ಸಾರಾಂಶ
ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿ ಆ ದೇಶದ ಕಾರ್ಮಿಕರನ್ನು ಅವಲಂಬಿಸಿದೆ. ಕಾರ್ಮಿಕರಿಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಇಂತಹ ಶ್ರಮ ಜೀವಿಗಳ ಕೆಲಸದ ಕೊಡುಗೆಯನ್ನು ಗೌರವಿಸುವ ಹಾಗೂ ಅವರ ಕಷ್ಟಗಳನ್ನು ಸ್ಮರಿಸಲು ಪ್ರತಿವರ್ಷ ಮೇ 1ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಆಚರಿಸಲಾಗುತ್ತದೆ ಎಂದು ಪಿಡಿಒ ಮಂಜುನಾಥ ಗಣಿ ಹೇಳಿದರು.
ನರಗುಂದ:ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿ ಆ ದೇಶದ ಕಾರ್ಮಿಕರನ್ನು ಅವಲಂಬಿಸಿದೆ. ಕಾರ್ಮಿಕರಿಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಇಂತಹ ಶ್ರಮ ಜೀವಿಗಳ ಕೆಲಸದ ಕೊಡುಗೆಯನ್ನು ಗೌರವಿಸುವ ಹಾಗೂ ಅವರ ಕಷ್ಟಗಳನ್ನು ಸ್ಮರಿಸಲು ಪ್ರತಿವರ್ಷ ಮೇ 1ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಆಚರಿಸಲಾಗುತ್ತದೆ ಎಂದು ಪಿಡಿಒ ಮಂಜುನಾಥ ಗಣಿ ಹೇಳಿದರು. ಅವರು ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ದುಡಿಯೋಣ ಬಾ, ಸ್ತ್ರೀ ಚೇತನ ಅಭಿಯಾನ ಹಾಗೂ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ನರೇಗಾ ಕೂಲಿಕಾರರು ಕೇಕ ಕತ್ತರಿಸಿ ಸಿಹಿ ಹಂಚಿ ದಿನಾಚರಣೆ ಆಚರಣೆ ನಂತರ ಮಾತನಾಡಿ, ಜಗತ್ತಿನಲ್ಲಿ ಅತಿಹೆಚ್ಚು ಕಾರ್ಮಿಕರನ್ನು ಹೊಂದಿದ ಹೆಗ್ಗಳಿಕೆ ಪಡೆದಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ಕೆಲಸ ಕೊಡುವ ಇಲಾಖೆ ಆರ್‌ಡಿಡಿಪಿಆರ್ ಇಲಾಖೆ, ಅದು ನರೇಗಾ ಯೋಜನೆಯಾಗಿದ್ದು, ಕೋಟ್ಯಂತರ ಅಕುಶಲ ಕೂಲಿ ಕಾರ್ಮಿಕರು ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಮಿಕರು ಹಗಲು-ರಾತ್ರಿ, ಬಿಸಿಲು-ಮಳೆ ಎನ್ನದೆ ಸಮರ್ಪಣಾ ಭಾವದಿಂದ ಕಠಿಣ ಶ್ರಮ ವಹಿಸಿ ದುಡಿಯುತ್ತಾರೆ, ಇಂತಹ ದುಡಿಯುವ ಕಾರ್ಮಿಕ ವರ್ಗದವರ ಕೆಲಸ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು. ನರೇಗಾ ಯೋಜನೆಯಡಿ ಮೇ 1ರಿಂದ ದುಡಿಯೋಣ ಬಾ ಅಭಿಯಾನ ಪ್ರಾರಂಭಿಸಲಾಗುತ್ತಿದೆ. ಹಾಗೇ ಮಹಿಳೆಯರ ಅಭ್ಯುದ್ಯಯಕ್ಕಾಗಿ ಸ್ತ್ರಿ ಚೇತನ ಅಭಿಯಾನ ಕೈಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಕುಶಲ ಕಾರ್ಮಿಕರು ಇದರ ಸದುಪಯೋಗ ಪಡೆಯಬೇಕೆಂದು ಸಲಹೆ ನೀಡಿದರು. ಗ್ರಾಮದಲ್ಲಿ ನರೇಗಾ ಯೋಜನೆಯಡಿ 100 ದಿನ ಕೆಲಸ ನೀಡಲಾಗುತ್ತದೆ. ಈಗಾಗಲೇ 13 ದಿನ ಕೆಲಸ ನೀಡಲಾಗಿದೆ. ಮಹಿಳೆ ಬರುವವರೆಗೂ ನಿರಂತರ ಕೆಲಸ ನೀಡಲಾಗುತ್ತದೆ. ಕೂಲಿಕಾರರು ಗ್ರಾಪಂಗೆ ಸಹಕಾರದೊಂದಿಗೆ ಕೆಲಸ ಪಡೆಯಬೇಕು ಎಂದರು. ಇದೇ ಸಂದರ್ಭದಲ್ಲಿ ವಿಶ್ವ ಕಾರ್ಮಿಕ ದಿನದ ಅಂಗವಾಗಿ ಮಹಿಳಾ ಕೂಲಿ ಕಾರ್ಮಿಕರು ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಕಾರ್ಮಿಕ ದಿನ ಆಚರಿಸಿದರು. ಈ ಸಂದರ್ಭದಲ್ಲಿ ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು, ನರೇಗಾ ಹಾಗೂ ಗ್ರಾಪಂ ಸಿಬ್ಬಂದಿಗಳು ಇದ್ದರು.