ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಕನ್ನಡ ಸಾಹಿತ್ಯ ಪರಿಷತ್ತಿನ ಸತತ ಶ್ರಮ ಹಾಗೂ ಕಾಳಜಿಯಿಂದ ನಿರ್ಮಿತವಾಗಿರುವ ಕನ್ನಡ ಭವನವನ್ನು ಅನುದಾನ ನೀಡಿರುವ ನೆಪ ಮುಂದಿಟ್ಟು ಪರಿಷತ್ತಿನಿಂದ ಕನ್ನಡ ಭವನವನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಕರಾರು ಹಾಸ್ಯಾಸ್ಪದ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸುರೇಶ ಚೆನಶೆಟ್ಟಿ ತಿಳಿಸಿದ್ದಾರೆ.ಅವರು ಕನ್ನಡ ಭವನದಿಂದ ಪರಿಷತ್ ಬೋರ್ಡ್‌ಗೆ ಕೋಕ್? ಎಂಬ ವಿಶೇಷ ವರದಿ ಪ್ರಕಟಿಸಿದ್ದ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದಿದ್ದು, ದಶಕಗಳ ಹೋರಾಟದ ಪ್ರಯತ್ನದಿಂದ ನಗರದ ಚಿಕಪೇಟ್ ಪ್ರದೇಶದಲ್ಲಿ ಸರ್ಕಾರದ 2ಕೋಟಿ ರು.ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ 25ಲಕ್ಷ ರು.ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ದಾನಿಗಳಿಂದ ಸಂಗ್ರಹಿಸಲಾದ ಅನುದಾನದಿಂದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭವನ ನಿರ್ಮಿಸುವದಕ್ಕೆ ಸಾಕಷ್ಟು ಶ್ರಮ ಹಾಕಿದ್ದನ್ನು ಮರೆಯದಿರಲಿ ಎಂದಿದ್ದಾರೆ.
ಕನ್ನಡ ಭವನ ಅನುದಾನದ ಬಹುಪಾಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದೆ ಎನ್ನುವ ಕಾರಣಕ್ಕೆ ಕನ್ನಡ ಭವನವನ್ನು ತನಗೆ ನೀಡಬೇಕೆಂಬ ಬೇಡಿಕೆ ಇಡುತ್ತಿರುವುದು ಇಲಾಖೆಯ ಅಧಿಕಾರಿಗಳ ಬಾಲೀಶ ನಡವಳಿಕೆಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಿಸುವ ಅಗತ್ಯತೆಯನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಟ್ಟ ಪರಿಣಾಮ ಜಿಲ್ಲಾಡಳಿತವು ನಿವೇಶನ ನೀಡಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಹಾಗೂ ವಿವಿಧ ಸಂಪನ್ಮೂಲಗಳಿಂದ ಭವನ ನಿರ್ಮಿಸಲಾಗಿದೆ. ತದನಂತರ ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಪರಿಷತ್ತಿಗೆ ಭವನದ ಹಸ್ತಾಂತರ ಪ್ರಕ್ರಿಯೆ ಮಾಡಿದೆ. ನಂತರ ಕನ್ನಡ ಭವನದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಯವರು ನೆರವೇರಿಸಿ ಇದು ಪರಿಷತ್ತಿನ ಕನ್ನಡ ಭವನ ಎಂದು ಹೇಳಿ ಅಧಿಕೃತಗೊಳಿಸಿದ್ದೂ ಇದೆ ಎಂದಿದ್ದಾರೆ.
ಕಸಾಪದಿಂದ ಕನ್ನಡ ಭವನ ಕಿತ್ತುಕೊಳ್ಳಲು ಪ್ರಯತ್ನಿಸಿದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಇಲಾಖೆಯ ಅಧಿಕಾರಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಕನ್ನಡಿಗರ ಬಹು ದಶಕಗಳ ಭಾವನೆಗೆ ಧಕ್ಕೆ ತರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಶೋಭೆ ತರುವಂತಹ ಕೆಲಸವಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.ವಾಸ್ತವ ಅರಿತುಕೊಳ್ಳುವಲ್ಲಿ ಮೇಲಾಧಿಕಾರಿಗಳು ವಿಫಲ: ರಾಜ್ಯದ ಗಡಿ ಜಿಲ್ಲೆಯಾದ ಬೀದರ್‌ನಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ಮಾಡುವದನ್ನು ಬಿಟ್ಟು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಬೀದರ್‌ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಆರಂಭದಿಂದಲೂ ಕನ್ನಡ ಭವನಕ್ಕೆ ತೊಂದರೆ ಕೊಡುತ್ತಲೇ ಇದ್ದಾರೆ, ಜೊತೆಗೆ ಮೇಲಾಧಿಕಾರಿಗಳಿಗೆ ವಾಸ್ತವವನ್ನು ಅರ್ಥ ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಳವಳ ರೇಶ ಚೆನಶೆಟ್ಟಿ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಗಡಿ ಜಿಲ್ಲೆಯಾದ ಬೀದರ್‌ನಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ಮಾಡುವದನ್ನು ಬಿಟ್ಟು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಬೀದರ್‌ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಆರಂಭದಿಂದಲೂ ಕನ್ನಡ ಭವನಕ್ಕೆ ತೊಂದರೆ ಕೊಡುತ್ತಲೇ ಇದ್ದಾರೆ, ಜೊತೆಗೆ ಮೇಲಾಧಿಕಾರಿಗಳಿಗೆ ವಾಸ್ತವವನ್ನು ಅರ್ಥ ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಳವಳ ರೇಶ ಚೆನಶೆಟ್ಟಿ ವ್ಯಕ್ತಪಡಿಸಿದ್ದಾರೆ.