ಸಾರಾಂಶ
ಆಮಂತ್ರಣ ಪತ್ರಿಕೆ ಎಡವಟ್ಟು ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಮತ್ತು ತಾಲೂಕು ಆಡಳಿತ ಅಧಿಕಾರಿಗಳು ತರಾತುರಿಯಲ್ಲಿ ಗುರುವಾರ ಮತ್ತೊಂದು ಆಮಂತ್ರಣ ಪತ್ರಿಕೆ ಮುದ್ರಣ ಮಾಡಿಸಿದ್ದಾರೆ.
ಕಲಘಟಗಿ: ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಗುಡ್ ನ್ಯೂಸ್ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಈ ಮೊದಲು ಮುದ್ರಣಗೊಂಡ ಆಮಂತ್ರಣ ಪತ್ರಿಕೆಯಲ್ಲಿ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರ ಹೆಸರು ಕೈಬಿಡಲಾಗಿತ್ತು, ಅದು ಚರ್ಚೆಗೆ ಗ್ರಾಸವಾಗಿತ್ತು.
ಗುರುವಾರ ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಮತ್ತು ತಾಲೂಕು ಆಡಳಿತ ಅಧಿಕಾರಿಗಳು ತರಾತುರಿಯಲ್ಲಿ ಗುರುವಾರ ಮತ್ತೊಂದು ಆಮಂತ್ರಣ ಪತ್ರಿಕೆ ಮುದ್ರಣ ಮಾಡಿಸಿದ್ದಾರೆ. ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿಂದೆ ಮುದ್ರಣ ಮಾಡಿದ ಪತ್ರಿಕೆಯಲ್ಲಿ ತಹಸೀಲ್ದಾರ್ ವೀರೇಶ ಮುಳುಗುಂದಮಠ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಶುರಾಮ ಸಾವಂತ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಅವರ ಹೆಸರನ್ನು ಮಾತ್ರ ಮುದ್ರಣ ಮಾಡಲಾಗಿತ್ತು. ಇದು ಲಾಡ್ ಅಭಿಮಾನಿಗಳಲ್ಲಿ ಬೇಸರಮೂಡಿಸಿತ್ತು.ಈಗ ಹೊಸದಾಗಿ ಮುದ್ರಣಗೊಂಡಿರುವ ಆಮಂತ್ರಣ ಪತ್ರಿಕೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಸಲೀಂ ಅಹ್ಮದ್, ಜೆ.ಎನ್. ಗಣೇಶ್ ಪ್ರದೀಪ್ ಶೆಟ್ಟರ್ ,ಎಸ್ ವಿ ಸಂಕನೂರ, ಸಂಗಮೇಶ್ ಬಬಲೇಶ್ವರ್, ಎಸ್.ಎಸ್. ಕೆಳದಿಮಠ ಸೇರಿದಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರು, ತಾಲೂಕಿನ ನೌಕರರ ಸಂಘಗಳ ಪದಾಧಿಕಾರಿಗಳು ಸೇರಿದಂತೆ ಸರ್ಕಾರದ ನಿಯಮಾವಳಿಯಂತೆ ಗಣ್ಯರ ಹೆಸರು ಮುದ್ರಿಸಲಾಗಿದೆ.
ಶಿಕ್ಷಕರ ದಿನಾಚರಣೆಯ ಒಂದೇ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯು ಎರಡು ಸಲ ಮುದ್ರಣ ಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.