ಸಾರಾಂಶ
ನೀರಿಲ್ಲಾ... ಏನಿಲ್ಲಾ... ಏನಿಲ್ಲಾ... ಎನ್ನುತ್ತಿರುವ ಜನತೆ । 48 ಗ್ರಾಮಗಳಲ್ಲಿ ಎದುರಾಗಿದೆ ನೀರಿನ ಸಮಸ್ಯೆನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿಬರಗಾಲದ ಎಫೆಕ್ಟ್ ಜಿಲ್ಲೆಯಲ್ಲಿ ಈ ಸಲ ಮುಂಚಿತವಾಗಿ ಕಾಣಿಸಿಕೊಂಡಿದ್ದು, 48 ಗ್ರಾಮಗಳಲ್ಲಿ ಈಗಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಕಳೆದ 25 ದಿನಗಳಿಂದ ಹೊಳೆ ನೀರು ಬಿಟ್ಟಿಲ್ಲ. ಇದರಿಂದ ಜನತೆ ನೀರಿಲ್ಲಾ... ಏನಿಲ್ಲಾ... ಏನಿಲ್ಲಾ... ಎನ್ನುವ ರಾಗದ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತವಾಗಿದ್ದು, ಈ ತಿಂಗಳ ಆರಂಭದಿಂದಲೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮಳೆಯ ಅಭಾವದಿಂದ ಜನವರಿ ತಿಂಗಳಿಂದಲೇ ತುಂಗಭದ್ರಾ, ವರದಾ ನದಿಗಳ ಹರಿವು ನಿಂತಿದೆ. ತುಂಗಭದ್ರಾದಲ್ಲಿ ನೀರಿಲ್ಲದೇ ಹಾವೇರಿ ಹಾಗೂ ರಾಣಿಬೆನ್ನೂರು ನಗರದಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳೆಲ್ಲ ಸ್ಥಗಿತಗೊಂಡಿವೆ. ಇನ್ನೂ ಮೂರು ತಿಂಗಳ ಕಾಲ ಕಡು ಬೇಸಿಗೆಯನ್ನು ಹೇಗೆ ಕಳೆಯಬೇಕು ಎಂಬ ಚಿಂತೆ ಜನರನ್ನು ಕಾಡತೊಡಗಿದೆ.48 ಗ್ರಾಮಗಳಲ್ಲಿ ಸಮಸ್ಯೆ:
ಬರಗಾಲದಿಂದ ಜಲಮೂಲಗಳು ಬತ್ತುತ್ತಿವೆ. ನದಿ, ಕೆರೆಕಟ್ಟೆಗಳಲ್ಲಿ ನೀರು ಬರಿದಾಗಿದೆ. ಅಂತರ್ಜಲ ಮಟ್ಟ ಕುಸಿತದಿಂದ ಬೋರ್‌ವೆಲ್‌ಗಳು ಕೂಡ ಒಣಗುತ್ತಿವೆ. ನದಿ ನೀರಲ್ಲೇ ಅವಲಂಬಿಸಿರುವ ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ತುಟಾಗ್ರತೆ ತೀವ್ರಗೊಂಡಿದೆ. ಜಿಲ್ಲೆಯ 48 ಗ್ರಾಮಗಳಲ್ಲಿ ಈಗಾಗಲೇ ನೀರಿನ ಬವಣೆ ಶುರುವಾಗಿದೆ. ನದಿ ತೀರದ ಅನೇಕ ಗ್ರಾಮಗಳ ಜನರು ವರತೆ ನೀರನ್ನೇ ಅನಿವಾರ್ಯವಾಗಿ ಅವಲಂಬಿಸುತ್ತಿದ್ದಾರೆ.ಖಾಸಗಿ ಬೋರ್‌ವೆಲ್‌ಗೆ ಮೊರೆ:
ನದಿ ಮೂಲಗಳನ್ನೇ ಅವಲಂಬಿಸಿ ಆರಂಭಿಸಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಬಹುತೇಕ ಸ್ಥಗಿತಗೊಂಡಿವೆ. ಇದರಿಂದ ಗ್ರಾಮಗಳಲ್ಲಿ ಆರಂಭವಾಗಿದ್ದ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಆದ್ದರಿಂದ ಅನೇಕ ಗ್ರಾಮ ಪಂಚಾಯಿತಿಗಳು, ನಗರ ಸ್ಥಳೀಯ ಸಂಸ್ಥೆಗಳು ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರು ಪೂರೈಸುತ್ತಿವೆ. ಜಿಲ್ಲೆಯಲ್ಲಿ 90 ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ.ನೀರಿಗಾಗಿ ಪರದಾಟ:
ಜಿಲ್ಲೆಯಲ್ಲಿ ತುಂಗಭದ್ರಾ ನದಿ ನೀರನ್ನು ಅವಲಂಬಿಸಿದ ಹಾವೇರಿ, ರಾಣಿಬೆನ್ನೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕೊಡ ಹಿಡಿದು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಹಾವೇರಿ ನಗರಸಭೆ ವ್ಯಾಪ್ತಿಯಲ್ಲಿ ಕಳೆದ 25 ದಿನಗಳಿಂದ ನದಿ ನೀರು ಪೂರೈಕೆಯಾಗದೇ ಜನರು ಪರಿತಪಿಸುತ್ತಿದ್ದಾರೆ. ಹಾವೇರಿಗೆ ನೀರು ಪೂರೈಸುವ ಕಂಚಾರಗಟ್ಟಿ ಬಳಿ ತುಂಗಭದ್ರಾ ನದಿಯಲ್ಲಿ ನೀರು ಬತ್ತಿದೆ. ಮುಂಚಿತವಾಗಿ ನೀರು ಸಂಗ್ರಹಿಸಿಕೊಳ್ಳದ್ದರಿಂದ ಸಮಸ್ಯೆ ಉಲ್ಬಣವಾಗಿದೆ.ಬೋರ್‌ವೆಲ್‌ಗಳಲ್ಲಿ ನೀರು ಬತ್ತುತ್ತಿದ್ದು, ಗಡುಸು ನೀರನ್ನೇ ಅನಿವಾರ್ಯವಾಗಿ ಬಳಸುತ್ತಿದ್ದಾರೆ. ₹500ರಿಂದ 600ಗೆ ಒಂದು ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ಭದ್ರಾ ಜಲಾಶಯದಿಂದ ಬಿಟ್ಟಿರುವ ನೀರು ನದಿಯ ಕೆಳಭಾಗಕ್ಕೆ ಹರಿದುಬರುತ್ತಿಲ್ಲ. ನದಿಗೆ ಪಂಪ್‌ಸೆಟ್ ಹಚ್ಚಿ ಕೆಲವರು ನೀರು ಬಳಕೆ ಮಾಡುತ್ತಿರುವುದರಿಂದ ಸಮಸ್ಯೆ ಮುಂದುವರಿಯುತ್ತಿದೆ. ಮೈಲಾರ ಜಾತ್ರೆ, ಹಾವನೂರು ಜಾತ್ರೆ ಇನ್ನೇನು ಆರಂಭವಾಗಲಿದ್ದು, ನದಿಯಲ್ಲಿ ನೀರಿಲ್ಲದೇ ತೊಂದರೆಯಾಗುತ್ತಿದೆ.
ಮುಂಜಾಗ್ರತಾ ಕ್ರಮ:ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ 250 ಹಳ್ಳಿಗಳನ್ನು ಗುರುತಿಸಲಾಗಿದೆ. ಸಮಸ್ಯೆ ಎದುರಾದ ಕಡೆಗಳಲ್ಲಿ ಸರ್ಕಾರಿ ಬೋರ್‌ವೆಲ್‌ಗಳಿಂದ ನೀರು ಪೂರೈಸಲಾಗುತ್ತಿದೆ. ಜತೆಗೆ, ಈಗಾಗಲೇ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪೂರೈಸಲಾಗುತ್ತಿದೆ. ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದ್ದು, ಮೈಲಾರದವರೆಗೆ ಬಂದು ತಲುಪಿದೆ. ಒಂದೆರಡು ದಿನಗಳಲ್ಲಿ ಕಂಚಾರಗಟ್ಟಿಗೆ ನೀರು ಬರಲಿದ್ದು, ಹಾವೇರಿಗೆ ನದಿ ನೀರು ಪೂರೈಸಲಾಗುತ್ತದೆ. ಕುಡಿವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ.