ಸಾರಾಂಶ
ಪಾಪು ಅಭಿಮಾನಿ ಬಳಗದಲ್ಲಿ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಹತ್ತಾರು ವರ್ಷಗಳ ಕಾಲ ಶ್ರಮ ವಹಿಸಿದ, ಅನುಭವವುಳ್ಳವರು ಇದ್ದಾರೆ.
ಧಾರವಾಡ: ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ ಆಶಯದಂತೆ ಕಾರ್ಯ ಮಾಡಲು ಪಾಪು ಅಭಿಮಾನಿ ಬಳಗವು ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ಎದುರಿಸುತ್ತಿದ್ದು, ಇಡೀ ತಂಡವೇ ಗೆಲುವಿನ ಭರವಸೆ ಹೊಂದಿದೆ ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಹೇಳಿದರು.
ಚುನಾವಣೆ ಹಿನ್ನೆಲೆಯಲ್ಲಿ ಹು-ಧಾ ಅವಳಿ ನಗರದಲ್ಲಿ ಪ್ರಚಾರ ನಡೆಸಿದ ಅವರು, ಪಾಪು ಅಭಿಮಾನಿ ಬಳಗದಲ್ಲಿ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಹತ್ತಾರು ವರ್ಷಗಳ ಕಾಲ ಶ್ರಮ ವಹಿಸಿದ, ಅನುಭವವುಳ್ಳವರು ಇದ್ದಾರೆ. ತಂಡವನ್ನು ಬೆಂಬಲಿಸಿದರೆ ಸಂಘವನ್ನು ಮತ್ತಷ್ಟು ಬಲಪಡಿಸುವ ಕಾರ್ಯಕ್ರಮ ಆಯೋಜಿಸಲಿದ್ದೇವೆ ಎಂದರು.ಸಹ ಕಾರ್ಯದರ್ಶಿ ಅಭ್ಯರ್ಥಿ ಮಾರ್ತಾಂಡಪ್ಪ ಕತ್ತಿ ಮಾತನಾಡಿ, ಸಂಘವು ಯುವಕರನ್ನು ಇನ್ನೂ ಸೆಳೆಯುವ ಕಾರ್ಯ ಮಾಡಬೇಕಿದ್ದು ನಮ್ಮ ತಂಡ ಯುವಕರಿಗೆ ಹೆಚ್ಚು ಅವಕಾಶ ಸಿಗುವ ಕಾರ್ಯಕ್ರಮ ಹಾಕಿಕೊಳ್ಳಲಿದೆ. ಜತೆಗೆ ಹೆಚ್ಚಿನ ಅನುದಾನ ತರುವ ಮೂಲಕ ಕನ್ನಡ ಭಾಷೆ, ನಾಡು-ನುಡಿ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಅನುತ್ತೀರ್ಣರಾಗುತ್ತಿರುವುದು ಖೇದಕರ ಸಂಗತಿ. ಈ ವಿಷಯದ ಬಗ್ಗೆ ಗಂಭೀರ ಚಿಂತನೆಗಳು ನಡೆಯಬೇಕಿದೆ. ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ತಾವು ಗಮನ ಸೆಳೆಯಲಿದ್ದೇವೆ ಎಂದರು.
ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿ ಪ್ರಕಾಶ ಉಡಿಕೇರಿ, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ಶರಣಪ್ಪ ಕೊಟಗಿ, ಕಾರ್ಯಾಧ್ಯಕ್ಷ ಸ್ಥಾನದ ಮನೋಜ ಪಾಟೀಲ, ಕೋಶಾಧ್ಯಕ್ಷ ಸ್ಥಾನದ ವೀರಣ್ಣ ಯಳಲ್ಲಿ, ಕಾಕಾ ಸಮಿತಿ ಅಭ್ಯರ್ಥಿಗಳಾದ ಡಾ. ರತ್ನಾ ಐರಸಂಗ, ಡಾ. ವಿಶ್ವನಾಥ ಚಿಂತಾಮಣಿ, ವಿಶ್ವನಾಥ ಅಮರಶೆಟ್ಟಿ, ಪ್ರೊ. ಹರ್ಷ ಡಂಬಳ, ಪ್ರಭು ಹಂಚಿನಾಳ, ದಾನಪ್ಪಗೌಡರ ಎಸ್.ಎಂ., ಪ್ರಭು ಕುಂದರಗಿ, ಸಂತೋಷ ಪಟ್ಟಣಶೆಟ್ಟಿ, ಆನಂದ ಏಣಗಿ ಇದ್ದರು.