ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ಟ್ರಂಪ್‌ ಶಾಕ್‌ : ಹೊರಬರುವ ಕಾರ್ಯಾದೇಶಕ್ಕೆ ಸಹಿ

| N/A | Published : Feb 06 2025, 12:19 AM IST / Updated: Feb 06 2025, 05:07 AM IST

ಸಾರಾಂಶ

 ವಿದೇಶಗಳಿಗೆ ನೀಡುತ್ತಿದ್ದ ದೇಣಿಗೆ ಸ್ಥಗಿತಗೊಳಿಸಿದ ಬೆನ್ನಲ್ಲೇ ಇದೀಗ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ (ಯುಎನ್‌ಎಚ್‌ಆರ್‌ಸಿ)ಯಿಂದ ಹೊರಬರುವ ಕಾರ್ಯಾದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ಸಹಿಹಾಕಿದ್ದಾರೆ.

ನ್ಯೂಯಾರ್ಕ್‌: ವಿದೇಶಗಳಿಗೆ ನೀಡುತ್ತಿದ್ದ ದೇಣಿಗೆ ಸ್ಥಗಿತಗೊಳಿಸಿದ ಬೆನ್ನಲ್ಲೇ ಇದೀಗ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ (ಯುಎನ್‌ಎಚ್‌ಆರ್‌ಸಿ)ಯಿಂದ ಹೊರಬರುವ ಕಾರ್ಯಾದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ಸಹಿಹಾಕಿದ್ದಾರೆ. ಜತೆಗೆ, ಪ್ಯಾಲೆಸ್ತೀನಿ ನಿರ್ವಸಿತರಿಗೆ ಭ‍ವಿಷ್ಯದಲ್ಲಿ ಹಣಕಾಸು ನೆರವು ನೀಡದಿರಲು ನಿರ್ಧರಿಸಿದ್ದಾರೆ.

ಇದೇ ವೇಳೆ ವಿಶ್ವಸಂಸ್ಥೆಯ ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಘಟನೆ(ಯುನೆಸ್ಕೋ)ಯಲ್ಲಿ ತನ್ನ ಸಹಭಾಗಿತ್ವದ ಕುರಿತು ಪುನರ್‌ ಪರಿಶೀಲಿಸುವಂತೆಯೂ ಅವರು ನಿರ್ದೇಶನ ನೀಡಿದ್ದಾರೆ.

ಎರಡನೇ ವಿಶ್ವಯುದ್ಧದ ನಂತರ ಅಮೆರಿಕವು ಭವಿಷ್ಯದ ಸಂಘರ್ಷಗಳನ್ನು ತಡೆದು ವಿಶ್ವದಲ್ಲಿ ಶಾಂತಿ ಮತ್ತು ಸುರಕ್ಷತೆ ಕಾಪಾಡಲು ವಿಶ್ವಸಂಸ್ಥೆಗೆ ಹಣಕಾಸು ನೆರವು ನೀಡಿದೆ. ಆದರೆ ವಿಶ್ವಸಂಸ್ಥೆಯ ಕೆಲ ಏಜೆನ್ಸಿಗಳು ಮತ್ತು ಸಂಘಟನೆಗಳು ಈ ಉದ್ದೇಶದಿಂದ ವಿಮುಖವಾಗಿವೆ ಮತ್ತು ನಮ್ಮ ಮಿತ್ರರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿವೆ ಹಾಗೂ ಯೆಹೂದಿ ವಿರೋಧಿ ನೀತಿಗೆ ಪ್ರೋತ್ಸಾಹ ನೀಡುತ್ತಿವೆ ಎಂದು ಕಾರ್ಯಾದೇಶದಲ್ಲಿ ಹೇಳಲಾಗಿದೆ.

ಇದೀಗ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಭೇಟಿಯ ಸಂದರ್ಭದಲ್ಲೇ ಟ್ರಂಪ್‌ ಅವರು ಹೊಸ ಕಾರ್ಯಾದೇಶಕ್ಕೆ ಸಹಿಹಾಕಿದ್ದಾರೆ. ಇಸ್ರೇಲ್‌ ಹಿಂದಿನಿಂದಲೂ ಯುಎನ್‌ಆರ್‌ಡಬ್ಲ್ಯುಎ ಯು ಯೆಹೂದಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸುತ್ತಲೇ ಬಂದಿದ್ದರು.

ವಿಶ್ವಸಂಸ್ಥೆಯ ಬಜೆಟ್‌ನ ಶೇ.22ರಷ್ಟು ಹಣವನ್ನು ಅಮೆರಿಕವೇ ನೀಡುತ್ತಿದೆ. ಆ ಬಳಿಕ ಅತಿ ಹೆಚ್ಚು ಅನುದಾನವನ್ನು ಚೀನಾ ನೀಡುತ್ತಿದೆ. ವಿಶ್ವಸಂಸ್ಥೆಗೆ ಸಾಕಷ್ಟು ಸಾಮರ್ಥ್ಯವಿದೆ. ಆದರೆ ಅದು ಸದ್ಯ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ನಿಷ್ಪಕ್ಷಪಾತ ದೇಶಗಳ ಜತೆಗೆ ವಿಶ್ವಸಂಸ್ಥೆಯು ನ್ಯಾಯಯುತವಾಗಿರಬೇಕು. ಆದರೆ ವಿಶ್ವಸಂಸ್ಥೆಯಲ್ಲಿ ಹೊರಗಿನವರು ಮತ್ತು ಕೆಟ್ಟವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಅಮೆರಿಕ ಹೇಳಿದೆ.

ಕ್ರೀಡೆಗಳಲ್ಲಿ ತೃತೀಯ ಲಿಂಗಿಗಳ ಸ್ಪರ್ಧೆಗೂ ಟ್ರಂಪ್ ನಿಷೇಧ

ವಾಷಿಂಗ್ಟನ್‌: ಅಧ್ಯಕ್ಷರಾದ ಬಳಿಕ ಬದಲಾವಣೆ ಹೆಸರಲ್ಲಿ ನಾನಾ ಆದೇಶ ಹೊರಡಿಸುತ್ತಿರುವ ಡೊನಾಲ್ಡ್‌ ಟ್ರಂಪ್‌, ಇದೀಗ ತೃತೀಯ ಲಿಂಗಿಗಳು ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕೂ ನಿಷೇಧ ಹೇರಿದ್ದಾರೆ. ಸೇನೆಯಲ್ಲಿ ತೃತೀಯ ಲಿಂಗಿಗಳಿದ್ದ ಅವಕಾಶ ತೆಗೆದು ಹಾಕಿದ ಬೆನ್ನಲ್ಲೇ ಈ ಹೊಸ ಆದೇಶ ಹೊರಡಿಸಿದ್ದಾರೆ. ಡೊನಾಲ್ಡ್‌ ಟ್ರಂಪ್ ಸರ್ಕಾರ ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲು ಅಮೆರಿಕದಲ್ಲಿ ಪುರುಷ ಮತ್ತು ಮಹಿಳೆ ಎನ್ನುವ ಎರಡು ಲಿಂಗಗಳು ಮಾತ್ರವೇ ಇರುವುದು ಎಂದು ಪುನರುಚ್ಚರಿಸಿದ್ದರು.