ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮಂಗಳೂರುಇದು ನಗರ ಮಧ್ಯದಲ್ಲೇ ಇರುವ ಹಸಿರು ಮನೆ. ಮನೆಯ ಸುತ್ತಮುತ್ತಲೂ ವೀಳ್ಯದೆಲೆ, ತೊಂಡೆಬಳ್ಳಿ ಹಾಗೂ ವಿಧ ವಿಧ ಗಡ್ಡೆ ಗೆಣಸಿನ ಬಳ್ಳಿಗಳೇ ತುಂಬಿದ್ದು ಹಸಿರಿನಿಂದ ಕಂಗೊಳಿಸುತ್ತಿವೆ.
ಹೌದು, ಇದು ನಗರದ ಪಂಪವೆಲ್ ಸಮೀಪದ ನಿವೃತ್ತ ಡಾಕ್ಟರ್ ಸುಂದರ್ ಭಟ್ ಅವರ ಮನೆ. ಕಳೆದ 15 ವರ್ಷಗಳ ಹಿಂದೆ ಇವರಿಗೆ ಹಸಿರಿನೊಂದಿಗೆ ನಂಟು ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ. ಈಗ ಇವರಿಗೆ 71 ವರ್ಷ, ಆದರೂ ಇವರಿಗೆ ಉತ್ಸಾಹ ಬತ್ತಿಲ್ಲ. ಸುಮಾರು ಹತ್ತು ಬಗೆಯ ಗಡ್ಡೆ ಗೆಣಸು ಹಾಗೂ ಹತ್ತಕ್ಕೂ ಅಧಿಕ ಕೆಸುವಿನ ವೈವಿಧ್ಯವೂ ಇವರಲ್ಲಿದೆ.ಮನೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಇವರೇ ಬೆಳೆದ ತರಕಾರಿ ಹಾಗೂ ಗಡ್ಡೆ ಗೆಣಸುಗಳನ್ನು ಬಳಸುತ್ತಿದ್ದಾರೆ. ಇಷ್ಟೊಂದು ಬಗೆಯ ಗಡ್ಡೆ ಗೆಣಸು ಬೆಳೆದಿದ್ದರೂ ಇವರು ಜನವರಿಯಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಗಡ್ಡೆ ಗೆಣಸು ಮೇಳಕ್ಕೆ ಕಾತರದಿಂದ ಕಾದಿದ್ದಾರೆ. ಏಕೆಂದರೆ ಮೇಳದಲ್ಲಿ ಬರುವ ತಮ್ಮಲ್ಲಿಲ್ಲದ ಇನ್ನಷ್ಟು ಹೊಸ ಬಗೆಯ ಗಡ್ಡೆಗಳನ್ನು ಖರೀದಿಸಿ ತಮ್ಮ ಕೈತೋಟದಲ್ಲಿ ಬೆಳೆಯಲು ತುದಿಗಾಲಲ್ಲಿದ್ದಾರೆ.
ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಸುಂದರ್ ಅವರು ಈಗ ನಿವೃತ್ತರಾಗಿದ್ದಾರೆ. ವೃತ್ತಿಯಲ್ಲಿದ್ದಾಗ ಬಿಡುವಿನ ಸಮಯವನ್ನು ತಾರಸಿ ಕೃಷಿಗೆ ನೀಡುತ್ತಿದ್ದರೆ, ನಿವೃತ್ತರಾದ ಬಳಿಕ ಸಂಪೂರ್ಣ ಸಮಯವನ್ನು ತಾರಸಿ ಕೃಷಿಗೇ ಮೀಸಲಿರಿಸಿದ್ದಾರೆ.ಏನೆಲ್ಲ ಬೆಳೆದಿದ್ದಾರೆ?
ಹರಿವೆ, ಪಾಲಕ್, ತೊಂಡೆ, ಬೆಂಡೆ, ಕುಂಬಳ-ಬೂದುಗುಂಬಳ, ಸೌತೆ- ಮುಳ್ಳುಸೌತೆ, ಬದನೆ- ಗುಳ್ಳಬದನೆ, ಅವರೆ, ನುಗ್ಗೆ, ಮಡಹಾಗಲ, ಕಾನಕಲ್ಲಟೆ, ಕರ್ಚಿಕಾಯಿ, ಬಸಳೆ- ನೆಲ ಬಸಳೆ ಹೀಗೆ ತರಕಾರಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಕ್ಯಾರೇಟ್, ಬೀನ್ಸ್‌ನಂತಹ ಕರಾವಳಿಯ ಪ್ರದೇಶದಲ್ಲಿ ಬೆಳೆಯದ ತರಕಾರಿ ಬಿಟ್ಟು ಉಳಿದ ಎಲ್ಲ ತರಕಾರಿಗಳನ್ನು ತಾರಸಿಯಲ್ಲಿ ಹಾಗೂ ನೆಲದಲ್ಲಿ ಹಾಳಾದ ಫ್ರಿಡ್ಜ್‌ನ್ನು ಗುಜರಿಯವರಲ್ಲಿ ಖರೀದಿಸಿ ಬೆಳೆಯುತ್ತಿದ್ದಾರೆ. ತಾವು ಬೆಳೆದ ತರಕಾರಿಯನ್ನು ಸ್ವಂತ ಬಳಕೆ ಮಾಡಿ ಉಳಿದದ್ದನ್ನು ತಮ್ಮ ಕುಟುಂಬದವರಿಗೆ, ಬಳಗದವರಿಗೆ ನೀಡುತ್ತಾರೆ.ಗಡ್ಡೆ ಗೆಣಸಿನಲ್ಲಿ ಸ್ವಾವಲಂಬನೆ:ನಗರ ವಾಸಿಗಳಲ್ಲಿ ಗಡ್ಡೆ ಗೆಣಸುಗಳೆಂದರೆ ಕೀಳರಿಮೆ. ಆದರೆ ಡಾ. ಸುಂದರ್ ಅವರು ಗಡ್ಡೆಗೆಣಸುಗಳನ್ನು ಆಹಾರದಲ್ಲಿ ಬಳಸುವುದಷ್ಟೇ ಅಲ್ಲ, ಸ್ವತಃ ತಾವೇ ಬೆಳೆದು ಮಾದರಿಯಾಗಿದ್ದಾರೆ. ಹತ್ತಿಪ್ಪತ್ತು ಬಗೆಯ ಗಡ್ಡೆ ಗೆಣಸುಗಳ ಸಂಗ್ರಹ ಇವರಲ್ಲಿದೆ. ಪ್ರಮುಖವಾಗಿ ತುರಿಕೆ ರಹಿತ ಕೆಸವು (ಸಲಾಡ್ ಕೆಸವು), ಎರಡು ವೆರೈಟಿಯ ಕಪ್ಪು ಕೆಸವು, ಹೆಗ್ಗೆಸವು, ಬೀಣೆ ಕೆಸವು, ಕೆಸವು -ಉರುಟು ಗಡ್ಡೆ, ಕೆಸವು ಗಡ್ಡೆ ಆಗುವ ತಳಿ, ಊರಿನ ನಾಟಿ ಕೆಸವು, ಅಲಂಕಾರಿಕ ಕಪ್ಪು ಕೆಸವು ಹಾಗೂ ಮರಕೆಸವು ಹಾಗೂ ಮುಂಡಿ ಇವರಲ್ಲಿದೆ.ಗಡ್ಡೆಗಳಲ್ಲಿ ಸುವರ್ಣ ಗಡ್ಡೆ (ಕೇನೆ), ಎರಡು ವಿಧದ ಬಳ್ಳಿ ಬಟಾಟೆ, ಮುಳ್ಳು ಗೆಣಸು/ಹಂದಿ ಗೆಣಸು, ನಾಲ್ಕು ತರದ ತುಪ್ಪ ಗೆಣಸು/ ತೂಣ ಗೆಣಸು/ ಅಡ್ಡ ತಾಳಿ, ಕೂವೆಗಡ್ಡೆ, ಅರಿಶಿಣ, ಮಾವಿನಶುಂಠಿ, ಥಾಯ್ ಜಿಂಜಿರ್ ಹೀಗೆ ಹಲವು ಪ್ರಕಾರದ ಗಡ್ಡೆಗಳನ್ನು ಬೆಳೆದಿದ್ದಾರೆ.
ನಮ್ಮ ಕರಾವಳಿಯಲ್ಲಿ ಬೆಳೆಯುವ ಎಲ್ಲಾ ತರಕಾರಿ, ಗಡ್ಡೆ, ಸೊಪ್ಪಿನ ಗಿಡಗಳನ್ನು ಬೆಳೆಸುತ್ತಿದ್ದೇನೆ. ನಮ್ಮಲ್ಲಿ ಸಾಮಾನ್ಯವಾಗಿ ಇಲ್ಲದ ಕೆಲವು ತರಕಾರಿಗಳನ್ನೂ ಬೆಳೆದಿದ್ದೇನೆ. ಮುಖ್ಯವಾಗಿ ಹೇಳಬೇಕೆಂದರೆ ಕೈತೋಟ ಹಾಗೂ ತಾರಸಿ ತೋಟ ಮನಸ್ಸಿಗೆ ಮುದ ನೀಡುತ್ತದೆ. ಪ್ರತಿಯೊಂದು ಮನೆಯಲ್ಲೂ ಕೈತೋಟ ಹಾಗೂ ತಾರಸಿ ತೋಟ ಬರಬೇಕು ಎಂಬುದು ನನ್ನ ಭಾವನೆ.ಡಾ. ಸುಂದರ ಭಟ್, ನಿವೃತ್ತ ವೈದ್ಯರು, ತಾರಸಿಕೃಷಿ ತಜ್ಞರು.