ಮೀಟರ್‌ ಬಡ್ಡಿ ತಡೆಗೆ ಟಾಸ್ಕ್‌ಪೋರ್ಸ್‌ ರಚನೆಗೆ ಜಿಲ್ಲಾಡಳಿತ ಚಿಂತನೆ

| Published : Aug 28 2024, 12:46 AM IST

ಮೀಟರ್‌ ಬಡ್ಡಿ ತಡೆಗೆ ಟಾಸ್ಕ್‌ಪೋರ್ಸ್‌ ರಚನೆಗೆ ಜಿಲ್ಲಾಡಳಿತ ಚಿಂತನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಡ್ಡಿ ವ್ಯವಹಾರದಲ್ಲಿ ಬಹುತೇಕ ಸಾಲ ಪಡೆದವರು ದೂರು ಕೊಡುವುದಿಲ್ಲ. ಸಹಕಾರ ಇಲಾಖೆಯಲ್ಲಿ ಯಾರ್‍ಯಾರು ಫೈನಾನ್ಸ್‌ ಮಾಡುವುದಾಗಿ ಹೇಳಿ ಲೈಸನ್ಸ್‌ ಪಡೆದಿದ್ದಾರೋ? ಯಾವ್ಯಾವ ಊರಿನವರು ಎಂಬುದನ್ನು ಪತ್ತೆ ಹಚ್ಚಿ ಅವರೆಲ್ಲ ಎಷ್ಟೆಷ್ಟು ಬಡ್ಡಿ ಆಕರಿಸುತ್ತಾರೆ ಎಂಬುದನ್ನು ಟಾಸ್ಕ್‌ಫೋರ್ಸ್ ಪರಿಶೀಲನೆ ನಡೆಸಲಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಮೀಟರ್‌ ಬಡ್ಡಿ ಮಾಫಿಯಾಕ್ಕೆ ಕಡಿವಾಣ ಹಾಕಲು ಸ್ಪೇಷಲ್‌ ಟಾಸ್ಕ್‌ಫೋರ್ಸ್ ರಚಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಸಭೆ ನಡೆಸಲಿದೆ.

ಬಡ್ಡಿ ಮಾಫಿಯಾ ತಮ್ಮ ದಂಧೆಗೆ ಮಕ್ಕಳ ಬಳಕೆ, ಅನಧಿಕೃತವಾಗಿ ಒಪ್ಪಂದ ಪತ್ರ ಮಾಡಿಕೊಳ್ಳುವುದು, ಆಸ್ತಿ ಅಡವಿಟ್ಟುಕೊಳ್ಳುವುದು, ಕಿರುಕುಳ ನೀಡುವುದು ಸೇರಿದಂತೆ ಮತ್ತಿತರರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಕ್ರಮಕೈಗೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.

ಟಾಸ್ಕ್‌ಫೋರ್ಸ್:

ಪೊಲೀಸ್‌, ಕಂದಾಯ, ಸಹಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಟಾಸ್ಕ್‌ಫೋರ್ಸ್ ರಚಿಸಲು ನಿರ್ಧರಿಸಿದೆ. ಈ ಟಾಸ್ಕ್‌ಪೋರ್ಸ್‌ನಿಂದ ಹಳ್ಳಿ, ನಗರಗಳಲ್ಲಿ ಜಾಗೃತಿ ಮೂಡಿಸುವುದು. ಫೈನಾನ್ಸ್‌ನವರು ಏನೇನು ಗೋಲ್‌ಮಾಲ್‌ ಮಾಡುತ್ತಾರೆ. ಯಾವ ರೀತಿ ಹೆದರಿಸ್ತಾರೆ ಎಂಬುದನ್ನು ತಿಳಿದುಕೊಂಡು ಜಾಗೃತಿ ಮೂಡಿಸುವುದು. ಜತೆಗೆ ಅನಧಿಕೃತವಾಗಿ ಹೆಚ್ಚಿನ ಬಡ್ಡಿಗೆ ಸಾಲ ನೀಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸ ಈ ಟಾಸ್ಕ್‌ಫೋರ್ಸ್ ಮಾಡಲಿದೆ.

ಬಡ್ಡಿ ವ್ಯವಹಾರದಲ್ಲಿ ಬಹುತೇಕ ಸಾಲ ಪಡೆದವರು ದೂರು ಕೊಡುವುದಿಲ್ಲ. ಸಹಕಾರ ಇಲಾಖೆಯಲ್ಲಿ ಯಾರ್‍ಯಾರು ಫೈನಾನ್ಸ್‌ ಮಾಡುವುದಾಗಿ ಹೇಳಿ ಲೈಸನ್ಸ್‌ ಪಡೆದಿದ್ದಾರೋ? ಯಾವ್ಯಾವ ಊರಿನವರು ಎಂಬುದನ್ನು ಪತ್ತೆ ಹಚ್ಚಿ ಅವರೆಲ್ಲ ಎಷ್ಟೆಷ್ಟು ಬಡ್ಡಿ ಆಕರಿಸುತ್ತಾರೆ ಎಂಬುದನ್ನು ಪರಿಶೀಲನೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಶೀಘ್ರದಲ್ಲೇ ಮೀಟಿಂಗ್‌:

ಈ ಸಂಬಂಧ ಶೀಘ್ರದಲ್ಲೇ ಜಿಲ್ಲಾಡಳಿತ ಸಭೆ ನಡೆಸಲಿದ್ದು, ಪೊಲೀಸ್‌, ಕಂದಾಯ, ಸಹಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಟಾಸ್ಕ್‌ಫೋರ್ಸ್ ಯಾವ ರೀತಿ ಇರಬೇಕು. ಏನೇನು ಕೆಲಸ ಮಾಡಬೇಕು. ಬೇರೆ ಬೇರೆ ಯಾವ ಇಲಾಖೆಗಳನ್ನು ಇದರೊಳಗೆ ಸೇರಿಸಿಕೊಳ್ಳಬೇಕು ಎಂಬುದರ ಕುರಿತು ಚರ್ಚೆ ನಡೆಸಿ ಅಂತಿಮ ರೂಪರೇಷೆ ನೀಡಲು ಜಿಲ್ಲಾಡಳಿತ ಯೋಚಿಸಿದೆ.

ಒಟ್ಟಿನಲ್ಲಿ ಮೀಟರ್‌ ಬಡ್ಡಿ ದಂಧೆ ಜಿಲ್ಲೆಯಲ್ಲಿ ಕಡಿವಾಣವಾದರೆ ಸಾಕು ಎಂಬುದು ನಾಗರಿಕರ ಒಕ್ಕರೊಲಿನ ಆಗ್ರಹ.ಶೀಘ್ರದಲ್ಲೇ ಪೊಲೀಸ್‌ ಕಮಿಷನರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಸಹಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅನಧಿಕೃತ ಬಡ್ಡಿ ವ್ಯವಹಾರ ತಡೆಯಲು ಟಾಸ್ಕ್‌ಫೋರ್ಸ್ ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.