ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ದಿನಗಳಲ್ಲಿ ವಿದ್ಯಾವಂತರಿಂದಲೇ ಹಿರಿಯ ನಾಗರಿಕರು ವೃದ್ಧಾಶ್ರಮ, ಅನಾಥಾಶ್ರಮ ಸೇರುತ್ತಿದ್ದಾರೆ. ಸಂಸ್ಕಾರವಿಲ್ಲದ ವಿದ್ಯಾವಂತರು ಹಿರಿಯರನ್ನು ಕಡೆಗಣಿಸುತ್ತಿದ್ದಾರೆ. ಅದಕ್ಕಾಗಿ ವಿದ್ಯೆ ಜೊತೆ ಸಂಸ್ಕಾರವನ್ನು ಬೆಳೆಸುವುದು ಅಗತ್ಯ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್ ಅಭಿಪ್ರಾಯಪಟ್ಟರು.ನಗರದಲ್ಲಿರುವ ಹರ್ಡೀಕರ್ ಭವನದಲ್ಲಿ ನೆಲದನಿ ಅಲಯನ್ಸ್ ಮತ್ತು ಕೌಶಲ್ಯ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ವಿದ್ಯೆ ಜೊತೆಯಲ್ಲೇ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಸಂಸ್ಕಾರವಂತರಾದವರು ಎಂದಿಗೂ ಹಿರಿಯರನ್ನು ಕಡೆಗಣಿಸುವುದಿಲ್ಲ. ವಿದ್ಯೆ ಕಲಿಯುವುದು ಎಷ್ಟು ಮುಖ್ಯವೋ ಸಂಸ್ಕಾರವೂ ಮಕ್ಕಳಿಗೆ ಅಷ್ಟೇ ಮುಖ್ಯವಾಗಿದೆ. ಹೆಸರಿಗಷ್ಟೇ ವಿದ್ಯಾವಂತರೆನಿಸಿಕೊಂಡವರು ವೃದ್ಧಾಪ್ಯದಲ್ಲಿ ಅವರನ್ನು ಪೋಷಣೆ ಮಾಡಲಾಗದೆ ಅನಾಥರನ್ನಾಗಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವ್ಯಾಪ್ತಿಗೆ ಸುಮಾರು ೨೯ ಯೋಜನೆಗಳು ಬರುತ್ತವೆ. ಈ ಕಾರ್ಯಕ್ರಮವನ್ನು ಹಿಂದಿನ ವರ್ಷ ಯಶಸ್ವಿಯಾಗಿ ಅನುಷ್ಠಾನಗೊಳಿಸದೆ ಕೋಟ್ಯಂತರ ರು. ಅನುದಾನ ಸರ್ಕಾರಕ್ಕೆ ವಾಪಸಾಗಿತ್ತು. ಆ ಸಮಯದಲ್ಲಿ ಮಂಡ್ಯ ಜಿಲ್ಲೆಯ ಪ್ರಗತಿ ರಾಜ್ಯದಲ್ಲಿ ೨೧ನೇ ಸ್ಥಾನದಲ್ಲಿತ್ತು ಎಂದರು.
ನಾನು ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯನ್ನು ವಿಕಲಚೇತನರು ಮತ್ತು ಹಿರಿಯ ನಾಗರಿಕರ ಪ್ರಗತಿಯಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದ ಒಳಗೆ ತರಲು ಮುಂದಾದೆ. ಎಲ್ಲಾ ಶ್ರಮವನ್ನು ಅಧಿಕಾರಿಗಳು, ಸಿಬ್ಬಂದಿಯ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕೈಗೊಂಡೆ. ೭ ಲಕ್ಷ ರು.ವರೆಗೆ ನೀಡುತ್ತಿದ್ದ ವಿಕಲಚೇತನರ ಮಾಸಾಶನವನ್ನು ೨೮ ಲಕ್ಷಕೇರಿಸಿದೆ. ಪ್ರತಿ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಹಳ್ಳಿ ಹಳ್ಳಿಗಳನ್ನು ಸುತ್ತಿ ಅನುದಾನವನ್ನು ತಲುಪಿಸಿದೆವು. ಆಗ ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಗೆ ಎರಡನೇ ಸ್ಥಾನ ಬಂದಿತು ಎಂದು ವಿವರಿಸಿದರು.೭೫ನೇ ಬಾರಿ ರಕ್ತದಾನ ಮಾಡಿ ಅಭಿನಂದನೆ ಸ್ವೀಕರಿಸಿದ ರಕ್ತದಾನಿ ಎಂ.ಸಿ.ಲಂಕೇಶ್ ಮಾತನಾಡಿ, ನಾನು ೧೮ನೇ ವಯಸ್ಸಿನಿಂದ ರಕ್ತದಾನ ಮಾಡಿಕೊಂಡು ಬರುತ್ತಿದ್ದೇನೆ. ಬೇಡಿಕೆಯಷ್ಟು ರಕ್ತ ಸಂಗ್ರಹವಾಗಬೇಕಾದರೆ ಯುವಕರು ಹೆಚ್ಚು ರಕ್ತದಾನ ಮಾಡಲು ಮುಂದಾಗಬೇಕು. ಹೊಸ ಹೊಸ ರಕ್ತದಾನಿಗಳು ಸೃಷ್ಟಿಯಾಗಬೇಕು ಎಂದರು.
ಇದುವರೆಗೆ ನಾವು ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಮಿಮ್ಸ್ ರಕ್ತನಿಧಿ ಕೇಂದ್ರದ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಿ ರಕ್ತದಾನ ಮಾಡುತ್ತಿದ್ದೇವೆ, ತುರ್ತು ಸಂದರ್ಭಗಳಲ್ಲಿ ಅಗತ್ಯವುಳ್ಳವರಿಗೆ ತಡರಾತ್ರಿಯೂ ರಕ್ತದಾನ ಮಾಡಿದ ನಿದರ್ಶನಗಳಿವೆ. ನಮ್ಮ ಹುಟ್ಟು ಹಬ್ಬ, ಮದುವೆ, ಮಕ್ಕಳ ಹುಟ್ಟುಹಬ್ಬದ ದಿನಗಳಲ್ಲಿ ರಕ್ತದಾನ ಮಾಡುವ ಮೂಲಕ ನಮ್ಮ ಗೆಳೆಯರ ಬಳಗವನ್ನು ರಕ್ತದಾನ ಮಾಡಲು ಪ್ರೇರೇಪಿಸಿದ್ದೇವೆ. ಹೊಸ ಹೊಸ ಆಲೋಚನೆಗಳು, ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಗ್ರಾಮೀಣ ಯುವರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿಸುವ ಪ್ರೇರಣೆ ನೀಡಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ರಾಜ್ಯಪಾಲ ಮಾದೇಗೌಡ, ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ರಕ್ತನಿಧಿ ಕೇಂದ್ರದ ಹಿರಿಯ ಸಿಬ್ಬಂದಿ ಮೊಹಮ್ಮದ್ ರಫಿ, ಕೌಶಲ್ಯ ಅಲಯನ್ಸ್ ಸಂಸ್ಥೆಯ ರಕ್ಷಿತ್‌ರಾಜ್, ನೆಲದನಿ ಅಲಯನ್ಸ್ ಅಧ್ಯಕ್ಷೆ ಮಹಾಲಕ್ಷ್ಮೀ, ಎರಡನೇ ರಾಜ್ಯಪಾಲ ಚಂದ್ರಶೇಖರ್, ಶಿಕ್ಷಕ ಶಶಿಧರ್ ಮತ್ತಿತರರಿದ್ದರು.