ಧಾರವಾಡ ಪಾಲಿಕೆಗೆ ಸಿಗುವದೇ ವಿಶೇಷ ಅನುದಾನ!

| Published : Mar 06 2025, 12:35 AM IST

ಸಾರಾಂಶ

ಧಾರವಾಡದ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಇಲ್ಲಿಯ ಜನರು ರಾಜ್ಯ ಬಜೆಟ್‌ ಮೇಲೆ ಅತೀವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಪ್ರತ್ಯೇಕಗೊಂಡು ಸ್ವತಂತ್ರ ಅಸ್ತಿತ್ವ ಪಡೆಯುವ ತವಕದಲ್ಲಿರುವ ಧಾರವಾಡ ಪಾಲಿಕೆಗೆ ವಿಶೇಷ ಅನುದಾನ ಸೇರಿದಂತೆ ಧಾರವಾಡದ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಇಲ್ಲಿಯ ಜನರು ರಾಜ್ಯ ಬಜೆಟ್‌ ಮೇಲೆ ಅತೀವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹಲವು ವರ್ಷಗಳ ಹೋರಾಟದ ನಂತರ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯ ಅಸ್ತಿತ್ವ ದೊರೆದಿದ್ದು, ರಾಜ್ಯ ಸರ್ಕಾರ ಪ್ರಾಥಮಿಕ ಅಧಿಸೂಚನೆ ಸಹ ಹೊರಡಿಸಿ ಆಕ್ಷೇಪಣೆಗಳಿಗೆ ಅವಕಾಶ ನೀಡಿತ್ತು. ಆಕ್ಷೇಪಣೆಗಳ ಪರಿಶೀಲನೆ ನಂತರ ಅಂತಿಮ ಅಧಿಸೂಚನೆ ಸಹ ಹೊರಡಿಸಲಿದ್ದು, ಈ ಬಜೆಟ್‌ನಲ್ಲಿ ಧಾರವಾಡ ಪಾಲಿಕೆಗೆ ₹100 ಕೋಟಿ ಅನುದಾನ ನೀಡಬೇಕು ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಪ್ರತ್ಯೇಕ ಪಾಲಿಕೆಯ ಹೋರಾಟಗಾರರೂ ಬಜೆಟ್‌ನಲ್ಲಿ ಧಾರವಾಡ ಪಾಲಿಕೆಗೆ ಅನುದಾನದ ಬೇಡಿಕೆ ಇಟ್ಟಿದ್ದಾರೆ.

ಧಾರವಾಡ ಹೊರ ಪ್ರದೇಶದಲ್ಲಿ ವಿವಿಧ ಜಿಲ್ಲೆಗಳನ್ನು ಸಂಪರ್ಕಿಸಲು ವರ್ತುಲ ರಸ್ತೆಯ ಬೇಡಿಕೆ ಹಲವು ವರ್ಷಗಳಿಂದ ಇದೆ. ಸವದತ್ತಿ-ಯರಗಟ್ಟಿ ಮಾರ್ಗ, ನವಲಗುಂದ-ಬಾಗಲಕೋಟೆ-ವಿಜಯಪೂರ ಸೇರಿ ಬಹುತೇಕ ಹೊರ ಜಿಲ್ಲೆಗಳಿಗೆ ನಗರದ ಮಧ್ಯೆದ ಇಕ್ಕಟ್ಟಾದ ರಸ್ತೆಯಲ್ಲಿ ಸಂಚರಿಸುವ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಹೊರ ವಲಯದಲ್ಲಿ ಆಗಿರುವಂತೆ ಧಾರವಾಡಕ್ಕೂ ವರ್ತುಲ ರಸ್ತೆಯ ಅಗತ್ಯತೆ ಸಾಕಷ್ಟಿದೆ.

ಮೂಲಭೂತ ಸೌಕರ್ಯ

ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣ ಹೊರತು ಪಡಿಸಿ ಧಾರವಾಡದಲ್ಲಿ ಮತ್ತಾವ ಕ್ರೀಡಾಂಗಣವಿಲ್ಲ. ಕರ್ನಾಟಕ ವಿವಿ, ಕೃಷಿ ವಿವಿ ಸೀಮಿತವಾಗಿದ್ದು, ಸಾರ್ವಜನಿಕವಾಗಿ ಆರ್‌.ಎನ್‌. ಶೆಟ್ಟಿ ಬಿಟ್ಟರೆ ಗತಿ ಇಲ್ಲ. ಕವಿವಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಬಜೆಟ್‌ನಲ್ಲಿ ಅನುದಾನ ತರುವ ಮೂಲಕ ಕ್ರೀಡಾಂಗಣ ಮರು ಸ್ಥಾಪನೆಗೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಯೋಚಿಸಿದ್ದು, ಕಾದು ನೋಡಬೇಕಿದೆ.

ಮಾರುಕಟ್ಟೆ

ಧಾರವಾಡದಲ್ಲಿ ಒಂದೂ ಸುಸಜ್ಜಿತ ಮಾರುಕಟ್ಟೆಗಳಿಲ್ಲ, ಅದರಲ್ಲೂ ಸೂಪರ ಮಾರುಕಟ್ಟೆ ಅಭಿವೃದ್ಧಿ ಮಾಡಲು ಜನಪ್ರತಿನಿಧಿಗಳು ಭರವಸೆ ನೀಡಿದ್ದೇ ಬಂತು. ಮಾರುಕಟ್ಟೆ ಮಾತ್ರ ಸೂಪರ್ ಆಗಲಿಲ್ಲ. ಪಾರ್ಕಿಂಗ್‌ ಸಮಸ್ಯೆಯಿಂದ ಮಾರುಕಟ್ಟೆಗೆ ಹೋಗಿ ಬರುವುದು ಅದರಲ್ಲೂ ಹಬ್ಬ-ಹರಿದಿನಗಳಲ್ಲಿ ಜನರು ತೀವ್ರ ಪರದಾಡುವಂತಾಗಿದೆ.

ಇತರೆ ಅಭಿವೃದ್ಧಿಗೆ ಅನುದಾನ

ಉಳಿದಂತೆ ಧಾರವಾಡ ಜಿಲ್ಲಾಸ್ಪತ್ರೆಯನ್ನು ಸ್ಥಳಾಂತರಿಸುವುದು, ಧಾರವಾಡ ಜಿಲ್ಲಾಸ್ಪತ್ರೆಯ ಒತ್ತಡ ಕಡಿಮೆ ಮಾಡಲು ಗರಗ, ಉಪ್ಪಿನ ಬೆಟಗೇರಿ, ಹೆಬ್ಬಳ್ಳಿ ಅಂತಹ ದೊಡ್ಡ ಊರುಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಿಸುವುದು, ಅಳ್ನಾವರ ಮತ್ತು ಕಲಘಟಗಿಗಳಲ್ಲಿ ದೊಡ್ಡ ಮಟ್ಟದ ಆಸ್ಪತ್ರೆ, ಕ್ರೀಡಾಂಗಣ ಸ್ಥಾಪನೆ, ಹೊಸ ಸ್ಮಶಾನಗಳ ಸ್ಥಾಪನೆ, ಹಳೆಯ ಸ್ಮಶಾನಗಳ ಅಭಿವೃದ್ಧಿ ಅನುದಾನ ಒದಗಿಸಬೇಕು.

ಪ್ರಮುಖವಾಗಿ ಧಾರವಾಡ ಶೈಕ್ಷಣಿಕವಾಗಿ ಗುರುತಿಸಿಕೊಂಡಿದ್ದು, ಹತ್ತಾರು ಸಾವಿರ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಸಮಸ್ಯೆ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಸತಿ ನಿಲಯ, ಇದ್ದ ನಿಲಯಗಳಿಗೆ ಮೂಲಭೂತ ಸೌಕರ್ಯಗಳಿಗೆ ಅನುದಾನ, ಸ್ವಂತ ಕಟ್ಟಡಗಳ ಭಾಗ್ಯವನ್ನು ಇದೇ ಬಜೆಟ್‌ನಲ್ಲಿ ನಿರೀಕ್ಷಿಸಲಾಗಿದೆ.

ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಿ

ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ರಿಂಗ್‌ ರಸ್ತೆ, ನೀರಾವರಿ ಯೋಜನೆಗಳು, ಸ್ಥಳೀಯ ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರ ಮೂಲ ಸೌಕರ್ಯ, ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಸಹಿತ ನಾನಾ ಕ್ಷೇತ್ರಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಜೆಟ್‌ ಮೂಲಕ ಉತ್ತರ ನೀಡಬೇಕು. ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ಮುಂದುವರೆಸುತ್ತಲೆ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳನ್ನು ಹೆಚ್ಚಿನ ಕರ ಭಾರಿ ಹೇರದೆ ಕೈಗೊಳ್ಳಬೇಕು ಎಂದು ವ್ಯಾಪಾರಸ್ಥರಾದ ಉದಯ ಯಂಡಿಗೇರಿ ಆಗ್ರಹಿಸುತ್ತಾರೆ.