ಇಂದಿನ ವೇಗದ ಬದುಕಿನಲ್ಲಿ, ಮನೆಗಳೇ ತುಂಬಿರುವಾಗಲೂ ಅನೇಕ ಅಜ್ಜ-ಅಜ್ಜಿಯರು ತಮ್ಮ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಕಳೆದುಕೊಂಡ ಭಾವನೆಯೊಂದಿಗೆ ವೃದ್ಧಾಶ್ರಮಗಳಲ್ಲಿ ಜೀವನ ನಡೆಸುತ್ತಿದ್ದಾರೆ
ಕೊಪ್ಪಳ: ಶಾರದಾ ಚಿಣ್ಣರ ಲೋಕದ ಎಲ್ ಕೆಜಿ, ಯುಕೆಜಿ ವಿದ್ಯಾರ್ಥಿಗಳು ಕೊಪ್ಪಳ ನಗರದ ಹೊರ ವಲಯದಲ್ಲಿರುವ ಸುರಭಿ ವೃದ್ಧಾಶ್ರಮದಲ್ಲಿರುವ ಅಜ್ಜ,ಅಜ್ಜಿಯರೊಂದಿಗೆ ಪ್ರೀತಿಯಿಂದ ಕಾಲಕಳೆದರು. ಅವರೊಂದಿಗೆ ಅವರ ಮೊಮ್ಮಕ್ಕಳಂತೆ ಆಟವಾಡಿದರು. ಇದನ್ನು ಕಂಡ ವೃದ್ಧಾಶ್ರಮದಲ್ಲಿದ್ದ ವೃದ್ದರು ಮನಸೋತರು.
ಹೌದು, ನಮ್ಮ ಸುತ್ತಮುತ್ತಲ ಪರಿಸರವನ್ನು ಮಕ್ಕಳಿಗೂ ಪರಿಚಯಿಸಬೇಕು ಎನ್ನುವ ಸದಾಶಯದೊಂದಿಗೆ ಕೊಪ್ಪಳ ನಗರದಲ್ಲಿರುವ ಶ್ರೀಶಾರದಾ ಚಿಣ್ಣರ ಲೋಕ ಶಾಲೆಯ ಎಲ್ ಕೆ ಜಿ, ಯುಕೆಜಿ ಮಕ್ಕಳನ್ನು ಸುರಭಿ ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗಿ ಅಲ್ಲಿಯ ವೃದ್ಧರೊಂದಿಗೆ ಇಡೀ ದಿನ ಕಳೆಯುವಂತೆ ಮಾಡಿ ಮಕ್ಕಳಿಗೆ ಹೊಸ ಅನುಭವ ನೀಡಲಾಯಿತು.ಇಂದಿನ ವೇಗದ ಬದುಕಿನಲ್ಲಿ, ಮನೆಗಳೇ ತುಂಬಿರುವಾಗಲೂ ಅನೇಕ ಅಜ್ಜ-ಅಜ್ಜಿಯರು ತಮ್ಮ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಕಳೆದುಕೊಂಡ ಭಾವನೆಯೊಂದಿಗೆ ವೃದ್ಧಾಶ್ರಮಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ ಒಂಟಿತನ ಅವರ ನೆರಳಾಗಿದೆ. ಈ ಮೌನ ನೋವಿಗೆ ಸ್ಪಂದಿಸಲಾಯಿತು.
ಇದು ಒಂದು ಪ್ರವಾಸವಾಗಿರಲಿಲ್ಲ, ಪಾಠಪುಸ್ತಕದ ಭಾಗವಾಗಿರಲಿಲ್ಲ, ಇದು ಪ್ರೀತಿ ಬದುಕಿ ಕಲಿಸುವ ಪ್ರಯತ್ನವಾಗಿತ್ತು.ಮಕ್ಕಳು ಅಲ್ಲಿ ಯಾರಿಗೂ ನೀವು ಯಾರು? ಎಂದು ಕೇಳಲಿಲ್ಲ. ಅವರು ಕೇಳಿದ್ದು ಕೇವಲ ಅಜ್ಜಾ ನಿಮ್ಮ ಕೈ ಹಿಡಿಯಬಹುದಾ? ಅಜ್ಜಿ ನಿಮ್ಮ ಪಕ್ಕ ಕುಳಿತುಕೊಳ್ಳಬಹುದಾ? ಆ ಕ್ಷಣಗಳಲ್ಲಿ ಮಾತುಗಳಿಗಿಂತ ಮೌನವೇ ಹೆಚ್ಚು ಮಾತನಾಡಿತು. ಅಜ್ಜ-ಅಜ್ಜಿಯರ ಕಣ್ಣಲ್ಲಿ ಮೊಮ್ಮಕ್ಕಳ ನೆನಪುಗಳು ಹರಿದಾಡಿದವು.
ಕೆಲವರು ನಕ್ಕರು, ಕೆಲವರು ಅತ್ತರು, ಆ ಅಳು ಕೂಡ ಸಂತೋಷದ ಅಳುವಾಗಿತ್ತು ಎನ್ನುವುದು ಮಾತ್ರ ಮನೋಜ್ಞವಾಗಿ ಕಂಡಿತು.