ರಾಜ್ಯದಲ್ಲಿ ಕನ್ನಡ ಭಾಷಾ ಸಂಪತ್ತನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸುವುದಕ್ಕಾಗಿ ಆಡಳಿತ ನಡೆಸಿದ ಸರ್ಕಾರಗಳು ಹೊರಡಿಸಿದ ಆದೇಶಗಳ ಅನುಷ್ಠಾನದಲ್ಲಿ ತೋರಿದ ಅಸಡ್ಡೆತನದಿಂದಾಗಿಯೇ ಇಂದು ಕರ್ನಾಟಕದಲ್ಲಿಯೇ ಕನ್ನಡ ಕಣ್ಮರೆಯಾಗುವ ದುಸ್ಥಿತಿಗೆ ತಲುಪಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯದಲ್ಲಿ ಕನ್ನಡ ಭಾಷಾ ಸಂಪತ್ತನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸುವುದಕ್ಕಾಗಿ ಆಡಳಿತ ನಡೆಸಿದ ಸರ್ಕಾರಗಳು ಹೊರಡಿಸಿದ ಆದೇಶಗಳ ಅನುಷ್ಠಾನದಲ್ಲಿ ತೋರಿದ ಅಸಡ್ಡೆತನದಿಂದಾಗಿಯೇ ಇಂದು ಕರ್ನಾಟಕದಲ್ಲಿಯೇ ಕನ್ನಡ ಕಣ್ಮರೆಯಾಗುವ ದುಸ್ಥಿತಿಗೆ ತಲುಪಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದ ಅವರು, 1956ರ ಕರ್ನಾಟಕ ಏಕೀಕರಣದ ನಂತರ ಆಡಳಿತ ನಡೆಸಿದ ಸರ್ಕಾರಗಳು ಕನ್ನಡ ಅಭಿವೃದ್ಧಿಗಾಗಿ 2,800 ಆದೇಶಗಳನ್ನು ಹೊರಡಿಸಿದ್ದು, ಅವುಗಳ ಅನುಷ್ಠಾನದಲ್ಲಿ ಅಧಿಕಾರಿಗಳು ತೋರಿದ ನಿರ್ಲಕ್ಷ್ಯತನದಿಂದಾಗಿ ಕೇವಲ ಶೇ.40ರಷ್ಟು ಮಾತ್ರ ಜಾರಿಗೊಂಡಿದ್ದು, ಶೋಚನೀಯ ಸಂಗತಿಯಾಗಿದೆ. ಪ್ರಾಧಿಕಾರದ ಅಧ್ಯಕ್ಷನಾದ ಬಳಿಕ ರಾಜ್ಯದ 24 ಜಿಲ್ಲೆಗಳನ್ನು ಸುತ್ತಿ 1,800ಕ್ಕೂ ಹೆಚ್ಚು ಅಧಿಕಾರಿಗಳನ್ನು ಭೇಟಿಯಾಗಿ ಸರ್ಕಾರದ ಆದೇಶಗಳ ಅನುಷ್ಠಾನದ ಪರಿಶೀಲನೆ ನಡೆಸಿದ್ದು, ಆಯಾ ಜಿಲ್ಲಾಡಳಿತಗಳು, ವಿಶ್ವವಿದ್ಯಾಲಯಗಳು ಇತರೆ ಕಡೆಗಳಲ್ಲಿ ಅನುಷ್ಠಾನದ ಉತ್ಸಾಹ ಕಂಡುಬಂದಿಲ್ಲ, ಸರ್ಕಾರದ ಮಟ್ಟದಲ್ಲಿ ರೂಪಿಸುವ ಆದೇಶಗಳನ್ನು ಜಾರಿಗೆ ತರುವ ವಿಚಾರದಲ್ಲಿ ಉತ್ಸಾಹ ಮಾಯವಾಗಿರುವುದು ತುಂಬಾ ಬೇಸರ ತಂದಿದೆ ಎಂದರು.

ರಾಜ್ಯ,ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಕಣ್ಮರೆ: ಕನ್ನಡ ನಾಡಿನಲ್ಲಿಯೇ ಕನ್ನಡ ಕಣ್ಮರೆಯಾಗುವುದರ ಜೊತೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕನ್ನಡದ ಘನತೆ-ಗೌರವ, ಸ್ಥಾನಮಾನ ಕ್ಷೀಣಿಸುತ್ತಾ ಸಾಗಿದೆ. ದೇಶದಲ್ಲಿ ಹಿಂದಿ ಭಾಷೆಯ ಬಳಕೆ ಪ್ರಮಾಣ ಶೇ.60ರಷ್ಟು ಹೆಚ್ಚಾಗಿದ್ದರೆ, ಕನ್ನಡ ಸೇರಿ ಇತರೆ ಸ್ಥಳೀಯ ಭಾಷೆಗಳ ಬಳಕೆ ಪ್ರಮಾಣವು 3 ರಿಂದ 7ರ ಆಸುಪಾಸಿನಲ್ಲಿದೆ.

ಕನ್ನಡವು ಪ್ರಮುಖವಾಗಿ ಸ್ಥಳೀಯ ಮತ್ತು ರಾಜ್ಯ ಮಟ್ಟದ ಸಮಸ್ಯೆಗಳನ್ನು ಎದುರಿಸುತ್ತಿದೆ. ರಾಜ್ಯ ಮಟ್ಟದಲ್ಲಿ ಅತ್ಯಂತ ದೊಡ್ಡ ಸಮಸ್ಯೆ ಎಂದರೆ ಕನ್ನಡ ಶಾಲೆಗಳು ಮುಚ್ಚುತ್ತಿರುವುದು. ಕರ್ನಾಟಕದ ಟಿಎಫ್‌ಆರ್ ಪ್ರಮಾಣವು 1.6ಕ್ಕೆ ಇಳಿದಿದ್ದು, ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹೋಟೆಲ್‌ ಸೇರಿ ಇತರೆ ಉದ್ಯಮ, ವ್ಯಾಪಾರ-ವಹಿವಾಟಿನಲ್ಲಿ ಅನ್ಯ ಭಾಷಿಗರ ಸಂಖ್ಯೆ ಹೆಚ್ಚುತ್ತಿದ್ದು, ಸರೋಜಿನಿ ಮಹಿಷಿ ಅವರು 1984ರಲ್ಲಿ ನೀಡಿದ 55 ಶಿಫಾರಸುಗಳನ್ನು ಅಂದೇ ಸರಿಯಾಗಿ ಸರ್ಕಾರ ಅನುಷ್ಠಾನಕ್ಕೆ ತಂದಿದ್ದರೆ, ಈಗ ಕನ್ನಡ ಸಮಸ್ಯೆಗಳನ್ನು ಎದುರಿಸಬೇಕಾಗಿರುತ್ತಿರಲಿಲ್ಲ. ಈಗಿನ ಕಾಲಕ್ಕೆ ತಕ್ಕಂತೆ ಅನ್ವಯವಾಗುವ 18 ಹೊಸ ಶಿಫಾರಸುಗಳನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗಿದ್ದು, 290ಕ್ಕೂ ಹೆಚ್ಚು ಭಾಷಾ ವೈಶಿಷ್ಟ್ಯತೆಯನ್ನು ಹೊಂದಿರುವ ಕನ್ನಡವನ್ನು ಸಂರಕ್ಷಿಸಲು ಇಂತಹ ಸಮ್ಮೇಳನಗಳು ವೇದಿಕೆಯಾಗಬೇಕು ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್‌ ಧರ್ಮಸಿಂಗ್‌, ಮಾಜಿ ಸಚಿವ ಎಂಎಲ್ಸಿ ಎನ್‌.ಎಸ್‌.ಬೋಸರಾಜು, ಶಾಸಕ ಡಾ.ಎಸ್‌.ಶಿವರಾಜ ಪಾಟೀಲ್, ಸಂಸದ ಜಿ.ಕುಮಾರ ನಾಯಕ ಮಾತನಾಡಿದರು.

ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿವಿಯ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಸಮ್ಮೇಳನಾಧ್ಯಕ್ಷ ರಾಮಣ್ಣ ಹವಳೆ ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿದರು. ಹಿಂದಿನ ಸಮ್ಮೇಳನಾಧ್ಯಕ್ಷ ವೀರ ಹನುಮಾನ ಧ್ವಜ ಹಸ್ತಾಂತರಿಸಿದರು, ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್‌ ಅಳ್ಳುಂಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್‌ ಮಹಾಪಾತ್ರ, ಕಲಬುರಗಿಯ ಮಾಹಿತಿ ಆಯೋಗದ ಆಯುಕ್ತ ಬಿ.ವೆಂಕಟಸಿಂಗ್‌, ಹಿರಿಯ ಪತ್ರಕರ್ತರಾದ ಬಸವರಾಜ ಸ್ವಾಮಿ, ಅರವಿಂದ ಕುಲಕರ್ಣಿ, ಆರ್‌.ಗುರುನಾಥ, ಮುಖಂಡರಾದ ಜಯಣ್ಣ, ಕೆ.ಶಾಂತಪ್ಪ, ನೌಕರರ ಸಂಘದ ಅಧ್ಯಕ್ಷ ಕೃಷ್ಣ ಶಾಂವಂತಗೇರ ಸೇರಿ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಸಾಹಿತ್ಯಿಗಳು, ಕಸಾಪ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಜನಸಾಮಾನ್ಯರು ಇದ್ದರು.