ನಮಗೆ ಕೆ.ಸಿ.ವ್ಯಾಲಿ ನೀರು ಬೇಕಾಗಿಲ್ಲ ಜಾತಿ, ಧರ್ಮ, ಪಕ್ಷ ಬೇಧವಿಲ್ಲದೆ ಜಿಲ್ಲೆಗೆ ಕೃಷ್ಣಾನದಿ ಯೋಜನೆಯ ನೀರನ್ನು ಹರಿಸಲು ಜಿಲ್ಲೆಯ ಸಂಸದರು ಮತ್ತು ಶಾಸಕರು ಸರ್ಕಾರಗಳ ಮೇಲೆ ಪ್ರಭಾವ ಬೀರಿ ನೀರನ್ನು ಕೊಡಿಸಬೇಕು.

ಕನ್ನಡಪ್ರಭ ವಾರ್ತೆ ಮುಳಬಾಗಲುನೆರೆಯ ಆಂಧ್ರ ಪ್ರದೇಶದ ಕೃಷ್ಣಾನದಿ ನೀರಾವರಿ ಯೊಜನೆಯ ನೀರನ್ನು ಕೋಲಾರ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಹರಿಯುವಂತೆ ರಾಜ್ಯ-ಕೇಂದ್ರ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಜಲಾಗ್ರಹ ಹೋರಾಟ ಸಮಿತಿ ಅಧ್ಯಕ್ಷ ಆಲಂಗೂರು ಶಿವಣ್ಣ ಒತ್ತಾಯಿಸಿದರು.ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಮತ್ತು ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ನಮಗೆ ಕೆ.ಸಿ.ವ್ಯಾಲಿ ನೀರು ಬೇಕಾಗಿಲ್ಲ ಜಾತಿ, ಧರ್ಮ, ಪಕ್ಷ ಬೇಧವಿಲ್ಲದೆ ಜಿಲ್ಲೆಗೆ ಕೃಷ್ಣಾನದಿ ಯೋಜನೆಯ ನೀರನ್ನು ಹರಿಸಲು ಜಿಲ್ಲೆಯ ಸಂಸದರು ಮತ್ತು ಶಾಸಕರು ಸರ್ಕಾರಗಳ ಮೇಲೆ ಪ್ರಭಾವ ಬೀರಿ ನೀರನ್ನು ಕೊಡಿಸಬೇಕೆಂದು ಮನವಿ ಮಾಡಿದರು.ಜನತೆಗೆ ಶುದ್ಧ ಕುಡಿಯುವ ನೀರು ಬೇಕು, ರೈತರು ಬೆಳೆಯುವ ಭೂಮಿಗೆ ಶುದ್ಧ ನೀರು ಬೇಕಾಗಿದೆ, ಅದೇ ರೀತಿ ನಾವು ಶುದ್ಧಗಾಳಿ ಉಸಿರಾಡುವ ಅವಶ್ಯಕತೆ ಇದೆ, ಪರಿಸರ ಮಾಲಿನ್ಯ ತಡೆಗಟ್ಟಲು ಪ್ರತಿಯೊಬ್ಬರು ಮುಂದಾಗಬೇಕೆಂದು ಕರೆ ನೀಡಿದರು. ಜ. 10ರಂದು ನಗರದ ಜಯಮ್ಮ ಕೃಷ್ಣಪ್ಪ ಕಲ್ಯಾಣ ಮಂಟಪದಲ್ಲಿ ನೀರಾವರಿ ಹೋರಾಟದ ಕುರಿತು ಸಮಾವೇಶ ಹಮ್ಮಿಕೊಂಡಿದ್ದು, ಜಿಲ್ಲೆಯ ನೀರಾವರಿ ಹೋರಾಟಗಾರರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸರ್ವ ಪಕ್ಷಗಳ ನಾಯಕರು ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಮುಖಂಡರಾದ ಎಂ.ಗೋಪಾಲ್, ಸಿ.ವಿ.ಗೋಪಾಲ್, ಗೊಲ್ಲಹಳ್ಳಿ ಎ.ವೆಂಕಟರವಣಪ್ಪ, ನಾಗಮಂಗಲ ಶಂಕರಪ್ಪ, ತಾವರೆಕೆರೆ ನಾರಾಯಣರೆಡ್ಡಿ, ಶಂಕರ್ ಕೇಸರಿ, ಬಲ್ಲ ಶ್ರೀನಿವಾಸ್, ಹರೀಶ್, ಆವಣಿ ಸುಬ್ರಮಣಿ, ಕವಿತ ನಾರಾಯಣಸ್ವಾಮಿ ಶಶಿಕಳ, ಸಂಗಸಂದ್ರ ವಿಜಯ್ ಕುಮಾರ್ ಈಶ್ವರಮ್ಮ, ಮೆಕ್ಯಾನಿಕ್ ಶ್ರೀನಿವಾಸ್ ಇದ್ದರು.