ಮಹಿಳಾ ಸಫಾಯಿ ಕರ್ಮಚಾರಿಗಳ ದುಸ್ತರ ಬದುಕು : ವಿಶ್ವ ಸಂಸ್ಥೆಯಲ್ಲಿ ಡಾ. ಪ್ರೀತಿ ಲೋಲಾಕ್ಷ ವಿಷಯ ಮಂಡನೆ

| N/A | Published : Mar 03 2025, 01:51 AM IST / Updated: Mar 03 2025, 11:36 AM IST

ಸಾರಾಂಶ

 . ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ತಜ್ಞೆ, ಮಂಗಳೂರು ಮೂಲದ ಡಾ. ಪ್ರೀತಿ ಲೋಲಾಕ್ಷ ನಾಗವೇಣಿ ಅವರು ಮಹಿಳಾ ಸಫಾಯ್ ಕರ್ಮಚಾರಿಗಳ ಅತ್ಯಂತ ದುಸ್ತರ ಬದುಕಿನ ಅನಾವರಣ ಮಾಡಿದರು.

 ಮಂಗಳೂರು : ಭಾರತದ ಅತ್ಯಂತ ಶೋಷಿತ ಜನವರ್ಗವಾಗಿರುವ ಮಹಿಳಾ ಸಫಾಯ್ ಕರ್ಮಚಾರಿಗಳ ಅಘಾತಕಾರಿ ಹಾಗೂ ದುರಂತಮಯ ಬದುಕಿನ ಬಗ್ಗೆ ವಿಶ್ವ ಸಂಸ್ಥೆಯ ಗಮನ ಸೆಳೆದಿದ್ದಾರೆ. ಈ ಅಮಾನವೀಯ ಮತ್ತು ನಿಷೇಧಿತ ಪದ್ಧತಿಯನ್ನು ಕೊನೆಗಾಣಿಸಲು ಅಗತ್ಯ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಲಾಗಿದೆ. 

ಫೆಬ್ರವರಿ 17 ರಂದು ಜಿನೇವಾದಲ್ಲಿ ‘ಮಹಿಳೆಯರ ವಿರುದ್ಧದ ಎಲ್ಲ ವಿಧದ ತಾರತಮ್ಯ ನಿರ್ಮೂಲನೆ’ ಕುರಿತ ವಿಶ್ವ ಸಂಸ್ಥೆಯ ಸಮಿತಿಯ 90 ನೇ ಅಧಿವೇಶನದಲ್ಲಿ ಲಿಂಗಾಧಾರಿತ ಪೂರ್ವಾಗ್ರಹಗಳ ಕುರಿತು ನಡೆದ ಸಾಮಾನ್ಯ ಚರ್ಚೆಯಲ್ಲಿ ಈ ವಿಚಾರ ಮಂಡನೆಯಾಗಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ತಜ್ಞೆ, ಮಂಗಳೂರು ಮೂಲದ ಡಾ. ಪ್ರೀತಿ ಲೋಲಾಕ್ಷ ನಾಗವೇಣಿ ಅವರು ಮಹಿಳಾ ಸಫಾಯ್ ಕರ್ಮಚಾರಿಗಳ ಅತ್ಯಂತ ದುಸ್ತರ ಬದುಕಿನ ಅನಾವರಣ ಮಾಡಿದರು.

ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕುರಿತ ಸಮಿತಿ ಸಂಘಟಿಸಿರುವ ಈ ಅಧಿವೇಶನದಲ್ಲಿ ವಿಶ್ವ ಸಂಸ್ಥೆಗಳ ವಿವಿಧ ಸಮಿತಿಗಳ ಮುಖ್ಯಸ್ಥರುಗಳು, ಆಸ್ಟ್ರಿಯಾ, ಕೆನಡಾ, ಜಪಾನ್, ನೆದರ್‌ ಲ್ಯಾಂಡ್‌, ಯುಎಇ ಸೇರಿದಂತೆ 14 ರಾಷ್ಟ್ರಗಳ ಪ್ರತಿನಿಧಿಗಳು, ವಿಶ್ವ ಸಂಸ್ಥೆಯ ಸಂಘಟನೆಯಾದ ಯುನೆಸ್ಕೊ ಪ್ರತಿನಿಧಿಗಳು, 17 ಅಂತರ್ ರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಚರ್ಚೆಯಲ್ಲಿ ವೈಯಕ್ತಿಕ ನೆಲೆಯಲ್ಲಿ ಪಾಲ್ಗೊಂಡ ಇಬ್ಬರು ತಜ್ಞರ ಪೈಕಿ ಡಾ. ಪ್ರೀತಿ ಅವರೂ ಒಬ್ಬರಾಗಿದ್ದಾರೆ.ಡಾ. ಪ್ರೀತಿ ಎಲ್. ಎನ್. ಅವರು, ಡಾ. ಅಮಿತ್ ಆನಂದ್ ಅವರೊಂದಿಗೆ ಜಂಟಿಯಾಗಿ ಸಿದ್ಧಪಡಿಸಿ ಪ್ರಸ್ತುತ ಪಡಿಸಿರುವ ಹೇಳಿಕೆ (ವಿಡಿಯೋ)ಯನ್ನು ವಿಶ್ವ ಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.