲಿ ಬಸವಾದಿ ಶರಣರ ಕ್ರೀಯಾ ಸಮಾದಿ ಆವರಣದಲ್ಲಿ ವಚನ ಪಠಣ ಕಾರ್ಯಕ್ರಮ ಜರುಗಿತು.