ಸಾರಾಂಶ
ಬಳ್ಳಾರಿ: ಮಾ. 17ರಂದು ಜರುಗುವ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಪ್ರಕ್ರಿಯೆ ಚುರುಕುಗೊಂಡಿದ್ದು, ಹಿರಿಯರ ತಂಡ ಹಾಗೂ ಯುವಕ ವೃಂದ ತಂಡಗಳು ಪೈಪೋಟಿಯಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ಯಾವುದೇ ತಂಡದಲ್ಲಿ ಗುರುತಿಸಿಕೊಳ್ಳಲು ಇಚ್ಛಿಸದ ಕೆಲವರು ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದು ಮತದಾನಕ್ಕಾಗಿ ಮೊರೆ ಇಡುತ್ತಿದ್ದಾರೆ.30 ಸ್ಥಾನಗಳಿಗೆ ಜರುಗುವ ಚುನಾವಣೆಗೆ 76 ಜನರು ನಾಮಪತ್ರ ಸಲ್ಲಿಸಿದ್ದಾರೆ. ಫೆ. 26ರ ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶವಿದೆಯಾದರೂ ಈಗಾಗಲೇ ನಾಮಪತ್ರ ಸಲ್ಲಿಸಿರುವ ಬಹುತೇಕರು ಅಖಾಡಕ್ಕೆ ಇಳಿಯುವುದು ಸ್ಪಷ್ಟವಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆ ತೀರಾ ಜಿದ್ದಾಜಿದ್ದಿನಿಂದ ಕೂಡಿರಲಿದೆ. ಅಲ್ಲಂ ಗುರುಬಸವರಾಜ್, ಡಾ. ಅರವಿಂದ ಪಾಟೀಲ್, ಚೋರನೂರು ಕೊಟ್ರಪ್ಪ ಅವರ ನೇತೃತ್ವದ ಹಿರಿಯರ ತಂಡ ಹಾಗೂ ಅಲ್ಲಂ ಪ್ರಮೋದ್, ಕಲ್ಗುಡಿ ಮಂಜುನಾಥ, ಕೇಣಿ ಬಸಪ್ಪ, ಕೆರನಹಳ್ಳಿ ಚಂದ್ರಶೇಖರ್ ನೇತೃತ್ವದ ಯುವಕ ವೃಂದದ ನಡುವೆ ತೀವ್ರ ಪೈಪೋಟಿಯಿದೆ. ವೀರಶೈವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ದರೂರು ಶಾಂತನಗೌಡ, ಅಸುಂಡಿ ನಾಗರಾಜಗೌಡ ಸೇರಿದಂತೆ 15ಕ್ಕೂ ಹೆಚ್ಚು ಜನರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದಾರೆ.
ನಿತ್ಯ ಮನೆಮನೆ ಸುತ್ತಾಟ: ಎರಡು ತಂಡಗಳು ಹಾಗೂ ಪಕ್ಷೇತರರು ಈಗಾಗಲೇ ಮತದಾರರ ಭೇಟಿಗೆ ನಿತ್ಯ ಮನೆಮನೆ ಸುತ್ತಾಟ ಆರಂಭಿಸಿದ್ದಾರೆ. ವೀವಿ ಸಂಘದ ಚುನಾವಣೆಯಲ್ಲಿ ನಾವು ಏನು ಕೆಲಸ ಮಾಡುತ್ತೇವೆ. ಈ ಹಿಂದಿನ ಅಧಿಕಾರ ಅವಧಿಯಲ್ಲಿ ಎಷ್ಟು ಕೆಲಸ ಮಾಡಿದ್ದೇವೆ ಎಂಬುದು ಮುಖ್ಯವಾಗುವುದೇ ಇಲ್ಲ. ವೀರಶೈವ ಲಿಂಗಾಯತ ಸಮಾಜದ ಒಳ ಪಂಗಡಗಳು ಹಾಗೂ ಸಂಘದ ಸದಸ್ಯತ್ವದ ಪ್ರಾಬಲ್ಯವೇ ಹೆಚ್ಚು ಕೆಲಸ ಮಾಡುತ್ತದೆ.ವೀವಿ ಸಂಘದಲ್ಲಿ 2438 ಅಜೀವ ಸದಸ್ಯರಿದ್ದು, ಈ ಪೈಕಿ 212 ಮಹಿಳಾ ಸದಸ್ಯರಿದ್ದಾರೆ. ಮಾ. 17ರಂದು ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತದಾನ ನಡೆಯಲಿದೆ. ಮಾ. 18ರಂದು ಬೆಳಗ್ಗೆಯಿಂದ ಮತಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.
ನಾಮಪತ್ರ ಪರಿಶೀಲನೆ: ವೀವಿ ಸಂಘದ ಕಾರ್ಯಕಾರಿ ಸಮಿತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ನಾಮಪತ್ರ ಪರಿಶೀಲನಾ ಕಾರ್ಯ ವೀವಿ ಸಂಘದ ಕಚೇರಿಯಲ್ಲಿ ಶನಿವಾರ ಜರುಗಿತು. ಚುನಾವಣೆ ಅಧಿಕಾರಿಗಳಾದ ಎನ್.ಪಿ. ಲಿಂಗನಗೌಡ, ಡಾ. ತೇಜಸ್‌ಮೂರ್ತಿ, ಡಾ. ವಿ.ಎಸ್. ಪ್ರಭಯ್ಯ ಅವರು ನಾಮಪತ್ರಗಳ ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದರು.