ಮನೆ ಬಾಡಿಗೆ ಹಣವನ್ನು ಉಳಿಸಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಖರೀದಿಸಿದ್ದ ಮಣ್ಣಿನ ಗೋಡೆಯ ಮುರುಕಲು ಮನೆ ಕುಸಿದು ವರ್ಷಗಳು ಎರಡಾದರೂ ಜಾರಂದಗುಡ್ಡೆ ವನಿತಾ ಶೆಟ್ಟಿ ಅವರ ಹೊಸ ಮನೆಯ ಕನಸು ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ.
ಬಂಟ್ವಾಳ: ಮನೆ ಬಾಡಿಗೆ ಹಣವನ್ನು ಉಳಿಸಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಖರೀದಿಸಿದ್ದ ಮಣ್ಣಿನ ಗೋಡೆಯ ಮುರುಕಲು ಮನೆ ಕುಸಿದು ವರ್ಷಗಳು ಎರಡಾದರೂ ಜಾರಂದಗುಡ್ಡೆ ವನಿತಾ ಶೆಟ್ಟಿ ಅವರ ಹೊಸ ಮನೆಯ ಕನಸು ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ.
ಹೊಸ ಮನೆ ನಿರ್ಮಾಣದ ಉಸ್ತುವಾರಿ ವಹಿಸಿದ್ದ ಬಂಟರ ಸಂಘ ಮನೆಯನ್ನು ಬಹುತೇಕ ಪೂರ್ಣಗೊಳಿಸಿದೆ. ಆದರೆ ಕಾಮಗಾರಿ ಮುಕ್ತಾಯದ ಹಂತದಲ್ಲಿ ದಾನಿಗಳ ನಿರೀಕ್ಷಿತ ಸ್ಪಂದನೆ ಲಭಿಸದೆ ಹೊಸ ಮನೆಯ ಸುತ್ತಲೂ ಗಿಡಗಂಟಿ ಆವರಿಸುತ್ತಿದೆ. ಮನೆ ನಿರ್ಮಾಣದ ಪೂರ್ಣ ಹೊಣೆ ಈಗ ಸಂತ್ರಸ್ತ ಮಹಿಳೆ ವನಿತಾ ಶೆಟ್ಟಿ ಹೆಗಲಿಗೆ ಬಿದ್ದಿದ್ದು, ಮೂವರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಜತೆಗೆ ಮನೆ ನಿರ್ವಹಣೆಯ ಜವಾಬ್ದಾರಿ ಗಾಯದ ಮೇಲೆ ಬರೆ ಎಳೆದಂತಾಗಿದೆ.ಸರಕು ಕಳ್ಳರ ಪಾಲಾಗುವ ಆತಂಕ: ಕಿಟಕಿ, ಬಾಗಿಲು ಜೋಡನೆ, ಸಾರಣೆ, ವಿದ್ಯುತ್ ಸಂಪರ್ಕ ಕೆಲಸಗಳು ಮಾತ್ರವೇ ಬಾಕಿ ಉಳಿದಿವೆ. ಈ ಕಾಮಗಾರಿಗಾಗಿ ಸಹೃದಯ ದಾನಿಗಳು ನೀಡಿದ ಮರಳು, ಸಿಮೆಂಟ್ ದಿನಗಳೆದಂತೆ ನಿಷ್ಪ್ರಯೋಜಕವಾಗುತ್ತಿದೆ. ವನಿತಾ ಶೆಟ್ಟಿಯೇ ಮನೆಗೆ ಆಧಾರವಾಗಿದ್ದು, ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ಮರಳು ಸಹಿತ ಕಾಮಗಾರಿಗೆ ತಂದಿರಿಸಿದ ಸರಕುಗಳು ಕಳ್ಳರ ಪಾಲಾಗುವ ಆತಂಕವೂ ಎದುರಾಗಿದೆ.
ಈ ಬಡ ಕುಟುಂಬಕ್ಕೆ ಧನ ಸಹಾಯ ನೀಡಲಿಚ್ಛಿಸುವ ದಾನಿಗಳು ವನಿತಾ ಶೆಟ್ಟಿ ಅವರ ಗೂಗಲ್ ಪೇ ನಂಬರ್ 70267 75683 ಅನ್ನು ಸಂಪರ್ಕಿಸಬಹುದಾಗಿದೆ.ವಿದ್ಯಾಭ್ಯಾಸ ಮೊಟಕುಗೊಳಿಸುವ ನಿರ್ಧಾರ: ಸಂತ್ರಸ್ತೆ ವನಿತಾ ಶೆಟ್ಟಿ ಅವರ ಮೂವರು ಹೆಣ್ಣುಮಕ್ಕಳು ಪ್ರತಿಭಾವಂತರಾಗಿದ್ದು, ಹಿರಿಯ ಮಗಳು ದ್ವಿತೀಯ ಪಿಯುಸಿಯಲ್ಲಿದ್ದಾಳೆ. ಉನ್ನತ ವ್ಯಾಸಾಂಗ ಮಾಡುವ ಕನಸಿದ್ದರೂ ತಾಯಿಯ ಸಂಕಷ್ಟ, ಮನೆಯ ಆರ್ಥಿಕ ಅನಾನುಕೂಲತೆಯಿಂದಾಗಿ ವಿದ್ಯಾಭ್ಯಾಸವನ್ನು ದ್ವಿತೀಯ ಪಿಯುಸಿಗೆ ಮೊಟಕುಗೊಳಿಸಲು ನಿರ್ಧರಿಸಿದ್ದಾರೆ.ಬೆಚ್ಚಗಿನ ರಾತ್ರಿಗೆ ಸೆಣಬಿನ ಗೋಣಿ!: ಸದ್ಯ ಪಕ್ಕದಲ್ಲೇ ಇರುವ ಪುಟ್ಟ ಗುಡಿಸಲು ಕುಟುಂಬಕ್ಕೆ ಬೆಚ್ಚನೆಯ ಆಸರೆಯಾಗಿದೆ. ಎಡೆಬಿಡದೆ ಮಳೆ ಸುರಿದಾಗ ನೆಲದಲ್ಲಿ ಒರತೆ ಬರುವುದರಿಂದ ದಿನಗಳೆಯುವುದೇ ಕಷ್ಟವಾಗುತ್ತದೆ. ಕಳೆದ ಎರಡು ವರ್ಷಗಳು ಮಳೆಗಾಲದಲ್ಲಿ ಸೆಣಬಿನ ಗೋಣಿ ಚೀಲಗಳನ್ನು ನೆಲಕ್ಕೆ ಹಾಸಿ, ಅದರ ಮೇಲೆ ಚಾಪೆ ಹಾಕಿ ಮೂವರು ಮಕ್ಕಳೊಂದಿಗೆ ರಾತ್ರಿ ಕಳೆದಿದ್ದೇನೆ. ಸಾಧ್ಯವಾದಷ್ಟು ಬೇಗ ಹೊಸ ಮನೆ ಕಾಮಗಾರಿ ಪೂರ್ಣಗೊಂಡರೆ ತನ್ನ ಹಾಗೂ ಮಕ್ಕಳ ಸಂಕಷ್ಟ ದೂರವಾಗುತ್ತದೆ ಎನ್ನುತ್ತಾರೆ ಸಂತ್ರಸ್ತ ಮಹಿಳೆ ವನಿತಾ ಶೆಟ್ಟಿ.ಮೂವರು ಹೆಣ್ಣು ಮಕ್ಕಳಿಗೂ ವಿದ್ಯಾಭ್ಯಾಸ ನೀಡಬೇಕೆಂಬ ಹಂಬಲವಿದೆ. ಆದರೆ ಮನೆ ನಿರ್ಮಾಣದ ಹೊಣೆ ನನ್ನನ್ನು ಮತ್ತಷ್ಟು ಜರ್ಝರಿತವಾಗಿಸಿದೆ. ಸಾಕಷ್ಟು ಮಂದಿ ದಾನಿಗಳು ಕೈಲಾದಷ್ಟು ಸಹಕಾರ ನೀಡಿದ್ದಾರೆ. ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಮನೆ ನಿರ್ಮಾಣದ ಜವಾಬ್ದಾರಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಕನಸಿಗೂ ಅಡಚಣೆಯಾಗಿದೆ. ದೈನಂದಿನ ಜೀವನ ನಿರ್ವಹಣೆಯೇ ಹೋರಾಟದಂತಾಗಿದೆ. - ವನಿತಾ ಶೆಟ್ಟಿ ಜಾರಂದಗುಡ್ಡೆ ಸಂತ್ರಸ್ತ ಮಹಿಳೆ