ಆದಿವಾಲ ಶತಮಾನದ ಶಾಲೆ: ಸಮಸ್ಯೆಗಳ ಸರಮಾಲೆ

| Published : Jul 24 2024, 12:18 AM IST

ಸಾರಾಂಶ

ಫೆಬ್ರವರಿಗೆ ಶತಮಾನ ತುಂಬಲಿರುವ ಶಾಲೆಯಲ್ಲಿ ಕೊಠಡಿ, ಅಡುಗೆ ಕೋಣೆ ಸೇರಿ ಹಲವು ಸಮಸ್ಯೆ, ಕಾಂಪೌಂಡ್ ಇಲ್ಲದೆ ಇರುವುದರಿಂದ ಸಂಜೆಯಾಗುತ್ತಲೆ ಶಾಲೆ ಆವರಣ ಕುಡುಕರ ಅಡ್ಡೆಯಾಗುತ್ತದೆ

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಬರುವ ಫೆಬ್ರವರಿಗೆ ತಾಲೂಕಿನ ಆದಿವಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂರು ವರ್ಷ ತುಂಬಲಿದೆ. ಆದರೆ ಶಾಲೆ ಮೂಲಭೂತ ಸೌಕರ್ಯ ಕೊರತೆಯಿಂದ ಬಳಲುತ್ತಿದೆ.

ಫೆಬ್ರವರಿ 1925ರಲ್ಲಿ ಶುರುವಾದ ಈ ಶಾಲೆ ಕೊಠಡಿಗಳು, ಅಡುಗೆ ಕೋಣೆ, ಸ್ವಚ್ಛತೆ ಹಾಗೂ ಕಾಂಪೌಂಡ್ ಕೊರತೆ ಅನುಭವಿಸುತ್ತಿದೆ. 1ರಿಂದ 8ನೇ ತರಗತಿವರೆಗೆ 237 ಮಕ್ಕಳಿದ್ದಾರೆ. ಆಟದ ಮೈದಾನವಿದ್ದರೂ ಅದು ಗುಂಡಿ ಗುಂಡಿ. ಅಲ್ಲಲ್ಲಿ ಮುಳ್ಳುಗಿಡ, ಸ್ವಚ್ಛತೆ ಮರೀಚಿಕೆ.

10 ಕೊಠಡಿಗಳಿದ್ದು, ಅವುಗಳಲ್ಲಿ ಮೂರೇ ಮೂರು ಕೊಠಡಿ ಮಾತ್ರ ಹೊಸತು. ಉಳಿದ 7 ಕೊಠಡಿ ಹೆಂಚು ಮತ್ತು ಶೀಟಿನ ಹಳೆಯ ಕೊಠಡಿ. ಬೇಸಿಗೆ ಬಂದರೆ ಶಾಲೆ ಒಳಗೆ ಕೂರುವುದೇ ದುಸ್ತರ.

11 ಜನ ಶಿಕ್ಷಕರಿದ್ದರೂ ಸಹ ಮಕ್ಕಳ ಕಲಿಕೆಗೆ ಪೂರಕ ವಾತಾವರಣವಿಲ್ಲ. ಕಳೆದ ವರ್ಷ ಜೆಎಸ್ ಡಬ್ಲ್ಯೂ ಸ್ಟೀಲ್ ಕಂಪನಿಯವರು ಶಾಲೆ ದತ್ತು ಪಡೆದಿದ್ದು ಅವರು ಶಾಲೆಗೆ 15 ಕಂಪ್ಯೂಟರ್ ಕೊಡಿಸುವ ಭರವಸೆ ನೀಡಿ ಈಗಾಗಲೇ ಸೈನ್ಸ್ ಕಿಟ್, ಲೈಬ್ರರಿ, ಕಂಪ್ಯೂಟರ್ ಬಳಕೆಗೆ ಪರಿಕರ ನೀಡಿದ್ದಾರೆ. ದಲಿತ ಮತ್ತು ಅಲ್ಪ ಸಂಖ್ಯಾತ ಮಕ್ಕಳೇ ಹೆಚ್ಚಿರುವ ಶಾಲೆಯ ಅಡುಗೆ ಕೋಣೆ ನೋಡಿದವರು ದಿಗ್ಬ್ರಮೆಗೊಳಪಡುವುದಂತೂ ದಿಟ. ಕೇವಲ 10×10 ಅಡಿಯಷ್ಟಿರುವ ಅಡುಗೆ ಕೋಣೆಯಲ್ಲಿ ನೂರಾರು ಮಕ್ಕಳಿಗೆ ಅದು ಹೇಗೆ ಅಡುಗೆ ಮಾಡುತ್ತಾರೆ ಎಂಬುದೇ ಆಶ್ಚರ್ಯ.

ಕಳೆದ ತಿಂಗಳಲ್ಲಿ ಕುಕ್ಕರ್ ಸಿಡಿದು ಅಡುಗೆ ಸಹಾಯಕಿ ಹನುಮಕ್ಕ ಎನ್ನುವವರಿಗೆ ಗಾಯಗಳಾಗಿವೆ. ಶಾಲೆ ಕಾಂಪೌಂಡ್ ಬಿದ್ದು ಹೋಗಿದೆ. ಕೆಲ ದಿನ ಹಿಂದೆ ಕಳ್ಳರು ಶಾಲೆ ಆಫೀಸ್ ರೂಮ್ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ. ಶಾಲೆ ರಾತ್ರಿ ಕಿಡಿಗೇಡಿಗಳ, ಕುಡುಕರ ಅಡ್ಡೆಯಾಗುತ್ತದೆ. ಗ್ರಾಮ ಪಂಚಾಯ್ತಿ ವತಿಯಿಂದ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದ್ದು ವರ್ಷವಾಗುತ್ತಾ ಬಂದರು ಸಹ ಬಳಕೆಗೆ ನೀಡಿಲ್ಲ. ಹಳೆಯ ಶೌಚದ ನೀರು ಸಹ ಶಾಲಾ ಆವರಣದಲ್ಲಿಯೇ ಕಾಲುವೆ ಮಾಡಿ ಅದರ ಮೂಲಕ ಬಿಡಲಾಗುತ್ತಿದೆ. ಕೇವಲ 6 ತಿಂಗಳಲ್ಲೇ ಶತಮಾನ ತುಂಬಲಿರುವ ಶಾಲೆಯಲ್ಲಿ ಸಂಭ್ರಮ ಆಚರಿಸಲು ಸಾಧ್ಯವೇ?

ನಮ್ಮಲ್ಲಿ ಉತ್ತಮ ಶಿಕ್ಷಕರಿದ್ದು ಕೊಠಡಿಗಳ ಕೊರತೆ ಎದುರಿಸುತ್ತಿದ್ದೇವೆ. ಕಾಂಪೌಂಡ್ ಇಲ್ಲದ್ದಕ್ಕೆ ಸಂಜೆ ಹೊತ್ತು ಶಾಲಾ ಆವರಣ ಕೆಟ್ಟದ್ದಕ್ಕೆ ಬಳಕೆಯಾಗುತ್ತದೆ ಎಂಬ ಆತಂಕ ನಮ್ಮದು. 600 ಮಕ್ಕಳಿದ್ದ ಶಾಲೆ ನಮ್ಮದು. ಇದೀಗ 237 ಮಕ್ಕಳಿದ್ದಾರೆ. ಕೊಠಡಿ ಕೊರತೆಯಿಂದ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಕೊಠಡಿ, ಕಾಂಪೌoಡ್, ಅಡುಗೆ ಕೋಣೆ ಅವಶ್ಯಕತೆ ಇದೆ.

- ನರಸಿಂಹಮೂರ್ತಿ. ಪ್ರಭಾರ ಮುಖ್ಯ ಶಿಕ್ಷಕ

ಶತಮಾನದ ಸಂಭ್ರಮದಲ್ಲಿರುವ ಶಾಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಬಹುತೇಕ ಕೂಲಿ ಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಕಲಿಕೆಗೆ ಪೂರಕವಾದ ವಾತಾವರಣವಿಲ್ಲ. ಜನಸ್ಪಂದನಾ ಕಾರ್ಯಕ್ರಮದಲ್ಲಿ ಇಲ್ಲಿನ ಸಮಸ್ಯೆಗಳ ಕುರಿತು ಗಮನಸೆಳೆಯಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ಪತ್ರ ಬರೆದು ಗ್ರಾಮ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ನಿರ್ದೇಶಿಸಲು ಕೋರಲಾಗಿದೆ. ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಶಾಲೆಗೆ ವಿಶೇಷ ಅನುದಾನ ನೀಡಿ ಸಹಕರಿಸಬೇಕಿದೆ.

- ಚಮನ್ ಷರೀಫ್. ಶಾಲೆ ಹಳೆಯ ವಿದ್ಯಾರ್ಥಿ