ಹೊರ ಪ್ರಪಂಚದ ಸಂಪರ್ಕವನ್ನೇ ಕಸಿಯುತ್ತಿದೆ ಹದಗೆಟ್ಟ ರಸ್ತೆ

| Published : Aug 29 2025, 01:00 AM IST

ಸಾರಾಂಶ

ಇಬ್ಬಡಿ ಬೋರೆಗೆ ರಸ್ತೆ ಸಂಪರ್ಕ ಹಾಳಾದ ಕಾರಣ ಬೇರೆ ಊರುಗಳ ಗ್ರಾಮಸ್ಥರು ಸಹ ಗ್ರಾಮಕ್ಕೆ ಬರಲು ಹಿಂದೇಟು ಹಾಕುವಂತಾಗಿದೆ. ರಾತ್ರಿಯಾದರೆ ಹದಗೆಟ್ಟ ರಸ್ತೆ ಸಂಚಾರ ಯೋಗ್ಯವಲ್ಲದ ಕಾರಣ ಮನೆ ಬಿಟ್ಟು ಹೊರ ಹೋಗಲಾರದ ಪರಿಸ್ಥಿತಿ ಬಂದೊದಗಿದೆ. ಇನ್ನು ದುಮ್ಮಿ ಕಾವಲು, ಕೊರಟಿಕೆರೆ ಕಾವಲು ಮಾರ್ಗವಾಗಿ ಇಬ್ಬಡಿ ಗ್ರಾಮಕ್ಕೆ ಹಾದು ಹೋಗಿರುವ ಮುಖ್ಯ ರಸ್ತೆಯಂತೂ ಪೂರ್ತಿ ಹಾಳಾಗಿದೆ. ರಸ್ತೆಗೆ ಡಾಂಬರು ಹಾಕಿ ಯಾವುದೋ ಕಾಲವಾಗಿದೆ. ಮಳೆಗಾಲವಾದ ಕಾರಣ ಡಾಂಬರು ಕಿತ್ತು ಹದಗೆಟ್ಟು ಹೋಗಿರುವ ರಸ್ತೆಯಗಲಕ್ಕೂ ಗುಂಡಿ, ಹೊಂಡಗಳು ಬಾಯ್ತೆರೆದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ದುಮ್ಮಿ ಕಾವಲು ಮಾರ್ಗವಾಗಿ ಇಬ್ಬಡಿ ಬೋರೆ ಗ್ರಾಮಕ್ಕೆ ಸಂಪರ್ಕ ರಸ್ತೆ ಸರಿಯಿಲ್ಲದೆ ಗ್ರಾಮಸ್ಥರು ಹೊರಗಿನ ಪ್ರಪಂಚದಿಂದ ದೂರವೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಬ್ಬಡಿ ಬೋರೆಗೆ ರಸ್ತೆ ಸಂಪರ್ಕ ಹಾಳಾದ ಕಾರಣ ಬೇರೆ ಊರುಗಳ ಗ್ರಾಮಸ್ಥರು ಸಹ ಗ್ರಾಮಕ್ಕೆ ಬರಲು ಹಿಂದೇಟು ಹಾಕುವಂತಾಗಿದೆ. ರಾತ್ರಿಯಾದರೆ ಹದಗೆಟ್ಟ ರಸ್ತೆ ಸಂಚಾರ ಯೋಗ್ಯವಲ್ಲದ ಕಾರಣ ಮನೆ ಬಿಟ್ಟು ಹೊರ ಹೋಗಲಾರದ ಪರಿಸ್ಥಿತಿ ಬಂದೊದಗಿದೆ. ಇನ್ನು ದುಮ್ಮಿ ಕಾವಲು, ಕೊರಟಿಕೆರೆ ಕಾವಲು ಮಾರ್ಗವಾಗಿ ಇಬ್ಬಡಿ ಗ್ರಾಮಕ್ಕೆ ಹಾದು ಹೋಗಿರುವ ಮುಖ್ಯ ರಸ್ತೆಯಂತೂ ಪೂರ್ತಿ ಹಾಳಾಗಿದೆ. ರಸ್ತೆಗೆ ಡಾಂಬರು ಹಾಕಿ ಯಾವುದೋ ಕಾಲವಾಗಿದೆ. ಮಳೆಗಾಲವಾದ ಕಾರಣ ಡಾಂಬರು ಕಿತ್ತು ಹದಗೆಟ್ಟು ಹೋಗಿರುವ ರಸ್ತೆಯಗಲಕ್ಕೂ ಗುಂಡಿ, ಹೊಂಡಗಳು ಬಾಯ್ತೆರೆದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.ಗುಂಡಿಗಳಿಂದ ಅಧ್ವಾನವಾಗಿರುವ ರಸ್ತೆಯಲ್ಲಿ ತಾಲೂಕು ಕೇಂದ್ರ ಅರಕಲಗೂಡು ಮಾರ್ಗವಾಗಿ ಪ್ರತಿನಿತ್ಯ ನೂರಾರು ವಾಹನಗಳು, ಕಾರುಗಳು, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಶಾಲಾ- ಕಾಲೇಜುಗಳಿಗೆ ನಿತ್ಯ ಓಡಾಡುವ ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ. ದುಮ್ಮಿ ಕಾವಲು ಗ್ರಾಮದಿಂದ ಆರಂಭವಾಗುವ ಹೊಂಡಗಳು ರಸ್ತೆಯುದ್ದಕ್ಕೂ ಅಪಾಯಕಾರಿ ಸ್ಥಿತಿಯಲ್ಲಿವೆ. ಕೆಲವು ಕಡೆ ವಾಹನಗಳು ಹೊಂಡಕ್ಕಿಳಿಯಲಾಗದಷ್ಟು ಮಳೆ ಕೆಸರು ನೀರು ತುಂಬಿದೆ. ರಾತ್ರಿ ವೇಳೆ ಗುಂಡಿ, ಹೊಂಡಗಳ ಸಾಮ್ರಾಜ್ಯವಾಗಿರುವ ರಸ್ತೆಯಲ್ಲಿ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಭಯದಿಂದ ಓಡಾಡುವಂತಾಗಿದೆ. ರಸ್ತೆ ಕೂಡ ಕಿರಿದಾಗಿದೆ. ಹಾಳಾದ ಕಿಷ್ಕಿಂದೆ ರಸ್ತೆಯಲ್ಲಿ ಎರಡು ವಾಹನಗಳು ಎದುರು ಬದುರಾದರೆ ಅಪಘಾತ ಕಟ್ಟಿಟ್ಟಬುತ್ತಿ. ಹೊಂಡಗಳಿಗೆ ಇಳಿದರೆ ವಾಹನ ಸವಾರರು ಮುಂದೆ ಚಲಿಸಲು ಹರಸಾಹಸ ಪಡುವಂತಾಗಿದೆ.ರೈತಾಪಿ ವರ್ಗದ ಜನರೇ ಹೆಚ್ಚಾಗಿ ಸಂಚರಿಸುವ ಈ ಮಾರ್ಗದ ರಸ್ತೆ ಅಭಿವೃದ್ಧಿ ಪಡಿಸುವುದನ್ನೇ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಮರೆತಂತಿದೆ. ದೊಡ್ಡಮಗ್ಗೆ ಹೋಬಳಿ ವ್ಯಾಪ್ತಿಗೆ ಸೇರಿದ ಈ ಭಾಗದ ಅನೇಕ ಸಂಪರ್ಕ ರಸ್ತೆಗಳಲ್ಲಿ ಅಭಿವೃದ್ಧಿ ಕಾಣದಾಗಿವೆ. ಹೀಗಾಗಿ ತಾಲೂಕು ಕೇಂದ್ರ ಅರಕಲಗೂಡು ಪಟ್ಟಣಕ್ಕೆ ತೆರಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ನಾಡಕಚೇರಿ, ರೈತ ಸಂಪರ್ಕ ಕೇಂದ್ರ ಮತ್ತಿತರ ಸರ್ಕಾರಿ ಕೆಲಸಗಳಿಗೆ ತೆರಳಲು ಹೋಬಳಿ ಕೇಂದ್ರವಾದ ದೊಡ್ಡಮಗ್ಗೆಗೆ ಹೋಗಲು ರಸ್ತೆ ಸಂಪರ್ಕ ಸರಿಯಿಲ್ಲದಾಗಿದೆ. ಅನಿವಾರ್ಯವಾಗಿ ಗ್ರಾಮಸ್ಥರು ಗುಂಡಿ ಬಿದ್ದ ಹೊಂಡದ ರಸ್ತೆಯೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗೆ ಹಿಡಿಶಾಪ ಹಾಕಿಕೊಂಡು ಸಂಚರಿಸುತ್ತಿದ್ದಾರೆ. ಈ ಮಾರ್ಗದ ರಸ್ತೆ ಹದಗೆಟ್ಟ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡದಂತಾಗಿದೆ. ಇದರಿಂದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ನಮ್ಮೂರಿನ ಸಂಪರ್ಕ ರಸ್ತೆ ದುಸ್ಥಿತಿಯನ್ನು ಕೇಳುವವರೇ ಇಲ್ಲವಾಗಿದ್ದಾರೆ ಎನ್ನುವುದು ಜನರ ಕೊರಗು.ಮೂಲ ಸೌಕರ್ಯ ವಂಚಿತ ಇಬ್ಬಡಿ ಬೋರೆ:

ಒಂದೆಡೆ ಇಬ್ಬಡಿ ಮಾರ್ಗದ ರಸ್ತೆ ಹಾಳಾಗಿದ್ದರೆ ಮತ್ತೊಂದೆ ಇಬ್ಬಡಿ ಬೋರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದು ಮೂಲ ಸೌಕರ್ಯಗಳಲ್ಲಿ ಒಂದಾದ ಸಂಪರ್ಕ ರಸ್ತೆಯನ್ನೆ ಸರಿಪಡಿಸಿಲ್ಲ. ಇಬ್ಬಡಿ ಮುಖ್ಯ ರಸ್ತೆವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಇಬ್ಬಡಿ ಬೋರೆ ವಾಸದ ಮನೆಗಳ ಮುಂಭಾಗದ ಓಣಿ ಹಾದಿಯಲ್ಲಿ ಕಾಲಿಡಲಾಗದೆ ಕೆಸರಿನ ಹೂಳಿನಿಂದ ಕೂಡಿದೆ. ಗ್ರಾಮಸ್ಥರು ಕೆಸರು ತುಣಿದು ಮನೆಯೊಳಗೆ ಹೋಗಬೇಕಾದ ದುಸ್ಥಿತಿ ಎದುರಾಗಿದೆ.ಇಬ್ಬಡಿ ಬೋರೆಯಲ್ಲಿ ವಾಸವಾಗಿರುವ ಗ್ರಾಮಸ್ಥರು ತಾಲೂಕು ಕೇಂದ್ರ ಅರಕಲಗೂಡಿಗೆ ಬರಬೇಕಾದರೆ ಇಬ್ಬಡಿ ಮುಖ್ಯ ರಸ್ತೆ ಮೇಲೆ ಹಾದು ಹೋಗಬೇಕು. ಆದರೆ ಮುಖ್ಯ ರಸ್ತೆವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಲ್ಲುಮಣ್ಣಿನಿಂದ ಕೂಡಿದ್ದು ದುರಸ್ತಿಯಾಗಿಲ್ಲ. ಮಹಿಳೆಯರು, ವೃದ್ಧರು ಅರಕಲಗೂಡು ಆಸ್ಪತ್ರೆಗೆ ತೆರಳಬೇಕೆಂದರೆ ರಸ್ತೆ ದುಸ್ಥಿತಿ ನೆನೆದು ಕಣ್ಣೀರು ಹಾಕುವಂತಾಗಿದೆ. ಹಾಳಾದ ರಸ್ತೆಯಲ್ಲಿ ಎಲ್ಲಿಗೆ ಹೋಗಬೇಕು ಎಂಬುದೇ ದಿಕ್ಕು ತೋಚದಾಗಿದ್ದು ಕೇಳುವವರೇ ಇಲ್ಲವಾಗಿದ್ದಾರೆ ಎಂದು ಸ್ಥಳೀಯರು ಸಮಸ್ಯೆ ತೋಡಿಕೊಳ್ಳುತ್ತಾರೆ. ಊರಿನ ಪಕ್ಕದಲ್ಲೇ ಸುಮಾರು 50 ಅಡಿ ಆಳದಲ್ಲಿ ಹೇಮಾವತಿ ನಾಲೆ ಹಾದು ಹೋಗಿದ್ದು ರಸ್ತೆ ಸುರಕ್ಷತಾ ಮಾರ್ಗವಿಲ್ಲದಾಗಿದೆ. ಗ್ರಾಮದ ಶಾಲಾ ಮಕ್ಕಳು ದಿನನಿತ್ಯ ಇದೇ ಮಾರ್ಗದಲ್ಲಿ ಇಬ್ಬಡಿ ಗ್ರಾಮದ ಶಾಲೆಗೆ ನಡೆದುಕೊಂಡು ಹೋಗುತ್ತಾರೆ. ಮಳೆಗಾಲದಲ್ಲಿ ವಿದ್ಯಾರ್ಥಿಗಳು ಕೆಸರು ತುಳಿದುಕೊಂಡು ಎದ್ದೆನೋ ಬಿದ್ದೆನೋ ಎನ್ನುತ್ತಾ ಪಾದಚಾರಿ ಮಾರ್ಗ ಸವೆಸುವಂತಾಗಿದೆ. ಬೆಳವಾಡಿ ಭಾಗದ ಹಳ್ಳಿಗಳ ಜನರು ವಾಹನಗಳಲ್ಲಿ ಸಂತೆಮರೂರು ಮಾರ್ಗವಾಗಿ ತೆರಳಬೇಕೆಂದರೆ ಇದೇ ರಸ್ತೆಯನ್ನು ಅವಲಂಬಿಸುತ್ತಾರೆ. ಆದರೆ ರಸ್ತೆ ಹಾಳಾದ ಕಾರಣ ಬೇರೆ ಮಾರ್ಗ ಹುಡುಕಿಕೊಂಡು ಸುತ್ತಿಬಳಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಅಭಿವೃದ್ಧಿ ಪಡಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.