ದೇಶೀಯ ಆಯುರ್ವೇದ ಪದ್ಧತಿ ಅತ್ಯಂತ ಶ್ರೇಷ್ಠ

| Published : Oct 30 2024, 12:36 AM IST / Updated: Oct 30 2024, 12:37 AM IST

ಸಾರಾಂಶ

ಪ್ರಸ್ತುತ ದಿನಮಾನದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾದ ರೋಗಿಗಳು ಆಯುರ್ವೇದ ಚಿಕಿತ್ಸೆ ಕಡೆ ಹೋಗುತ್ತಿದ್ದಾರೆ

ಗದಗ: ದೇಶೀಯ ಆಯುರ್ವೇದ ಪದ್ಧತಿ ಅತ್ಯಂತ ಶ್ರೇಷ್ಠವಾಗಿದೆ. ಆದ್ದರಿಂದಲೇ ಪ್ರಪಂಚದ ವಿವಿಧ ವಿದೇಶಿಯರು ಭಾರತಕ್ಕೆ ಆಯುಷ ಚಿಕಿತ್ಸೆ ಪಡೆಯಲು ಅರಸಿ ಬರುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಆಯುಷ ಇಲಾಖೆ ಸಹಯೋಗದಲ್ಲಿ ಜರುಗಿದ ಶ್ರೀಧನ್ವಂತರಿ ಜಯಂತಿ ಹಾಗೂ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಆಯುಷ ಇಲಾಖೆಯಲ್ಲಿ ಉತ್ತಮವಾದ ಯೋಗ ಹಾಲ್, ಪಂಚಕರ್ಮ ಚಿಕಿತ್ಸಾ ವ್ಯವಸ್ಥೆ ಲಭ್ಯವಿದ್ದು, ಇದರ ಸೌಲಭ್ಯ ಪಡೆಯಲು ವಿವಿಧ ಜಿಲ್ಲೆಯಿಂದ ಸಾರ್ವಜನಿಕರು ಆಗಮಿಸುವುದು ಒಳ್ಳೆಯ ಸಂಗತಿ, ಪ್ರಸ್ತುತ ದಿನಮಾನದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾದ ರೋಗಿಗಳು ಆಯುರ್ವೇದ ಚಿಕಿತ್ಸೆ ಕಡೆ ಹೋಗುತ್ತಿದ್ದಾರೆ ಎಂದರು.

ಜಿಲ್ಲಾ ಆಯುಷ ಅಧಿಕಾರಿ ಮಲ್ಲಿಕಾರ್ಜುನ ಉಪ್ಪಿನ ಮಾತನಾಡಿ, ಶ್ರೀಧನ್ವಂತರಿ ಜಯಂತಿ ಹಬ್ಬದ ರೀತಿ ಎಲ್ಲರೂ ಸಂಭ್ರಮದಿಂದ ಆಚರಿಸಿದ್ದು ಖುಷಿ ವಿಚಾರ, ಈ ವರ್ಷ ಜಿಲ್ಲೆಯಾದ್ಯಂತ ಆಯುರ್ವೇದ ಸಪ್ತಾಹ ಆಚರಿಸಿ ಜನರಿಗೆ ಆಯುರ್ವೇದ ಬಗ್ಗೆ ತಿಳಿ ಮೂಡಿಸಿದ್ದು ವಿಶೇಷ, ಜಿಲ್ಲೆಯ ನರ್ಸಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಆಯುರ್ವೇದ ಕುರಿತು ಮಾಹಿತಿ ತಿಳಿದುಕೊಳ್ಳಬೇಕು ಎಂದರು.

ಜಿಲ್ಲೆಯ ಆಯುಷ ಇಲಾಖೆಯ ಅಧಿಕಾರಿಗಳು ಆಯುರ್ವೇದ ರಂಗದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ತೆಗೆದುಕೊಂಡಿದ್ದು ಹೆಮ್ಮೆಯ ಸಂಗತಿ, ಆಯುರ್ವೇದವು ಜಗತ್ತು ಸೃಷ್ಟಿ ಆದಾಗಿನಿಂದ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಈ ವರ್ಷದ ಘೋಷ ವಾಕ್ಯ ಜಾಗತೀಕ ಆರೋಗ್ಯಕ್ಕಾಗಿ ಆಯುರ್ವೇದ ನಾವಿನ್ಯತೆಯೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ ಎಂಬುದಾಗಿದ್ದು, ಅದರಂತೆ ಜಿಲ್ಲೆಯಲ್ಲಿನ ಎಲ್ಲ ಆಸ್ಪತ್ರೆ ಹಾಗೂ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಅ. 21 ರಿಂದ ಅ.25 ರವರೆಗೆ ಆಯುರ್ವೇದ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು 12 ರಿಂದ 21 ವಯಸ್ಸಿನ ಹದಿಹರೆಯದ ಹೆಣ್ಣು ಮಕ್ಕಳ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ, ಪರಿಸರ ರಕ್ಷಣೆ ಹಾಗೂ ಸಸ್ಯ ಹಾಗೂ ಪ್ರಾಣಿಗಳ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ. ಮಾನವನ ಸ್ವಾಸ್ಥ್ಯ ರಕ್ಷಣೆ ಹಾಗೂ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ, 45 ವರ್ಷ ಮೇಲ್ಪಟ್ಟ ಮಹಿಳೆಯರ ಯೋಗಕ್ಷೇಮದಲ್ಲಿ ಆಯುರ್ವೇದ ಪಾತ್ರ, ದಿನಾಚರಣೆ ಮಹತ್ವ ಹಾಗೂ ಜಾಗತೀತ ಆರೋಗ್ಯಕ್ಕಾಗಿ ಆಯುರ್ವೇದ ನಾವಿನ್ಯತೆ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವುದು ಎಂಬುದರ ಕುರಿತಾಗಿ ಆಚರಿಸಲಾಗಿರುವ ಬಗ್ಗೆ ವಿವರಿಸಿದರು.

ಈ ವೇಳೆ ಡಾ.ಆಶಾ ನಾಯ್ಕ ಉಪನ್ಯಾಸ ನೀಡಿದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ, ಜಿಪಂ ಸಿಇಒ ಭರತ್.ಎಸ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ. ಎಂ, ಡಾ. ಪಿ.ಎಸ್.ಪಲ್ಲೇದ, ಡಾ. ಕಮಲಾಕರ, ಸಂಜೀವ ನಾರಾಪ್ಪನವರ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಪ್ರಕಾಶ ಮಡಿವಾಳರ ನಿರೂಪಿಸಿದರು.