ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಫೆ. 2,3 ಮತ್ತು 4ರಂದು ನಡೆಯಲಿರುವ ವಿಶ್ವವಿಖ್ಯಾತ ಹಂಪಿ ಉತ್ಸವದ ಲಾಂಛನ ಎಲ್ಲರ ಗಮನ ಸೆಳೆಯುತ್ತಿದ್ದು, ಸ್ವತಃ ನಾಡದೊರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಲಾಂಛನವನ್ನು ಮೆಚ್ಚಿಕೊಂಡಿದ್ದಾರೆ.ವಿಜಯನಗರ ಸಾಮ್ರಾಜ್ಯದ ಗತವೈಭವದ ಕಲೆ, ಸಾಹಿತ್ಯ, ಸಂಸ್ಕೃತಿ, ವಾಸ್ತುಶಿಲ್ಪವನ್ನು ಇಡೀ ಜಗತ್ತಿಗೆ ಉಣಬಡಿಸುವ ಹಂಪಿ ಉತ್ಸವದ ಲಾಂಛನವನ್ನು ಹೊಸಪೇಟೆ ಏಳುಕೇರಿ ಹುಡುಗ ದೀಪಕ್ ಬಾಣದ ತಮ್ಮ ಕುಂಚದಲ್ಲಿ ಲಾಂಛನ ಅರಳಿಸಿದ್ದಾರೆ.
ಈ ಬಾರಿ ಹಂಪಿ ಉತ್ಸವದ ಲಾಂಛನ ರಚಿಸಲು ವಿಜಯನಗರ ಜಿಲ್ಲಾಡಳಿತ ಕಲಾವಿದರಿಂದ ಲಾಂಛನದ ಚಿತ್ತಾರಗಳನ್ನು ಆಹ್ವಾನಿಸಿತ್ತು. ನಾಲ್ವರು ಕಲಾವಿದರು ಹಂಪಿ ಉತ್ಸವ- 2024ಕ್ಕಾಗಿ ತಮ್ಮದೇ ಶೈಲಿಯ ಲಾಂಛನಗಳನ್ನು ಬಿಡಿಸಿ ಕಳುಹಿಸಿದ್ದರು. ಈ ಪೈಕಿ ದೀಪಕ್ ಬಾಣದ ಅರಳಿಸಿದ ಲಾಂಛನ ಆಯ್ಕೆಗೊಂಡಿದೆ.ಲಾಂಛನದ ವಿಶೇಷತೆ: ವಿಜಯನಗರ ಸಾಮ್ರಾಜ್ಯದ ವರಾಹ ಲಾಂಛನವನ್ನು ಉತ್ಸವದ ಲೋಗೋ ಒಳಗೊಂಡಿದೆ. ವಿಜಯನಗರ ಸಾಮ್ರಾಜ್ಯ ಕಲೆಯ ಬೀಡಾಗಿದ್ದು, ಇದರ ವಾಸ್ತುಶಿಲ್ಪದ ಪ್ರತೀಕವೆಂಬಂತೆ ಕಲ್ಲಿನತೇರು, ಉಗ್ರ ನರಸಿಂಹ ಸ್ಮಾರಕಗಳನ್ನು ಲಾಂಛನದಲ್ಲಿ ಅರಳಿಸಲಾಗಿದೆ. ಈ ನೆಲ ಪ್ರಕೃತಿಯ ಬೀಡಾಗಿದೆ ಎಂಬುದರ ಪ್ರತೀಕವಾಗಿ ಸುತ್ತ ಬೆಟ್ಟ, ಗುಡ್ಡ, ಕೋಟೆಗಳನ್ನು ಬಿಡಿಸಲಾಗಿದೆ. ವಿದ್ಯಾರಣ್ಯರು ಹಕ್ಕ-ಬುಕ್ಕರಿಗೆ ಸಾಮ್ರಾಜ್ಯ ಸ್ಥಾಪನೆಗೆ ಈ ನೆಲ ಸೂಕ್ತ ಸ್ಥಳವಾಗಿದೆ ಎಂಬುದನ್ನು ಸೂಚಿಸಿದ್ದರು. ಅದರ ದ್ಯೋತಕವಾಗಿ ಕಲ್ಲಿನ ಬೆಟ್ಟ- ಗುಡ್ಡಗಳನ್ನು ಲೋಗೋದಲ್ಲಿ ಅರಳಿಸಲಾಗಿದೆ. ಶ್ರೀಗಂಧದ ನಾಡು ಎಂಬುದನ್ನು ತೋರ್ಪಡಿಸಲು ಲೋಗೋಗೆ ಶ್ರೀಗಂಧದ ಬಣ್ಣವನ್ನೇ ಲೇಪಿಸಲಾಗಿದೆ. ಹಾಗಾಗಿ ಈ ಲೋಗೋ ವಿಜಯನಗರ ಸಾಮ್ರಾಜ್ಯ ಹಾಗೂ ಕನ್ನಡ ನಾಡಿನ ಪ್ರತೀಕವಾಗಿ ಅರಳಿದೆ. ಇವರು ಕಲಾವಿದ ದೀಪಕ್: ಧಾರವಾಡದ ಹಿರಿಯ ಕಲಾವಿದ ಬಿ. ಮಾರುತಿ ಅವರ ಗರಡಿಯಲ್ಲಿ ಬೆಳೆದಿರುವ ನಗರದ ದೀಪಕ್ ಬಾಣದ ಸದ್ದಿಲ್ಲದೇ ಹೆಸರು ಮಾಡುತ್ತಿರುವ ಕಲಾವಿದ. ಕಳೆದ ವರ್ಷ ಕೂಡ ಹಂಪಿ ಉತ್ಸವದ ಲೋಗೋ ಅರಳಿಸಿದ್ದರು. ಬಳ್ಳಾರಿ ಉತ್ಸವ ಹಾಗೂ ಕಂಪ್ಲಿ ಉತ್ಸವದ ಲಾಂಛನಗಳನ್ನು ಕೂಡ ಬಿಡಿಸಿದ್ದರು.
ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಬಿಎಫ್ಎ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎಫ್ಎ ಸ್ನಾತಕೋತ್ತರ ಪದವಿ ಪಡೆದು ವಿವಿಧ ಮಾಧ್ಯಮದಲ್ಲಿ ಹಲವಾರು ಕಲಾಕೃತಿಗಳನ್ನು ರಚಿಸುತ್ತಾರೆ. ಸ್ನಾತಕೋತ್ತರ ಪದವಿಗೆ ಹಂಪಿಯ ಸ್ಮಾರಕಗಳ ಕಲೆಯನ್ನೇ ಅರಳಿಸಿ ಪ್ರಬಂಧ ಮಂಡಿಸಿದ್ದಾರೆ.ದೀಪಕ್ ಅವರು, ಭಾವಚಿತ್ರ, ಕ್ರಿಯೇಟಿವ್ ಲ್ಯಾಂಡಸ್ಕೇಪ್, ಅಮೂರ್ತ ಕಲೆಗಳಂತಹ ಕಲಾಪ್ರಕಾರಗಳಲ್ಲಿ ಕಲಾ ಕೃತಿಗಳನ್ನು ರಚಿಸಿ ತನ್ನ ಪ್ರತಿಭೆ ಒರೆಗೆಹಚ್ಚಿದ ಯುವ ಪ್ರತಿಭೆಯಾಗಿದ್ದಾರೆ. ಕಂಪ್ಯೂಟರ್ ಗ್ರಾಫಿಕ್ಸ್ ಚಿತ್ರಗಳನ್ನೂ ಬಿಡಿಸುವಲ್ಲಿ ಹಾಗೂ ಅನೇಕ ಸಾಹಿತಿಗಳ ಕೃತಿಗಳಿಗೆ ತಮ್ಮದೆ ಆದ ವಿಭಿನ್ನ ಶೈಲಿಯ ಮುಖಪುಟ ವಿನ್ಯಾಸಗಳನ್ನು ರಚಿಸಿ ಸೈ ಎನಿಸಿಕೊಂಡಿದ್ದಾರೆ.ಗತವೈವಭ: ಹಂಪಿ ಪರಿಸರ ನನಗೆ ಬಲು ಇಷ್ಟ. ನಾನು ಹುಟ್ಟಿ ಬೆಳೆದಿರುವುದೇ ಆ ಪರಿಸರದಲ್ಲಿ. ಹಾಗಾಗಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧ ಕೂಡ ಹಂಪಿ ಪರಿಸರದ ಮೇಲೆಯೇ ಮಂಡಿಸಿರುವೆ. ಹಂಪಿ ಉತ್ಸವದ ಲಾಂಛನವನ್ನು ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಮಾದರಿಯಲ್ಲಿ ಬಿಡಿಸಿರುವೆ ಎಂದರು ಕಲಾವಿದ ದೀಪಕ್ ಬಾಣದ.